ನಮ್ಮ ಜ್ಯೋತಿ ಮೇಡಂ

ನನ್ನ ಬದುಕು ನನ್ನದು ಮಾತ್ರವೆಂದು ಎಂದೂ ನನಗನ್ನಿಸಿಲ್ಲ. ಈ ಬದುಕಿಗೆ ಅದೆಷ್ಟೋ ಜನರ ಪಾಲಿದೆ. ತಂದೆ ತಾಯಿಯ ನಂತರ ನನ್ನ ಬದುಕನ್ನು ರೂಪಿಸಿದ ಬಹು ದೊಡ್ಡ ಪಾಲು ನನ್ನ ಗಣಿತ ಶಿಕ್ಷಕಿ ನಾಗಜ್ಯೋತಿ ಮೇಡಂಗೆ ಸಲ್ಲುತ್ತದೆ. ಅವರು ತೀರಿಹೋಗಿದ್ದಾರೆ ಎಂಬುದು ಎಂದಿಗೂ ನಂಬಲಾರದ ಸಂಗತಿ. ಎಂದಿಗೂ ಮರೆಯಲಾರದ, ಬದುಕಿನ ಪ್ರತೀ ಹಂತವನ್ನೂ ಪ್ರಭಾವಿಸಿದ ವ್ಯಕ್ತಿ ನಮ್ಮ ಬದುಕಿಂದ ದೂರವಾಗಲು ಸಾದ್ಯವಿಲ್ಲ. ನಮ್ಮದೇ ಬದುಕಿನಲ್ಲಿ ಅವರ ಜೀವಂತಿಕೆ ಕಾಣಲು ಸಾದ್ಯ. ನನ್ನ ಬದುಕಿನಲ್ಲಂತೂ ಬದುಕಿನ ಪ್ರತೀ ಹಂತದಲ್ಲೂ ಅವರು ಕಟ್ಟಿಕೊಟ್ಟ ಮೌಲ್ಯಗಳು ಜೀವಂತವಾಗಿರುವವರೆಗೂ ಅವರೂ ನನ್ನ ಮಟ್ಟಿಗೆ ಜೀವಂತ. 

ಇವತ್ತಿಗೂ ಕಣ್ಣಮುಂದೆ ಕಟ್ಟಿದಂತಿದೆ ಆ ದೃಷ್ಯ. ಕನ್ನಡ ಮಾಧ್ಯಮವನ್ನು ಏಳನೇ ತರಗತಿಯವರೆಗೂ ಓದಿದ್ದು, ಎಂಟನೇ ತರಗತಿಗೆ ಆಂಗ್ಲ ಮಾಧ್ಯಮ. ಏನಾಗುತ್ತೋ ಏನೋ ಎಂಬ ವಿಪರೀತ ಭಯ. ಆಗಲೇ ನನ್ನ ಅಕ್ಕ, ಹಳೇ ಟೀವಿಎಸ್ ಸ್ಕೂಟರ್ ಅಲ್ಲಿ ಕರೆದುಕೊಂಡು ಬಂದು, ಇವರ ಹಳೇ ಮನೆಯ ಮುಂದೆ ನಿಲ್ಲಿಸಿ ಕರೆದುಕೊಂಡು ಹೋಗಿ ಮೇಡಂಗೆ ಪರಿಚಯಿಸಿ  ಮನೆ ಪಾಠಕ್ಕೆ ಕಳುಹಿಸಿದ್ದು. ಎಂಟನೇ ತರಗತಿಯಿಂದಲೇ ಮನೆಪಾಠಕ್ಕೆ ಸೇರಿದ್ದು. ಆಗ ಹಳೆಯ ಮನೆಯಲ್ಲಿದ್ದರು. ನಾನು ಆ ಹಳೆಯ ಮನೆಗೆ ಪಾಠಕ್ಕೆ ಹೋಗುತ್ತಿದ್ದ ಹಳೆಯ ವಿಧ್ಯಾರ್ಥಿ. ಮೇಡಂ ಗಣಿತ, ವಿಜ್ಞಾನ, ಪಾಠ ಮಾಡುತ್ತಿದ್ದರು, ನಾಗೇಂದ್ರ ಸಾರ್ ಸಮಾಜ ವಿಜ್ಞಾನ ಇಂಗ್ಲೀಷ್ ಪಾಠ ಮಾಡುತ್ತಿದ್ದರು. ನಾನು ಹಳ್ಳಿಯಿಂದ ಸುಮಾರು ಆರು ಕಿ.ಮೀ ದೂರದಿಂದ ಬರುತ್ತಿದ್ದದ್ದು, ಜೊತೆಗೆ ಒಮ್ಮೆಗೇ ಊರಿಂದ ಹೊರಗೆ ಬಂದದ್ದದ್ದು. ಈ ಮನೆಯಲ್ಲಿನ ಆತ್ಮೀಯತೆ ವಿಚಿತ್ರವಾದ ಧೈರ್ಯ ತುಂಬಿತ್ತು. ನಾವು ಆಗ ಮನೆಪಾಠಕ್ಕೆಂದು ಅವರ ಮನೆಗೆ ಹೋಗುತ್ತಿದ್ದವರು ಕಡಿಮೆ ಜನ. ಹಲವರು ಅದಾಗಲೆ ಪ್ರಸಿದ್ಧಿಯಲ್ಲಿದ್ದ ಮತ್ತೊಂದು ಕಡೆಗೆ ಹೋಗುತ್ತಿದ್ದರು. ಹೀಗಾಗಿ ಕೆಲವೇ ಮಂದಿಯಿದ್ದ ನಮಗೆ ಅದು ಮನೆಗಿಂತ ಬೇರೆಯೆಂದೆನಿಸಲೇ ಇಲ್ಲ. ಥೇಟ್ ಗುರುಕುಲದಂತಯೇ ಇತ್ತು. ಚಿಕ್ಕಂದಿನಿಂದಲೂ, ನನ್ನಮ್ಮ ನನಗಾಗಿ ಕನ್ನಡ ಕಲಿತು (ಅವಳದು ತೆಲುಗು ಮಾತೃ ಭಾಷೆ), ನನಗೆ ಪಾಠ ಹೇಳಿಕೊಡುತ್ತಿದ್ದದ್ದು. ಮತ್ತೇ ಮನೆಪಾಠಕ್ಕೆ ಸೇರಿದಾಗ ಈ ಮನೆಯಲ್ಲಿ ನಮ್ಮ ಮನೆಯದೇ ಭಾವ .

ಅಲ್ಲಿಂದ ಹೊಸ ಮನೆಗೆ, ಮಾಡಿ ಮನೆಗೆ ಹೋದದ್ದು. ಹಳೆ ಮನೆಯಲ್ಲಿ ಒಂದೆರೆಡೋ ಮೂರೋ ತಿಂಗಳಿದ್ದೆವೋ ಏನೋ ಹೆಚ್ಚಿಗೆ ನೆನಪಾಗುತ್ತಿಲ್ಲ. ಉಳಿದ ಸಮಯವೆಲ್ಲಾ ಕಳೆದದ್ದು ಈ ಹೊಸ ಮನೆಯಲ್ಲೆ. ವರಂಡಾದಲ್ಲೊಂದು, ಹಾಲಿನಲ್ಲೊಂದು ಕಪ್ಪು ಪ್ಲಾಸ್ಟಿಕ್ ಹಾಳೆಯಂತಹ ಬೋರ್ಡ ಇತ್ತು. ಅದರಲ್ಲಿ ಒಂದೊಂದೋ ಲೆಕ್ಕಗಳನ್ನು ಬಿಡಿಸಲು ಕಲಿಸುತ್ತಿದ್ದದ್ದು. ಸಾರ್, ಒಮ್ಮೆಮ್ಮೊ ಜೋರಾಗಿ ಬೈಯುತ್ತಿದ್ದರೆ, ಮೇಡಂ ಬೈದು, ನನ್ನ ತಪ್ಪನ್ನು ಗುರುತಿಸಿ ಅದನ್ನು ತಿದ್ದುತ್ತಿದ್ದರು. ಮನೆಯವರು ತಿದ್ದಿದ್ದಕ್ಕಿಂತ ಹೆಚ್ಚಾಗಿ ಮೇಡಂ ತಿದ್ದಿದ್ದಾರೆ. ಸಂಜೆ ಮನೆ ಪಾಠ ನಡೆಯುವಾಗ ಮನೆಗೆ ಹೋಗುವುದು ತಡ ಆಗುತ್ತೆ ಎಂದು ಅದೆಷ್ಟೋ ಬಾರಿ ಏನಾದರೊಂದನ್ನು ತಿನ್ನಲು ಕೊಟ್ಟು ಕಳುಹಿಸುತ್ತಿದ್ದರು. ಹತ್ತನೇ ತರಗತಿಯ ನಂತರ ಎರಡು ವರುಷ ಅವರ ಬಳಿಗೆ ಹೋಗಲಿಕ್ಕಾಗಲಿಲ್ಲ. ಆಗ ಗೌರಿಬಿದನೂರಿಗೆ ಕಾಲೇಜಿಗೆ ಸೇರಿದ್ದದ್ದು. ಅವರೇ ಮತ್ತೊಬ್ಬರಿಗೆ ಹೇಳಿ ಪಿ.ಯು.ಸಿ ಗಣಿತಕ್ಕೆ ಮನೆಪಾಠಕ್ಕೆ ಸೇರಿಸಿದ್ದರು.

ಪಿ.ಯು.ಸಿ ನಂತರ ಬಿ.ಎಸ್.ಸಿ ಗೆ ಸೇರುವುದೆಂದು ನಿರ್ದರಿಸಿದ್ದರೂ ಹಲವರು ಇಂಜಿನಿಯರ್ ಆಗು ಎಂದು ಒತ್ತಾಯಿಸುತ್ತಿದ್ದುದರಿಂದ ಎಲ್ಲೋ ಒಂದಿಷ್ಟು ಅಳುಕು, ಭಯ. ಆದರೆ, ಈಗಲೂ ಆಶ್ಚರ್ಯವೆಂಬಂತೆ ಮೇಡಂ ನಿನಗೇನಿಷ್ಟವಿದೆಯೋ ಅದನ್ನೇ ಮಾಡು ಎಂದು ಪ್ರೋತ್ಸಾಹಿಸಿದ್ದರು. ನಾನು ನ್ಯಾಷನಲ್  ಕಾಲೇಜಿಗೆ ಸೇರಿದೆ. ಅಲ್ಲಿಯೇ ಮೇಡಂ ಉಪನ್ಯಾಸಕಿಯಾಗಿದ್ದರು. ಸಾಮಾನ್ಯವಾಗಿ ಅವರು ಅಲ್ಲಿ ಪದವಿ ತರಗತಿಗಳಿಗೆ ಪಾಠ ಮಾಡುತ್ತಿರಲಿಲ್ಲ. ಆದರೂ ನಾವೊಂದಿಷ್ಟು ಮಂದಿ ಕೇಳಿದೆವೆಂದು ಪಾಠ ಮಾಡಲಿಕ್ಕೆ ಒಪ್ಪಿಕೊಂಡಿದ್ದರು. ಅಲ್ಲದೆ, ಅವರು ತೆಗೆದುಕೊಳ್ಳದ ಭಾಗಗಳನ್ನು, ನಮಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದಾಗ, ಮತ್ತೆ ಮನೆ ಪಾಠ ಆರಂಭಿಸಿ ಆ ಉಳಿದ ಭಾಗಗಳನ್ನು ಅಲ್ಲಿ ಹೇಳಿಕೊಡುತ್ತಿದ್ದರು. ಅವರೇನು ಪದವಿ ತರಗತಿಗಳಿಗೆ ಮನೆ ಪಾಠ ಮಾಡುತ್ತಿರಲಿಲ್ಲ. ನಾವು ಒಂದಿಷ್ಟು ಮಂದಿ ಬಹುಷಃ ಆರೇಳು ಮಂದಿ ಇರಬಹುದು, ಕೇಳಿದ್ದಕ್ಕೆ ಒಪ್ಪಿ ಮೂರು ವರ್ಷಗಳ ಕಾಲ ನಮಗೆ ಪಾಠ ಮಾಡಿದ್ದರು. ಅವರು ಅಂದು ಕಲಿಸಿದ ಗಣಿತವೆ ಇಂದಿನ ನನ್ನ ಎಲ್ಲಾ ಸಂಶೋಧನೆಗಳಿಗೂ ಮೂಲ ದ್ರವ್ಯ.

