ಕರಿಬೇವಿನ ಸೊಪ್ಪು




“ಅಲ್ಲೇ, ಊರಲ್ಲಿ ಒಂದೂ ಕರಿಬೇವಿನ ಮರ ಇಲ್ವಾ?, ಊರೋರೆಲ್ಲ ನಮ್ಮನೇಲಿದ್ದ ಕರಿಬೇವನ್ನ ಕಿತ್ತು ಕಿತ್ತು ಮರ ಎಲ್ಲ ಬೋಳು ಮಾಡಿದರು, ಆ ಮರಾನೋ ಮತ್ತೆ ಬೆಳೀಲೇ ಇಲ್ಲ. ಬರೀ ಬೋಳು ಮರ. ನೀರು ಹಾಕಿದ್ದೇ ಹಾಕಿದ್ದು. ಒಮ್ಮೆ ಅದಕ್ಕೊಂದಿಷ್ಟು ಗೊಬ್ಬರಾನೂ ಹಾಕಿದ್ದಾಗಿತ್ತು. ಕಡೆಗೂ ಒಂದು ಎಲೆ ಸಹ ಚಿಗುರಲಿಲ್ಲ. ಉಪ್ಪಿಟ್ಟು ತಿನ್ಬೇಕು ಅಂತ ಅನ್ಸಿದ್ರೆ , ಒಗ್ಗರಣೆಗೆ ಒಂದೂ ಕರಿಬೇವು ಇಲ್ಲ ಅಂದ್ರೆ !, ಮಾಡೋದೆ ಆದ್ರೆ ಸರಿಯಾಗೇ ಮಾಡ್ಬೇಕು ಕರಿಬೇವಿನ ಒಗ್ಗರಣೆ ಇಲ್ಲದ ಉಪ್ಪಿಟ್ಟನ್ನ ಮನುಷ್ಯ ಅನ್ನೋನು ತಿನ್ನೋಕ್ಕಾಗುತ್ತ " ಅಂತ ಹೊರಟ ಶೇಷಣ್ಣನಿಗೆ ಹಿಂದೆ ಒಮ್ಮೆ ತಾನು ರೈಲ್ವೇ ನಿಲ್ದಾಣದ ಹಿಂದಿನ ಬೀಡಿನಲ್ಲಿ ಯಾವಾಗಲೋ ಒಂದು ಕರಿಬೇವಿನ ಪುಟ್ಟ ಗಿಡವನ್ನು ಇಟ್ಟದ್ದು ನೆನಪಾಗಿ ಅದು ಈಗ ದೊಡ್ಡದಾಗಿರಬಹುದು, ಹೋದರೆ ಒಂದು ಎಳೆಯಾದರೂ ಸಿಗಬಹುದೆಂದು ರೈಲ್ವೇ ನಿಲ್ದಾಣದ ಕಡೆ ಹೊರಟ.

ರಾಮಕ್ಕನಿಗೆ ಈ ವಯ್ಯ ಈಗ್ಯಾಕೆ ತನ್ನ ಮನೆಗೆ ಬಂದು ಹೀಗೆ ಉಪ್ಪಿಟ್ಟು ಮಾಡ್ತೀನಿ ಅಂತ ಕುಂತಿದ್ದಾನೋ, ಊರೋರ ಬಾಯಿಗೆ ಎಲ್ಲಿ ಸಿಗಬೇಕಾಗುತ್ತೋ ಅನ್ನೋದು ಅವಳಿಗಿದ್ದ ಭಯ. ಎಲ್ಲರಿಗೂ ಮರೆವು ಬೇಗ ಸಂಭವಿಸಿದರೂ ತನಗಲ್ಲ.

