ತಿರುಬೋಕಿಯ ಸ್ವಗತ ೨



ನಂದೊಂದು ದುರಂತ ಬದುಕು. ಈ ದುರಂತ ನಾಟಕ ಅಂತಾರಲ್ಲ ಹಾಗೆ. ಏನೋ ಸಂಭವಿಸಿಬಿಟ್ಟು ದುರಂತವಾಗಿಹೋಗಿದೆ ಅಂತ ಭಾವಿಸಬೇಡಿ. ಏನೂ ಸಂಭವಿಸಲೇ ಇಲ್ಲ ಅದಕ್ಕೇ ದೊಡ್ಡ ದುರಂತ ಅಂತ ಅಂದದ್ದು. ನನ್ನ ಬದುಕಲ್ಲಿ ಕಥೇನೇ ಇಲ್ಲ ಕಣ್ರೀ. ಕಥೇ ಇಲ್ಲದ ಬದುಕೂ ಒಂದು ಬದುಕೇನಾ? ಛೇ, ನನ್ನ ಬದುಕಲ್ಲಿ ಯಾಕೋ ಕಥೇನೇ ಸಂಭವಿಸಲಿಲ್ಲ. ಹಾಗಾಗಿ ನನ್ನ ಬದುಕು ದುರಂತವಾಗಿ ಹೋಯಿತು. ಅಷ್ಟೇ ಆಗಿದ್ದಿದ್ದರೆ ಪರವಾಗಿಲ್ಲ, ಒಂದೇ ಒಂದು ತತ್ವ, ಸಿದ್ದಾಂತ, ತಾತ್ವಿಕಥೆ ಏನೂ ಇಲ್ಲದೆ ಹಾಳು ಬಿದ್ದೋಯ್ತು. ಆದರೆ ಈಗ, ತಿರುಬೋಕಿ ಆದ ನಂತರ ಅನ್ನಿಸ್ತಿದೆ, ಬದುಕಿಗ್ಯಾಕೆ ಕಥೆ, ಅದಕ್ಯಾಕೆ ತತ್ವ.? ಒಂದು ತತ್ವವನ್ನಿಟ್ಟು ಬದುಕನ್ಯಾಕೆ ಕಥೆಯಾಗಿಸಬೇಕು ಅಂತ? ಇರಲಿ ಈ ಎಲ್ಲಾ ದ್ವಂದ್ವಗಳ ನಡುವೆಯೂ ಬದುಕು ಅದ್ಭುತ ಹಾಗು ಅಷ್ಟೇ ನಿಗೂಢ.

ನಮ್ಮೂರ ಕಂಬಾಲರಾಯನ ಒಂಟಿ ಕಲ್ಲಿನ ಗುಡ್ಡದ ಮೇಲೆ ಯಾರೋ ಕಟ್ಟಿದ ನಾಲ್ಕು ಕಂಬಗಳಿವೆ, ಅವುಗಳ ಪಕ್ಕ ಒಂದಿಷ್ಟು ಮಣ್ಣು, ಒಂದಿಷ್ಟು ಕಲ್ಲು. ಅಲ್ಲಿ ದೇವರು ತುಂಬಾ ಸುಲಭದಲ್ಲಿ ಸಿಕ್ಕಿ ಬಿಡುತ್ತಾನೆ. ಅಲ್ಲೇ ಇರೋ ಮೂರು ಕಲ್ಲನ್ನ ತೊಳೆದು ಅದಕ್ಕೆ ಹರಿಸಿನ ಕುಂಕುಮ ಹಚ್ಚಿಬಿಟ್ರೆ ಮುಗೀತು ಅದೇ ದೇವ್ರು. ನಮಸ್ಕಾರ ಮಾಡಿ, ದೇವ್ರೆ ಕಾಪಾಡಪ್ಪ ಅಂದರೆ ಮುಗೀತು. ಆಮೇಲೆ ಅದೇ ಕಲ್ಲನ್ನ ಬಿಸಾಕಿದ್ರೂ, ಅದನ್ನ ತುಳ್ಕೊಂಡು ಹೋದ್ರೂ ಯಾರೂ ಕೇಳೋಲ್ಲ. ಅಂತಾ ದೇವ್ರ ಜೊತೆ ಒಬ್ಬ ಮನುಷ್ಯ ಇದ್ದ. ನಾನು ಆತನ್ನ ಏನೋ ಒಂದು ಹೆಸರಲ್ಲಿ ಕರೀತಿದ್ದೆ. ಒಂದು ದಿನ ಆಸಾಮಿ ಕರೆದುಬಿಟ್ಟು, ಮಗಾ ನಂಗೊಂದು ಕಥೆ ಬರೆದುಕೊಡೋ ಅಂತ ಕೇಳಿದ. ಓದಿದ ಜಂಬದಿಂದ, ಹೇಳು ನಿನ್ನ ಕಥೇನ, ನಾ ಬರೀತೀನಿ ಅಂತಂದೆ. ಅವ್ನಂದ, ಆರಂಭ ಮತ್ತು ಅಂತ್ಯ ಎರೆಡೂ ಇಲ್ಲದೇ ಇರೋದೇ ಕಥೆ, ಅಂತ. ಮತ್ತೇ ನಾನು ಕಥೆ ಬರೀಲೇ ಇಲ್ಲ. ಆ ಮನುಷ್ಯ ಒಂದು ದಿನ ಸತ್ತು ಹೋದ. ಒಂದು ಸಾಲಲ್ಲಿ ಅವನ ಕಥೆ ಬರೆದುಬಿಟ್ಟೆ. ಅವನು ಹುಟ್ಟಿದ, ಅವನು ಸತ್ತ. ನಾಲ್ಕು ಪದ, ಒಂದೇ ಸಾಲು. ಕಥೆ ಮುಗೀತು ಅಂತೇಳಿ, ಅಲ್ಲೇ ಬಿದ್ದಿದ್ದ ಕಲ್ಲನ್ನ ತೆಗ್ದುಕೊಂಡು ನಮಸ್ಕಾರ ಮಾಡಿ ಮತ್ತೇ ದೂರ ಎಸೆದುಬಿಟ್ಟೆ, ಅರೆ, ಹಾಗಂತ ಇನ್ನೊಂದು ಕಥೆ ಬರೆದು ಬಿಟ್ಟೆ. ಅದು ಹುಟ್ಟಿತು, ಅದು ಸತ್ತಿತು. ಒಂದೇ ಸಾಲು.! ಅಷ್ಟೇಯ!!!

ರಾಜಪ್ಪ ಭಟ್ಟರ ಮನೇಲಿ ಮದುವೇ ಸಂಭ್ರಮ ಅಂತ ಇಂದು ಊಟಕ್ಕೆ ಅಲ್ಲಿಗೇ ಕರೆದಿದ್ದರು. ಗುಡಿಸಲು. ಎಲ್ಲವೂ ನೆನೆಪಾಗತೊಡಗಿತು. ನಾನು ಇಲ್ಲೇ ಅಲ್ಲವ ಇದ್ದದ್ದು ಅಂತ. ಇದೇ ಗುಡಿಸಲಿನಲ್ಲಿ ಅಲ್ಲವ, ಆ ರಾತ್ರಿ ನನ್ನನ್ನ ಮಾಂಸದ ಮುದ್ದೆಯಾಗಿ ಸೂಲಗಿತ್ತಿ ಹೊರಗೆ ತೆಗೆದು ಹಾಕಿದ್ದು . ಇದೇ ಮಣ್ಣ ನೆಲದಲ್ಲಿ ಬುಡ್ಡಿ ಇಟ್ಟುಕೊಂಡು ಸೀಮೇ ಎಣ್ಣೆ ವಾಸನೆ ಕುಡಿದು ಓದಿದ್ದು. ಈ ಗುಡಿಸಲು ಸಾಮಾನ್ಯವಲ್ಲ. ಸಂಜೆಗಳಲ್ಲಿ ಇದೇ ಗುಡಿಸಲಿನಿಂದ ನಾನು ಓಡುತ್ತಿದ್ದದ್ದು ಆಟದ ಮೈದಾನಕ್ಕಲ್ಲ, ಸ್ಮಾಶಾನಕ್ಕೆ, ಅದರ ದಾರಿಗಳಿಗೆ. ಅದೇನು ಹುಚ್ಚು ಆಗ, ಸ್ಮಾಶಾಣಕ್ಕೆ ಹೋಗಿ ಯಾವುದೋ ಗೋರಿಯಮೇಲೆ ಮಲಗೋದು. ಅದೆಂತಹ ನಿದ್ರೆ ಬರುತ್ತಿತ್ತು. ಅದೇ ಗೋರಿಗಳ ಮೇಲೆ ಕೂತು ಅರಬಿಂದೋರವರ on death ಹಾಗು Life Devine ಓದಿದ್ದು. ಯಾರೋ ಶವವನ್ನ ಸುಡುತ್ತಿರುವುದನ್ನ ನೋಡುತ್ತಲೇ ಗೀತೆ, ಉಪನಿಷತ್ತು, ಅರಬಿಂದೋ, ರಮಣ, ರಾಮಕೃಷ್ಣ ರನ್ನ ಓದಿದ್ದು. ಜಿಡ್ಡುವಿನ ಒಂದು ಪುಸ್ತಕಕ್ಕಾಗಿ ಅದೆಷ್ಟು ಪರದಾಡಿದ್ದು, ಎಲ್ಲರನ್ನೂ ಓದಿದ್ದು ಇಲ್ಲೇ ಅಲ್ಲವ. ಇದೇ ಹಳ್ಳಿಯ ಗುಡಿಸಲು ಮತ್ತು ಸ್ಮಾಶಾನ ಸೇರುವ ದಾರಿಗಳಲ್ಲಿ. ಊರಮುಂದಿನ ಬೊಮ್ಮಪ್ಪನ ಗುಡಿಯಲ್ಲಿ ರಾಮನವಮಿ ಪಾನಕ ಮಜ್ಜಿಗೆಯನ್ನ ಕುಡಿದು ಅದೇ ರಾತ್ರಿ ಅಡಿಗರ ರಾಮನವಮಿಯನ್ನ ಓದಿದ್ದು ಇದೇ ಗುಡಿಸಲಿನ ಸೀಮೆ ಎಣ್ಣೆಯ ಬುಡ್ಡಿಯಲ್ಲೇ. ಯಾವುದರ ಪ್ರತೀಕವಾಗಿ ಇಂದು ನನ್ನ ಕಣ್ಣೆದುರಿಗೆ ಆ ಗುಡಿಸಲು ನಿಂತಿತ್ತು?

ಗುಡಿಸಲು ಸ್ವಲ್ಪ ಬದಲಾಗಿತ್ತು. TV ಬಂದಿದೆ. ಅದೇ ಹಳೇಕಾಲದ ಶ್ರೀರಾಮರ ಪಟ್ಟಾಭಿಷೇಕದ ಚಿತ್ರ. ಮದುವೆಯ ಸಂಭ್ರಮವಾದದ್ದರಿಂದ ಎಲ್ಲವೂ ಹೊಸದರಂತೆ ಕಾಣುತ್ತಿತ್ತು. ಹುಡುಗಿ ಲಕ್ಷಣವಾಗಿದ್ದಾಳೆ. ಒಳ್ಳೆಯ ಮನೆಗೆ ಸೇರಿ ಸುಖವಾಗಿರಲಿ. ಈಗ ತಾನೆ ಹದಿನೆಂಟು ತುಂಬಿದೆ. ಹೆಚ್ಚು ಓದಿಲ್ಲ. ಅವಳನ್ನೇ ಗಮನಿಸುತ್ತಿದ್ದೆ. ಎಲ್ಲರೂ ಅವರವರ ಕೆಲಸಗಳಲ್ಲಿ ನಿರತರಾಗಿದ್ದರು. ಮದುಮಗಳಾದದ್ದರಿಂದ ಏನೂ ಮಾಡಬಾರದು ಅಂತೇಳಿ ಅವಳನ್ನ ಒಂದು ರೇಶ್ಮೆ ಸೀರೆ ಉಡಿಸಿ, ಒಂದು ಚೇರಾಕಿ ಕೂರಿಸಿದ್ದರು. ಕೈಯಲ್ಲಿದ್ದ ವಾಚನ್ನ ಬಿಚ್ಚಿ ಹಾಗೇ ಹೀಗೆ ತಿರುಗಿಸಿ ತಿರುಗಿಸಿ ನೋಡುತ್ತಿದ್ದಳು. ಬಹುಶಃ ಏನೋ ರಿಪೇರಿಯಿರಬೇಕು ನೋಡಿ ಸರಿಮಾಡಿಕೊಡುವ ಅಂತೇಳಿ ಹತ್ತಿರಕ್ಕೆ ಹೋಗಿ ಕೇಳಿದೆ
"ವಾಚು, ಏನಾಗಿದೆಯಮ್ಮ"
"ಇಲ್ಲ ಅಣ್ಣ, ವಾಚು ಚೆನ್ನಾಗಿಯೇ ಇದೆ"
"ಮತ್ತೆ ಯಾಕೆ ಹಾಗೆ ಅದನ್ನೆ ತಿರುಗಿಸಿ ತಿರುಗಿಸಿ ನೋಡುತ್ತಾ ಇದ್ದೀಯ"
"ಅಣ್ಣ ನಂಗೆ ವಾಚಲ್ಲಿ ಸಮಯ ನೋಡೋದು ಬರೋದಿಲ್ಲ, ನಂಗೆ ಸಮಯ ನೋಡೋದು ಯಾರೂ ಹೇಳೇ ಕೊಟ್ಟಿಲ್ಲ.
ಈ ವಾಚನ್ನ ಹುಡುಗ ತಂದು ಕೊಟ್ಟಿದ್ದು. ಅದಕ್ಕೆ ಅಮ್ಮ ಹೇಳಿದ್ರು ಇದನ್ನ ಕಟ್ಟಿಕೋಬೇಕು ಅಂತ. ಅದಕ್ಕೆ ಕಟ್ಟಿಕೊಂಡು ಕೂತೆ.
ಏನೂ ಮಾಡೋಕೆ ಕೆಲ್ಸ ಇರಲಿಲ್ಲವಲ್ಲ, ಅದಕ್ಕೆ ಈ ವಾಚಿನೊಂದಿಗೆ ಆಟವಾಡುತ್ತಾ ಇದ್ದೆ. ಅಷ್ಟೆ"
ನಾನು ಮರು ಮಾತಾಡದೆ ಸುಮ್ಮನೆ ನಡೆದು ಬಿಟ್ಟೆ. ಆ ಹುಡುಗಿ ತಾನು ತೊಟ್ಟಿದ್ದ ರೇಶ್ಮೆ ಸೀರೆಯನ್ನ ಬಹು ಮೆಚ್ಚಿಗೆಯಿಂದ ನೋಡುತ್ತ, ತನ್ನ ಕೈಯಲ್ಲಿದ್ದ ಗೋರಂಟಿಯನ್ನ ಮತ್ತೆ ಮತ್ತೆ ಮೂಸುತ್ತಾ, ತಲೆಯಿಂದ ಓಲೆಯನ್ನಲ್ಲಾಡಿಸುತ್ತಾ ಖುಷಿಪಡುತ್ತಿದ್ದಳು.