ಈ ಮೂರು ವರ್ಷಗಳಲ್ಲಿ ನನ್ನನ್ನು ಅವರು ಬಹಳ ಪ್ರಭಾವಿಸಿದ್ದರು. ಈ ಸಮಯದಲ್ಲಿ ಹಲವು ದ್ವಂದ್ವಗಳಿಂದ ಎಲ್ಲೋ ಕಳೆದು ಹೋಗಬೇಕಿದ್ದವನಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ನೀಡಿ ಮುನ್ನೆಡೆಸುತ್ತಿದ್ದರು.  ನನ್ನ ಸಾಹಿತ್ಯದ ಓದನ್ನು ಪ್ರೋತ್ಸಾಹಿಸುತ್ತಿದ್ದದ್ದು ಮೇಡಂ ಮಾತ್ರಾ. ಹಾಗೆ ಓದು ಪರವಾಗಿಲ್ಲ, ಎಂದು ಹೇಳುತ್ತಲೇ, ಪರೀಕ್ಷೆಗಳಲ್ಲಿ ಚೆನ್ನಾಗಿ ಬರೆಯಬೇಕು ಎಂತಲೂ ಎಚ್ಚರಿಸುತ್ತಿದ್ದರು. ಗ್ರಂಥಾಲಯದ ಅವರ ಕಾರ್ಡುಗಳನ್ನು ನೀಡಿ ಪುಸ್ತಕ ತೆಗೆದುಕೊಂಡು ಹೋಗಲಿಕ್ಕೆ ಸಹಾಯ ಮಾಡುತ್ತಿದ್ದರು.


ಇನ್ನು ಅವರ ಮನೆಯಂತೂ ನನ್ನದೇ ಮನೆಯಂತಿತ್ತು. ಅವರ ಮನೆಯವರೆಲ್ಲರೂ ಆತ್ಮೀಯರಾಗಿದ್ದರು, ಅಜ್ಜಿ, ಮೇಡಂ ತಂದೆ, ಅವರ ಅಕ್ಕ, ಅವರ ತಂಗಿ, ಅವರ ಮಕ್ಕಳು, ಮೇಡಂ ಮಗಳು ದೀಪ್ತೀ.   ಒಂದು ಕಡೆ ಅಜ್ಜಿ, ಮತ್ತೊಂದು ಕಡೆ ಸಾರ್, ಮಗದೊಂದು ಕಡೆ ಮೇಡಂ ಪಾಠ, ಆಟಕ್ಕೆ ಹೋಗಿ ಬಂದ ದೀಪ್ತೀ, ಮೇಡಂ ಅವರ ಅಕ್ಕ, ತಂಗಿ, ರಜೆಗೆ ಬಂದ ಅವರ ಮಕ್ಕಳು, ಅವರ ಜಗಳ, ಇದೆಲ್ಲದರ ಮಧ್ಯ  ನಡೆಯುತ್ತಿದ್ದ ನಮ್ಮ ಪಾಠಗಳು, ಅದೆಷ್ಟು ಜೀವಂತ ಕ್ರಿಯೆ. ಈಗಲೂ ನೆನೆದರೆ ಕಣ್ಣಿಗೆ ಕಟ್ಟುತ್ತದೆ ಆ ದಿನಗಳು.  ನನಗೆ ನಾನು ಯಾರದೋ ಮನೆಗೆ ಮನೆಪಾಠಕ್ಕಾಗಿ ಬಂದಂತೆನಿಸುತ್ತಿರಲಿಲ್ಲ,  ಅದೇ ಮನೆಯವ  ಹೊರಗೋಗಿದ್ದವ ಮತ್ತೆ ಮನೆಗೆ  ಬಂದಂತೆ ಭಾಸವಾಗುತ್ತಿತ್ತು. ಬದುಕು ರೂಪಗೊಳ್ಳಬೇಕಾದದ್ದು ಹೀಗೆ ಅಲ್ಲವ. ಬೇರೆಯವರ ಮನೆಯಲ್ಲಿ ನಾವು ಅವರ ಮನೆಯವರಾಗಬಲ್ಲೆವು ಎಂಬುದರಿಂದಲೇ ಅಲ್ಲವ  ಉತ್ತಮ  ಬದುಕುಗಳು ರೂಪಗೊಳ್ಳುವುದು, ಮಾನವ ಸಮಾಜದ ಮೇಲೆ, ಮನುಷ್ಯರ ಮೇಲೆ ನಂಬಿಕೆ ಮೂಡುವುದು, ಹೆಚ್ಚು ಹೆಚ್ಚು ಮನುಷ್ಯರಾಗುವುದು. ಮೊದಲು ಮಾನವನಾಗು ಎಂದು ನೇರ ಹೇಳಿಕೆಯಿಂದಲ್ಲ, ಬದುಕಿನ ರೀತಿಯಿಂದ, ನಮ್ಮನ್ನು ಮನುಷ್ಯರನ್ನಾಗಿಸುತ್ತಿದ್ದದ್ದು.  ನಮ್ಮ ಸನಿಹದಲ್ಲಿ ಮತ್ಯಾರೋ ಅನಾಮಿಕ ಆತ್ಮೀಯತೆಯ ಭಾವಕ್ಕೊಳಪಡುವಂತೆ  ಬದುಕುವುದೇ ನಾನು ಅವರಿಗೆ ನೀಡಬಲ್ಲ ಗುರು ಕಾಣಿಕೆ.

ಅನಾರೋಗ್ಯದ ಸಮಯದಲ್ಲಿ, ಸಾವಿನ ಸನಿಹದಲ್ಲಿ ಅವರು ತೋರಿದ ಧೈರ್ಯ ಬಹಳ ದೊಡ್ಡದು, ಅಸಾಮಾನ್ಯವಾದದ್ದು. ಕೆಲವೇ ದಿನಗಳ ಹಿಂದೆ ಕರೆ ಮಾಡಿದಾಗಲೂ ಒಂದಿಷ್ಟೂ ಅಳುಕಿಲ್ಲದಂತೆ ಮಾತನಾಡಿ ಆಶೀರ್ವದಿಸಿದ್ದರು. ಬದುಕಿನ ಬಗೆಗೆ ತೀವ್ರವಾದ ಒಳನೋಟ ಸಾಧ್ಯವಿಲ್ಲದೆ ಸಾವನ್ನು ಸಹಜವಾಗಿ ಸ್ವೀಕರಿಸಲಿಕ್ಕೆ ಸಾಧ್ಯವಿಲ್ಲ. ಮೇಡಂ ಸಾವನ್ನು ಸಹಜವಾಗಿ ಸ್ವೀಕರಿಸಿದಂತಿದ್ದರು.  ಬದುಕನ್ನು ತೀವ್ರವಾಗಿ ಜೀವಿಸುವುದೆಂದರೇನೇ ಸಾವಿನ ಸತ್ಯವನ್ನರಿತು ಅದನ್ನು ನಿರಮ್ಮಳವಾಗಿ ಎದುರಿಸಿವುದು. ಆ ಮಾಹಾನ್ ಚೈತನ್ಯಕ್ಕೆ ಅದು ಸಾದ್ಯವಾಗಿತ್ತು.
ಕೈ ಹಿಡಿದು ನಡೆಸೆನ್ನನು ತಾಯೇ ಎಂದು ಹೇಳುತ್ತ ………

[ನಾಗಜ್ಯೋತಿ ಮೇಡಂ ದಿನಾಂಕ 20.08.2019 ರಂದು ದೈವಾಧೀನರಾದರು. ]