“ಈ ವಯ್ಯಂಗೆ ಈಗ ಉಪ್ಪಿಟ್ಟು ಮಾಡು ಅಂತ ಹೇಳ್ದೋರಾದ್ರು ಯಾರು, ಅದೂ ನಮ್ಮನೆಗೆ ಬಂದು ಮಾಡ್ಬೇಕಾ ಹೇಳು?, ನಂಗೋ ಬೇಡ ಅನ್ಲಿಕ್ಕೆ ಆಗ್ಲಿಲ್ಲ ನೋಡು. ಹಿಂದೆ ಆಗಿದ್ದನ್ನ ಮರೆತಿದ್ದಿ ನೀನು? ಅಲ್ಲಾ, ಈ ವಯ್ಯನ ಹೋಟೇಲಿಗೆ ನಾನು ಸುಮ್ಮನೆ ಹೋದದ್ದಪ್ಪ. ಊರಲ್ಲಿ ಇದ್ದದ್ದು ಇದೊಂದೇ ಹೋಟೇಲು. ನಾ ಸುಮ್ನೆ ಬರ್ಬೇಕಿತ್ತು ತಾನೆ, ಅದ್ಯಾಕೋ ಈ ವಯ್ಯ ಮಾಡಿದ್ದ ಉಪ್ಪಿಟ್ಟು ಚಂದಾಗಿತ್ತು, ಅದಕ್ಕೆ ಉಪ್ಪಿಟ್ಟು ಚೆನ್ನಾಗಿದೆ ಅಂತ ಅಂದೆನಪ್ಪ ಅಷ್ಟೇ. ನನ್ನ ಗ್ರಹಚಾರ ನೋಡು..
ಹುಶಾರಿರ್ಲಿಲ್ಲ, ಜೀವ ಹೋಗೋ ಜ್ವರ. ನನಗೆ ಯಾರಿದ್ರು, ಯಾರೂ ಇಲ್ಲ. ಇದೇ ಮನೇಲೇ ಇದ್ದಿದ್ದು. ಒಬ್ಳೇ. ಸತ್ರೂ ಕೂಡಾ ವಾಸನೆ ಬಂದಮೇಲೆ ಜನಕ್ಕೆ ಗೊತ್ತಾಗ್ತಿದ್ದಿದ್ದು, ಈ ಮನೇಲೂ ಒಂದು ಜೀವ ಇತ್ತು ಅಂತ. ಈಗ ಜನ ಗೊತ್ತು. ನಂದು ಊರು ಅಂತ ಆಗಿದೆ. ಆಗ್ಯಾರಿದ್ರು?. ಈ ವಯ್ಯ ದಿನಾ ಉಪ್ಪಿಟ್ಟು ತಂದು ಮನೇಲಿ ಇಟ್ಟು ಹೋಗುತ್ತಿದ್ದ, ಬ್ಯಾಡಯ್ಯ ಅಂತ ಹೇಳಿದ್ರೂ ಕೇಳ್ತಿರ್ಲಿಲ್ಲ. ಇಟ್ಟು ಹೋಗ್ತಾ ಇದ್ದ. ರೋಗ ಅಂತೂ ವಾಸಿ ಆಯ್ತು. ಉಪ್ಪಿಟ್ಟು ತಿಂದಾ ಇಲ್ಲ ಔಷಧ ತಗೊಂಡಾ ಗೊತ್ತಿಲ್ಲ. ಒಟ್ಟಿನಲ್ಲಿ ರೋಗ ವಾಸಿ ಆಯ್ತು. ಆದ್ರೆ ಊರಲ್ಲಿ, ಈ ಜನ, ಅವರ ಮನೆಯವರು. ಹಾಳು ಹೊಲಸು. ಅದೇ ಕೊನೆ. ಆವಯ್ಯನ ಹೋಟೇಲಿಗೆ ಹೋಗಿದ್ದು ಕಾಣೆ. ಆ ವಯ್ಯನ ಮುಖ ಕೂಡ ಕಂಡಿರಲಿಲ್ಲ. ಅದ್ಯಾವಗಲೋ ಊರು ಬಿಟ್ಟು ಹೊರಟು ಹೋದರು. ಮಕ್ಕಳು ದೊಡ್ಡೋರಾಗಿದ್ರು. ಎಲ್ಲ್ಲೋ ಫಾರೀನ್ ಸೇರಿಕೊಂಡರಂತೆ. ಈಗ ಬಂದವ್ನೆ, ರಾಮಕ್ಕ ನಾನು ಉಪ್ಪಿಟ್ಟು ಮಾಡ್ಬೇಕು ಪಾತ್ರೆ ಕೊಡು ಅಂತೇಳಿ ಒಳಗೆ ನುಗ್ಗೇ ಬಿಡೋದೆ? ಈ ವಯ್ಯನ್ನ ಗುರ್ತು ಹಿಡಿಯೋಕೆ ಸ್ವಲ್ಪ ಹೊತ್ತು ಹಿಡೀತು.
ಆದ್ರೂ ಯಾಕೋ ಬೇಡ ಅನ್ನೋಕೆ ಆಗ್ಲಿಲ್ಲ ನೋಡು.”
ರಾಮಕ್ಕ ಹೇಳ್ತಾನೆ ಇದ್ದಳು.
*********
*******


ಬೇಕು-ಬೇಡ, ಹೋಗಬೇಕು-ಬಾರದು, ಇವುಗಳ ನಡುವೆ ಆಯ್ಕೆ ಇರಲಿಲ್ಲವೆಂದೇನೂ ಅಲ್ಲವಾದರೂ, ಹೆಚ್ಚಾಗಿ ಆ ಆಯ್ಕೆಗಳು ಬೇಕಿರಲಿಲ್ಲ. ಆಯ್ದುಕೊಳ್ಳಬೇಕು ಎಂದಾದಾಗ ಏನೋ ವಿಚಿತ್ರವೆನಿಸಿ, ಸಿಗರೇಟೋ ಬೀಡಿಯೋ ಬೇಕೆನಿಸುತ್ತಿತ್ತು, ಅದಕ್ಕೆ ಕಾಸು ಬೇಕಿತ್ತು, ಅದು ತನ್ನಲ್ಲಿರಲಿಲ್ಲ, ಹೆಂಡತಿಯ ಬಳಿ ಪಡೆಯಬೇಕು, ಹೀಗಾಗಿ ರಮಾದೇವಿ ಹೇಳಿದ್ದೆ ಶೇಷಣ್ಣ ಊರಿಗೆ ಹೊರಡಲು ಸಿದ್ದವಾಗಿದ್ದ. ತಾನು ಹುಟ್ಟಿದ ಊರು, ಬೆಳೆದ ಊರು, ಹಲವು ವರ್ಷಗಳ ನಂತರ ಊರಿಗೆ ಹೊರಟಿರುವುದು, ಎಲ್ಲವೂ ಒಮ್ಮೆ ನೆನಪಾಯಿತಾದರೂ, ಹೀಗೆ ನೆನಪಾದಾಗ ಖುಷಿಯಾಗಬೇಕಲ್ಲ, ತನಗೇಕೆ ಏನು ಅನ್ನಿಸುತ್ತಿಲ್ಲ ಎಂದೆನಿಸಿ, ಖುಷಿ ಪಡೋಣವೆಂದು ಬಸ್ಸಿನ ಕಿಟಕಿಯ ಹೊರಗೆ ಮುಖಮಾಡಿ ಬೀಸುತ್ತಿದ್ದ ಗಾಳಿಗೆ ಮುಖವೊಡ್ಡಿ ಕಂಡು ಕಾಣದ ಹಲ್ಲನ್ನ ಗಾಳಿಗೆ ತೋರುತ್ತಿದ್ದಾಗ, ಮುಖಕ್ಕೆ ನೀರು ಚಿಮುಕಿದಂತಾದಾಗ, ರಮಾಬಾಯಿ ಜೋರಾಗಿ ,

“ಕರ್ಮ, ಮುಖ ಒಳಗೆ ಹಾಕ್ರೀ. ಮುಂದಿನ ಸೀಟಲ್ಲಿ ಯಾರೋ ವಾಂತಿ ಮಾಡ್ಕೊಂಡ್ರೆ, ಅದು ನಿಮ್ಮ ಮುಖಕ್ಕೆ ಬಿದ್ರೂ ನಿಮಗೆ ಗೊತ್ತ್ತಾಗಲಿಲ್ಲ. ಕಿಟಕಿ ಹಾಕ್ರಿ" ಜೇಬಿನಲ್ಲಿ ತಡಕಿದಾಗ ಕರವಸ್ತ್ರ ಇಲ್ಲದ್ದು ನೆನೆಪಾಗಿ, ಹೆಂಡತಿಗೆ ತಿಳಿಯದಂತೆ ಹಾಕಿದ್ದ ಅಂಗಿಯಲ್ಲೆ ಮುಖ ಒರೆಸಿಕೊಂಡ.
“ನಮ್ಮನೇಲೂ ಇದೆ. ಐದು ವರ್ಷ ಕಳೀತು. ವಾಂತಿ ಮಾಡ್ಕೊಂತ. ಎಂತಾದೂ ಇಲ್ಲ. ಕೇಳ್ದೋರಿಗೆಲ್ಲ ಹೇಳಿ ಹೇಳಿ ಸಾಕಾಯ್ತು. ನಿಮ್ಗೆ ಬಡ್ಕೋ ಬೇಕು. ಏನೂ ತಿಳಿಯೋಲ್ಲ. ಎಲ್ಲಾ ನಾನೆ ಸಾಯಬೇಕು. ಅವ ಮನೆ ಕಟ್ಬೇಕು ಸರಿ. ಪಾಯದ ಪೂಜೆ ಯಾರು ಮಾಡಬೇಕು. ಹಾಲನ್ನ ಮೊದ್ಲು ನಿಮ್ಮ ಕೈಯಲ್ಲಿ ಹಾಕಿಸ್ತಾರೋ ಅವರ ಮಾವನ ಕೈಯಲ್ಲೋ? ಬಡ್ಕೊಂಡ್ರೂ ನಿಮ್ಗೆ ನೆತ್ತೀಗೋಗಲ್ಲ. ನಾಳೆಯಿಂದ ಪೂಜೆ ಶುರು ಆಗುತ್ತೆ. ಒಂದೂ ಒಳ್ಳೇದಾಗಿಲ್ಲ ನಮ್ಮ ಮನೇಗೆ ಅಂತಾನೆ ಎಲ್ಲ್ರೂ ಸೇರಿ ಏನೋ ಹೋಮ ಅಂತ ಮಾಡ್ತಾ ಇದ್ದಾರೆ. ಆರು ತಿಂಗಳಿಗೆ ಒಬ್ಬರು ಸಾಯೋದು ನಿಮ್ಮ ಮನೇಲಿ. ಒಂದು ಸರತಿಯಲ್ಲಿ ಜನ ಸತ್ತರು. ಯಾವ ಜನ್ಮದಲ್ಲಿ ಯಾರ್ಯಾರು ಅದೇನೇನು ಕರ್ಮ ಮಾಡಿದ್ರೋ, ಎಲ್ಲಾನೂ ನಾವು ಅನುಭವಿಸಬೇಕಾಗಿ ಬಂದಿದೆ ಈಗ. ನಿಮ್ಮಣ್ಣನ ಮಗಂಗೋ ಮದ್ವೇನೇ ಆಗ್ತಾ ಇಲ್ಲ. ಏನೋ ಈ ಹೋಮ ಮಾಡಿದ್ರೆ ಎಲ್ಲಾ ಸರೀ ಹೋಗುತ್ತಂತೆ. ಸ್ವಲ್ಪ ನೆಟ್ಟಗೆ ಇರಿ ಅಲ್ಲಿ. ಸ್ವಲ್ಪ ನೇಮ ಇರಲಿ. ಎಡವಟ್ಟು ಆದರೆ ನಮಗೆ ಆಗೋದು. ನಾಳೆ ಇಂದ, ಪ್ರತಿ ದಿನ ಪೂಜೆ ಮುಗಿದು ತೀರ್ಥ ಪ್ರಸಾದ ಕೊಡೋ ವರ್ಗೂ ಏನೂ ತಿನ್ನೋ ಹಾಗಿಲ್ಲ. ಇದಾದ್ರೂ ಸ್ವಲ್ಪ ನ್ಯಾಯವಾಗಿ ಮಾಡ್ರಿ. ವಯಸ್ಸಾಯ್ತು, ಈಗಲಾದ್ರು ಸ್ವಲ್ಪ ಸರಿ ಹೋಗ್ರಿ."