ಸ್ವಲ್ಪ ಹೊತ್ತಾದ ಮೇಲೆ, ಒಳಗೆ ಆ ಮದುಮಗಳಿಗೂ ಅವಳ ತಾಯಿಗೂ ದೊಡ್ಡ ಜಗಳವಾಗುತ್ತಿತ್ತು. ತಾನು ಆಟವಾಡುತ್ತಿದ್ದ ಪ್ಲಾಸ್ಟಿಕ್ ಬೊಂಬೆಗಳನ್ನೆಲ್ಲಾ ತಾನು ಸೂಟ್ ಕೇಸಿನಲ್ಲಿಟ್ಟಿದ್ದರೆ, ಅದನ್ನ ಅವಳ ತಾಯಿ ನೋಡಿ ಒಲೆಗೆಸೆಯಲು ಹೋಗಿದ್ದಳು. ಅದಕ್ಕೇ ಹುಡುಗಿ ಆ ಬೊಂಬೆಗಳನ್ನ ಕೊಡದೇ ಇದ್ದರೆ ತಾನು ಮದುವೆ ಮಾಡಿಕೊಳ್ಳೋಲ್ಲ ಅಂತ ಹಟ ಹಿಡಿದಿದ್ದಳು.


ಒಮ್ಮೆ ಹಂಪಿಗೆ ಹೋಗಿದ್ದೆ. ನಿಜಕ್ಕೂ ಹಂಪಿ ಅದ್ಬುತ. ಅಲ್ಲಿನ ಪ್ರತೀ ಕಲ್ಲೂ ಜೀವಂತ ಚೈತನ್ಯಕ್ಕೆ ಪ್ರತ್ಯಕ್ಷ ಸಾಕ್ಷಿ. ಪ್ರತೀ ಕಲ್ಲನ್ನ, ಪ್ರತೀ ಶಿಲ್ಪವನ್ನ ಮುಟ್ಟಿ ಮುಟ್ಟಿ ನೋಡಿದೆ. ಶಿಲ್ಪಗಳ ಮುಖಕ್ಕೆ ಮುಖಮಾಡಿ, ಕಣ್ಣೊಳಗೆ ದೄಷ್ಠಿನೆಟ್ಟು ಕಲೆಯೊಳಗಿನ ಜೀವಂತಿಕೆಯನ್ನ ಈ ಕಲ್ಲ ಮುಖಗಳೊಳಗೆ ಕಾಣತೊಡಗಿದೆ, ಬದುಕಿನ ವಿಶಿಷ್ಟ ಅನುಭವದ ಬಿಂಬವಾಗಿ ನನ್ನೊಳಗೆ ಅವತರಿಸುವ ಕ್ಷಣವನ್ನ ಮೌನವಾಗಿ ಅನುಭವಿಸತೊಡಗಿದೆ. ಬೆಳಗಿನ ಸೌಂದರ್ಯಕ್ಕೆ ಒಂದು ರೀತಿ, ಸಂಜೆಗೆ ಮತ್ತೊಂದು ರೀತಿ. ಪ್ರಕೃತಿಯ ವೈಭವಕ್ಕೆ ಸೆಡ್ಡು ಹೊಡೆದು ಮನುಷ್ಯ ಚೈತನ್ಯದ ಸೃಷ್ಟಿ ಶಕ್ತಿಯ ಮಹೋನ್ನತ ಪ್ರದರ್ಶಣಗಳಾಗಿ ನನಗೆ ಕಂಡಿತು. ಕಲ್ಲಿನ ರಥ ಇರುವ ವಿಠಲನ ದೇವಸ್ತಾನಕ್ಕೆ ಬಂದೆ, ಕಲ್ಲಿನ ರಥವನ್ನ ನೋಡುತ್ತ ನಿಂತಿದ್ದೆ. ಅದರ ಶಿಲ್ಪವನ್ನ ಅನುಭವಿಸುತ್ತಿದ್ದೆ. ಆಗ ಒಂದು ಹಳ್ಳಿ ಜನಗಳ ಗುಂಪು, ಮಹಿಳೆಯರು, ಪುರುಷರು, ಬಂದು ರಥವನ್ನ ಗಮನಿಸತೊಡಗಿದರು. ಆ ಗುಂಪಿನಲ್ಲಿದ್ದ ಒಬ್ಬಾಕೆ ಆ ಸವೆದುಹೋದ ಕಲ್ಲಿನ ರಥದ ಚಕ್ರಗಳನ್ನೂ, ಅದರ ಕೀಲನ್ನೂ ಕಂಡು, ತನ್ನವರಿಗ್ಯಾರಿಗೋ "ನೋಡಿ, ರಥ ಎಳೆದೂ ಎಳೆದೂ ಚಕ್ರಗಳು ಸವೆದಿವೆ" ಎಂದಳು. ಆ ಕ್ಷಣ ಆ ಮಾತನ್ನ ಕೇಳಿ ನನಗೆ ಆಶ್ಚರ್ಯ ಆನಂದ ಎರೆಡೂ ಆದವು. ಅರೆ, ಬದುಕನ್ನ ಹೀಗೂ ಕಾಣಬೊಹುದಲ್ಲ! ಅದು ಮುಗ್ದತೆಯ? ಅಮಾಯಕತೆಯ? ತಿಳಿಯಲಿಲ್ಲ, ತಿಳಿದುಕೊಳ್ಳುವ ಗೋಜಿಗೂ ಹೋಗಲಿಲ್ಲ. ಯಾವುದೋ ರೂಪಿತ ಸಿದ್ದಾಂತದ ಒಳಗೆ ಕೂತು ಅದನ್ನೇ ಕಟ್ಟುತ್ತಾ ಬದುಕೋದು ಅವಶ್ಯವಿದೆಯ? ಯಾವುದು ವಾಸ್ತವ? ಯಾವುದು ಭ್ರಮೆ? ಯಾವುದು ಕಲ್ಪನೆ?

ಏನನ್ನೋ ಹುಡುಕಿ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದೆ. ಅಲ್ಲಿ ಎರೆಡು ಶಿಲ್ಪಗಳು ನನ್ನನ್ನ ಬಹಳವಾಗಿ ಆಕರ್ಷಿಸಿದವು, ಅದು ಕೇವಲ ಆಕರ್ಷಣೆಗೆ ಸೀಮಿತವಾಗಿರಲಿಲ್ಲ. ಆಕರ್ಷಣೆಯನ್ನ ಮೀರಿದ ಚಿತ್ರವಾಗಿ ನನ್ನೊಳು ಹೊಕ್ಕು, ನಾನು ಬದುಕನ್ನ ನೋಡುವ ಕ್ರಮವನ್ನೇ ಬದಲಿಸಿಬಿಟ್ಟಂತೆ ಅನ್ನಿಸಿತು.
ಒಂದು, ದಕ್ಷಯಙ್ಞದಲ್ಲಿ ಪ್ರಾಣವನ್ನ ಅರ್ಪಿಸಿದ ಪಾರ್ವತಿಯ ಶರೀರವನ್ನ ತನ್ನ ಬುಜದಮೇಲೆ ಹಾಕಿಕೊಂಡು ಹುಚ್ಚನಂತೆ ಅಲೆಯುತ್ತಿರುವ ಈಶ್ವರನ ಶಿಲ್ಪ, ಮತ್ತೊಂದು ಬೆತ್ತಲೆಯಾಗಿ ಬಿಕ್ಷೆ ಬೇಡುತ್ತಿರುವ ಈಶ್ವರ.