ರಮಾಬಾಯಿ ಹೀಗೆ ಹೇಳುತ್ತಲೇ ಇರುವಾಗಲೆ ಶೇಷಣ್ಣನ ಮೂಗಿಗೆ ಆ ವಾಸನೆ ಹೊಡೆದದ್ದು. ಉಪ್ಪಿಟ್ಟಿನ ವಾಸನೆ. ಅದೆಷ್ಟು ಗಾಢವಾಗಿ ಅವನನ್ನು ಆವರಿಸಿತ್ತೆಂದರೆ ಅದಕ್ಕೆ ಒಗ್ಗರಣೆಗೆ ಹಾಕಿದ ಕರಿಬೇವಿನ ಸೊಪ್ಪು ಬಲಿತದ್ದೆ, ಎಳೆಯದೆ ಎಂದು ಹೇಳುವಷ್ಟರ ಮಟ್ಟಿಗೆ. ಯಾರದ್ದಿರಬಹುದು, ಒಂದು ತುತ್ತಾದರೂ ರುಚಿಗೆ ಸಿಗಬಹುದೆ, ಅವರನ್ನ ಹಾಗೆ ಕೇಳಲು ಸಾದ್ಯವ , ನೋಡುವ ಎಂದು ಏಳಲು ಹೊರಟವ ಅದೇನಾಯಿತೊ ಸುಮ್ಮನೆ ಕೂತವ ಮತ್ತೆ ಕಿಟಕಿಯಿಂದ ಬರುತ್ತಿದ್ದ ಗಾಳಿಗೆ ಮುಖವೊಡ್ಡಿ ದೂರದ ಬೆಟ್ಟಗಳಲ್ಲಿನ ಬೋಡು ಬಂಡೆಗಳನ್ನೆ ದಿಟ್ಟಿಸುತ್ತಿದ್ದ.
**********
********
ಮೂರು ದಿನಗಳ ಕಾಲ ನಡೆಯುವ ಹೋಮ. ಪ್ರತೀ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ಏನೂ ತಿನ್ನದೆ ನೂರಾ ಒಂದು ಗಾಯಿತ್ರಿ ಜಪ ಮಾಡಬೇಕು. ಅದಾದ ನಂತರ ಹೋಮಕ್ಕೆ ಕುಳಿತುಕೊಳ್ಳಬೇಕು. ಪೂಜೆ ಹೋಮ ಎಲ್ಲಾ ಆದ ಮೇಲೆ ಮದ್ಯಾನ್ಹದ ಊಟ. ಶೇಷಣ್ಣನಿಗೆ ಯಾವುದನ್ನೂ ಮಾಡಬಾರದು ಎಂದೇನೂ ಇಲ್ಲದ ಕಾರಣವಾಗಿ, ಉಪವಾಸಕ್ಕೆ ಸ್ವಲ್ಪ ಕಷ್ಟವಾಗುತ್ತಾದರೂ, ಸಕ್ಕರೆ ಕಾಯಿಲೆಯಿಂದ ಬಹಳಷ್ಟು ಸುಸ್ತಾದ ಹಾಗೆ ಅನ್ನಿಸುತ್ತದೆಯಾದರೂ, ಮೂರೂ ದಿನಗಳು ಅವರು ಹೇಳಿದಂತೆ ಉಪವಾಸ, ಜಪ ಹಾಗು ಹೋಮ ಮಾಡುವುದೆಂದುಕೊಂಡಿದ್ದ. ಮೊದಲನೆಯದಿನ ಕುಳಿತವನಿಗೆ ಒಂದು ಹತ್ತು ಗಾಯಿತ್ರಿಗೆಲ್ಲಾ ತೂಕಡಿಸಿ, ಎದ್ದು ಮತ್ತೇ ತೂಕಡಿಸಿ ಹೇಗೋ ಏನೋ ಮಾಡಿ ನೂರಾ ಒಂದು ಗಾಯಿತ್ರಿಯನ್ನ ಜಪಿಸಿದನೋ ಇಲ್ಲವೋ ಅವನಿಗಂತೂ ನೂರೊಂದನ್ನು ಜಪಿಸಿದ್ದು ಖಾತ್ರಿಯಾಗಿ ಹೋಮವನ್ನೇನೋ ಮುಗಿಸಿದ್ದ. ತನ್ನ ಜೊತೆ ಇನ್ನೂ ಉಳಿದ ಅಣ್ಣಂದಿರು, ತಮ್ಮಂದಿರು, ಇವರಲ್ಲದೆ ಚಿಕ್ಕಪ್ಪ ದೊಡ್ಡಪ್ಪ ಅವರ ಕುಟುಂಬ ಹೀಗೆ ಎಲ್ಲರೂ. ಇಡೀ ಗೋತ್ರದವರು, ಸುಮಾರು ಮೂವತ್ತು ನಲವತ್ತು ಮಂದಿ ಜಪ ಮಾಡುವಾಗ, ಬಾಯಿ ಗಾಯಿತ್ರೀ ಮಂತ್ರವನ್ನೇನೋ ಜಪಿಸಿತ್ತಿದ್ದರೂ, ಕೈಯಲ್ಲಿನ ತುಳಸೀ ಮಣಿಗಳು ಮುಂದೆ ಹೋಗುತ್ತಿದ್ದರೂ, ಇಷ್ಟೊಂದು ಜನ ನಮ್ಮ ಮನೆಯವರ?, ಹಿಂದೆಲ್ಲ ಇದ್ದರ?, ನಾನು ಎಲ್ಲರನ್ನು ಎಲ್ಲಿ ನೋಡಿದ್ದೆ?, ಎಲ್ಲೋ ಕೆಲವರು ಮದುವೆಗೊ ಮುಂಜಿಗೊ ಸೀಮಂತಕ್ಕೋ ಮತ್ತೆನಕ್ಕೋ, ಅಥವಾ ಸತ್ತಾಗಲೋ ಬಂದಿರಲೇ ಬೇಕು. ನೋಡಿರಲೇ ಬೇಕು. ಆದರೂ, ಎಲ್ಲರೂ ಬಂದಿದ್ದರ?, ಎಲ್ಲರೂ ಎಲ್ಲಿ ಇದ್ದರು?, ಎಲ್ಲರೂ ನೆಂಟರೆ?, ಒಬ್ಬಬ್ಬರೊಡನೆ ಒಂದೊಂದು ಸಂಬಂಧ. ಎಲ್ಲವೂ ಸರಿ, ಆದರೂ ಇವರೆಲ್ಲಾ ಯಾರು?, ಯಾರೂ ನೆನಪಾಗುತ್ತಿಲ್ಲವಲ್ಲ, ತನ್ನ ನೆನಪಿನ ಶಕ್ತಿ ಕಳೆದುಹೋಗುತ್ತಿದೆಯ, ಇನ್ನೂ ೬೩ ವರ್ಷ ಅಷ್ತೆ. ಮನುಷ್ಯ ಇಷ್ಟು ಬೇಗ ನೆನಪಿನ ಶಕ್ತಿ ಕಳೆದುಕೊಳ್ಳುತ್ತಾನ?, ಯಾವುದು ನೆನಪಲ್ಲಿ ಉಳಿಯುವುದು?, ಯಾವುದು ಕಳೆಯುವುದು?, ತಿಳಿಯದೆ ಒದ್ದಾಡುತ್ತಿದ್ದ. ಎದುರಿಗೆ ಸಿಕ್ಕವರಲ್ಲರೂ "ಏನಪ್ಪಾ ಶೇಷಣ್ಣ, ಹೇಗಿದ್ದೀಯೊ?” ಅಂತಲೋ, ಮಾವ, ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ, ಕಕ್ಕ, ಇಲ್ಲ "ಏ ಶೇಷಣ್ಣ" ಅಂತ, ಏನೋ ಹೆಸರಿನಿಂದಲೋ ಹತ್ತಿರ ಬಂದು ಮಾತಿಗಿಳಿದಾಗ ಪ್ರಯತ್ನ ಪೂರ್ವಕವಾಗಿ ಮುಖದಲ್ಲಿ ಮೂಡುವ ನಗು, ಹಲ್ಲು ಕಿರಿದು ನಕ್ಕು, ‘ಹಾ ನಾ ಚನ್ನಾಗಿದ್ದೀನಿ' ಎಂಬೋ ಮಾತು. ಎಲ್ಲವೂ ಸರಿ, ಆದರೆ ಯಾರ ನೆನಪೂ ಮೂಡುತ್ತಿಲ್ಲವಲ್ಲ. ಆ ಹೆಸರುಗಳಿಗಿರುವ ಸಂಬಂಧದ ಅರ್ಥಗಳಾದರೂ ಏನು. ನಾನು ನಿಜಕ್ಕೂ ಇವರಿಗೇನಾಗಬೇಕು ಎಂಬೋ ಪ್ರಶ್ನೆಗಳು ಶೇಷಣ್ಣನಿಗೆ ಯಾವುದೇ ಒತ್ತಾಸೆಯಿಲ್ಲದೆ ಸಹಜವಾಗಿ ಜಪದ ಜೊತೆ ಜೊತೆಗೆ ಬಂದಾಗ, ಉಪವಾಸವಿದ್ದುದರಿಂದಲೇ, ಹಸಿವಿನಿಂದ ಹೀಗೆಲ್ಲಾ ಆಗುತ್ತೇನೊ ಎಂದು ತೂಕಡಿಸುತ್ತಲೇ ಜಪದಲ್ಲಿ ನಿರತನಾದ. ಎದುರುಗಿನ ಎಲ್ಲಾ ವ್ಯಕ್ತಿಗಳೂ ಒಂದು ಸಂಕೀರ್ಣ ಬಲೆಯಂತೆ ಕಂಡು, ಯಾರು ಯಾರು ಏನು ಎಂಬುದು ಗಾಬರಿಪಡಿಸಿಬಿಡುವ ಸಂದರ್ಭದಲ್ಲಿ ಅವನಿಗೆ ಬಸ್ಸಿನಲ್ಲಿ ಮೂಗಿಗೆ ಸೋಂಕಿದ ಉಪ್ಪಿಟ್ಟಿನಲ್ಲಿದ್ದ ಕರಿಬೇವಿನ ಸೊಪ್ಪಿನ ವಾಸನೆ ನೆನಪಾಗಿ ಏನನ್ನೋ ಮರೆತಿರುವುದು ನೆನಪಾಯಿತು.

ಮನೆಯಲ್ಲಾದರೆ ರಮಾಭಾಯಿ ಕೆಲಸಕ್ಕೆ ಹೊರಗೆ ಹೋಗುತ್ತಿದ್ದುದರಿಂದ, ಹೇಗೂ ಹೋಟೇಲು ನಡೆಸಿ ರೂಡಿಯಿದ್ದುದರಿಂದ, ಶೇಷಣ್ಣನದೆ ಮನೆಯಲ್ಲಿ ಅಡುಗೆ ತಿಂಡಿ ಎಲ್ಲಾ ಜವಾಬ್ದಾರಿ. ಬೆಳಗ್ಗೆ ಎದ್ದಾಗಿಂದ ಅಡುಗೆ ಕೆಲಸ ಇರುತ್ತಿತ್ತು. ರಮಾಭಾಯಿ ಕೆಲಸಕ್ಕೆ ಹೋದ ಮೇಲೆ ಟೀವಿ ನೋಡಿಕೊಂಡು ಇದ್ದು ಬಿಡುತ್ತಿದ್ದ. ಸಂಜೆಯಾಗುತ್ತಿದ್ದಂತೆ ರಮಾಭಾಯಿ ಮನೆಗೆ ಬಂದಿರುತ್ತಿದ್ದಳು, ಮತ್ತೇ ರಾತ್ರಿಯ ಊಟ ತಿಂಡಿ, ಇದು ಅವನ ನಿತ್ಯ ಕರ್ಮ .

ಊಟವಾದ ಮೇಲೆ ಒಂದು ಘಾಡವಾದ ನಿದ್ರೆಯಾದ ಪರಿಣಾಮ ಸಂಜೆ ಎದ್ದವನೆ ಹೊರಗೆ ಹೊರಟ. ಈ ಊರಿನಲ್ಲಿ ಅವರದೆ ಎಂದು ಮನೆಯಿರಲಿಲ್ಲ. ಊರ ಹೊರಗಿನ ಒಂದು ಆಶ್ರಮದಲ್ಲಿ ನಾಲ್ಕುದಿನದ ಮಟ್ಟಿಗೆ ಬಾಡಿಗೆಗೆ ಪಡೆದು ಅಲ್ಲೆ ಎಲ್ಲರೂ ಇದ್ದರು .

ದಾರಿಗುಂಟಾ ನಡೆವಾಗೆಲ್ಲಾ ಮತ್ತೆ ಅದೇ ರೀತಿ ಯಾರು ಯಾರೋ ಮಾತನಾಡಿಸ್ತಾ ಇದ್ದರೂ, ಎಲ್ಲರಿಗೂ ಪ್ರತಿಕ್ರಿಯಿಸುತ್ತಿದ್ದರೂ, ಯಾರೂ ಏಕೆ ತನ್ನ ನೆನಪಿಗೆ ಬರುತ್ತಿಲ್ಲ ಅಂತ ಅನ್ನಿಸುತ್ತಿದ್ದಾಗ, ಹೋಟೇಲಿನ ಬಳಿ ಕುಳಿತಿದ್ದ ನಾಗಣ್ಣನ ಗುರುತು ಸಿಕ್ಕಿದ್ದಕ್ಕೆ ಖುಷಿಯಾಗಿ, ಅಬ್ಬಾ ತನ್ನ ನೆನಪು ಪೂರ ಹೋಗಿಲ್ಲ, ಕೆಲವಾದರೂ ಉಳಿದಿದೆಯಲ್ಲ ಎಂದೆನಿಸಿ, ಅವನಿಗೆ ಇಡೀ ಆ ದಿನಗಳೆಲ್ಲ ಒಮ್ಮೆಗೇ ಒಂದು ಮೂಕೀ ಸಿನಿಮಾವನ್ನ fast forward ಮಾಡಿದರೆ ಆಗುತ್ತಲ್ಲ ಹಾಗೆ ಎದುರಿಗೆ ಕಾಣತೊಡಗಿತು.

ಈ ಹೋಟೆಲನ್ನ ನಡೆಸೋವಾಗ ಯಾರು ಬಂದರೂ ಬಾರದೇ ಇದ್ದರೂ ನಾಗಣ್ಣ ಮಾತ್ರ ನಿತ್ಯ ಬರುತ್ತಿದ್ದ. ಪೇಪರ್ ಓದಲಿಕ್ಕೆ ಅಂತ ಬಂದೇ ಬರುತ್ತಿದ್ದ. ಹಾಗೆ ಬಂದವ ಪೇಪರ್ರಿನ ಪ್ರತೀ ಸಾಲೂ ಓದುತ್ತಿದ್ದ. ಅವನು ಓದಿ ಮುಗಿಸುವಷ್ಟರಲ್ಲಿ ಹೋಟೇಲಲ್ಲಿ ಉಪ್ಪಿಟ್ಟು ಸಿದ್ದವಾಗಿರ್ತಿತ್ತು. ಆಗ ಮೊದಲ ಒಂದು ತುತ್ತನ್ನ ನಾಗಣ್ಣನಿಗೆ ಕೊಟ್ಟು, ಎಲ್ಲಾ ಸರಿಯಿದೆಯ ಅಂತ ಕೇಳಲೇ ಬೇಕಿತ್ತು. ಅವ ಎಲ್ಲಾ ಸರಿಯಿದೆ ಅಂತ ಹೇಳಿದಮೇಲಷ್ಟೆ ಶೇಷಣ್ಣನಿಗೆ ಸಮಾಧಾನ. ನಾಗನೋ ಎಂದೂ ಅದು ಸರಿಯಿಲ್ಲ, ಇದು ಕಡಿಮೆ, ಅದು ಹೆಚ್ಚು ಅಂತ, ಏನೂ ಹೇಳುತ್ತಿರಲಿಲ್ಲ. ಚನ್ನಾಗಿದೆ ಅಂತ ಮಾತ್ರಾ ಹೇಳುತ್ತಿದ್ದ. ಆದರೂ ಶೇಷಣ್ಣನಿಗೆ ಮೊದಲ ಒಂದು ತುತ್ತನ್ನು ಅವನಿಗೆ ನೀಡಿದರೇನೆ ಸಮಾಧಾನ. ಹಾಗೆ ಹೇಳಿದವನೆ ನಾಗಣ್ಣ ಹೊರಟುಹೋಗುತ್ತಿದ್ದ. ಅವ ಎಂದಿಗೂ ಹೋಟೇಲಿನಲ್ಲಿ ಇನ್ನೇನನ್ನೂ ಹೆಚ್ಚು ತಿನ್ನುತ್ತಿರಲಿಲ್ಲ. ಪ್ರತೀ ದಿನ ಪೇಪರ್ ಓದಲಿಕ್ಕೆ ಅಂತ ಬರುವ ರಾಮ, ಹಾಗೇ ಪೇಪರ್ ಓದಿ, ಶೇಷಣ್ಣನ ಒಂದು ತುತ್ತು ಉಪ್ಪಿಟ್ಟು ತಿಂದು ಚನ್ನಾಗಿದೆ ಅಂತ ಹೇಳಿ ಹೋಗುವುದು. ಅದಿಷ್ಟೂ ನೇರವಾಗಿ ಕಣ್ಣ ಮುಂದೆ ಹಾದು ಹೋದದ್ದು ಕಂಡು ಶೇಷಣ್ಣನಿಗೆ ತನ್ನ ನೆನಪು ಮರುಕಳಿಸಿದಂತಾಗಿ ಖುಷಿಯಾಗಿ, “ಅಲ್ಲೋ ನಾಗ ಹೇಗಿದ್ದೀಯೋ" ಅಂತ ಕೇಳಬೇಕು ಅಂತ ಬಾಯಿತೆರೆದವನೆ, ಅವನ ಮುಖ ಕಂಡದ್ದೆ, ಛೆ ಅದೇತಕ್ಕೆ ಸುಮ್ಮನೆ ಅಂತ ತೀರ್ಮಾನಿಸಿದವರಂತೆ ಸುಮ್ಮನೆ ನಡೆಯುತ್ತಿದ್ದರು.

“ನಾಗ, ಈಗ ಅದೆಲ್ಲಿ ಪೇಪರ್ ಓದುತ್ತೀಯೊ? ಈಗಲೂ ಓದುತ್ತಿಯೋ ಇಲ್ಲವೊ?

“ಹಾಂ ಓದ್ತಾ ಇದ್ದೀನಿ. ಎಲ್ಲೋ ಯಾರ ಮನೇಲೋ. ಅಂತೂ ಪೇಪರ್ ಬಂದೇ ಬರುತ್ತೆ. ಹಾಗೆ ಬಂದವರ ಮನೇಲಿ ಓದ್ತೇನೆ"

“ನಿಂಗೆ ರಾತ್ರಿ ನಿದ್ರೆ ಬರುತ್ತ? ರಾತ್ರಿ ನಿಂಗೆ ಹೆದರಿಕೆ ಆಗುತ್ತ?”

“ನಿದ್ರೆ ಬರುತ್ತೆ. ರಾತ್ರಿ ಹೆದರಿಕೆ ಏನೂ ಆಗೋಲ್ಲ. ಒಮ್ಮೆಮ್ಮೆ ನಿದ್ರೆಯಲ್ಲಿ ಏಳ್ತೇನೆ. ಅಷ್ಟು ಬಿಟ್ರೆ, ನಿದ್ರೆ ಅಂತೂ ಬರುತ್ತೆ.”

“ ನಾಗ, ನಂಗೆ ನಿದ್ರೇನೇ ಬರೋಲ್ವೋ. ಬರೋಲ್ಲ ಅಂದರೆ ಪೂರಾ ಬರೋಲ್ಲ ಅಂತ ಅಲ್ಲ. ಒಂಥರಾ ಬಹಳ ಕದಡಿದ ನಿದ್ರೆ. ಬೆಳಗ್ಗೆ ಎದ್ದಾಗ ರಾತ್ರಿ ನಿದ್ರೆ ಮಾಡಿದ್ದೆನ ಅಂತಾನೆ ತಿಳಿಯೋಲ್ಲ. ಒಂತರಾ, ಇಡೀ ರಾತ್ರಿ ಕೆಲಸ ಮಾಡ್ತಾ ಇದ್ದೀನೇನೋ ಅಂತ ಅನ್ನಿಸಿಬಿಡುತ್ತೆ ಗೊತ್ತ. ಅಕಸ್ಮಾತ್ತಾಗಿ ನಿದ್ರೆ ಬಂದದ್ದೇ ಆದರೆ, ಯಾವುದೋ ಹೊತ್ತಲ್ಲಿ ಒಮ್ಮೆಗೇ ಗಾಬರಿಯಾಗಿ ಎಚ್ಚರವಾಗಿ ಬಿಡುತ್ತೆ. ಬಹಳ ಗಾಬರಿಯಾಗಿರುತ್ತೆ ಗೊತ್ತ. ವಿಪರೀತ ಬೆವರ್ತಾ ಇರ್ತೀನಿ. ನಾನು ಯಾರು, ನಾನು ಇಲ್ಲಿ ಯಾಕೆ ಇದ್ದೀನಿ, ಯಾವುದೂ ತಿಳಿಯೋಲ್ಲ. ಜೋರು ಗಾಬರಿಯಾಗುತ್ತೆ. ಎದೆ ಜೋರು ಹೊಡೆದುಕೊಳ್ತಾ ಇರುತ್ತೆ. ಮೈಯೆಲ್ಲಾ ಬೆವರ್ತಾ ಇರುತ್ತೆ. ಏನೂ ಗೊತ್ತೇ ಆಗೋಲ್ಲ. ಇಪರೀತ ಭಯ ಆಗುತ್ತೆ. ಸುಮ್ಮನೆ ಕೂತಿರ್ತೀನಿ, ಏನು ತಿಳಿಯೋಲ್ಲ. ಆಮೇಲೆ ಅದೆಷ್ಟೋ ಸಮಯ ಆದ ಮೇಲೆ ಪಕ್ಕದಲ್ಲಿ ಮಲಗಿರೊ ರಮಾನ ನೋಡಿದಾಗ ಒಮ್ಮೆಗೇ ಎಲ್ಲಾನೂ ನೆನಪಾಗುತ್ತೆ. ನಾನು ಅವಳ ಗಂಡ. ನನಗೆ ಇಬ್ಬರು ಮಕ್ಕಳು. ಎಲ್ಲೋ ದೂರದಲ್ಲಿದ್ದಾರೆ. ನಾನು ಇಲ್ಲಿ ಇದ್ದೀನಿ. ಈ ಮನೆಯಲ್ಲಿ. ಅಡುಗೆ ಮಾಡುತ್ತೀನಿ. ನನ್ನದು ಅಂತ ಒಂದು ಊರಿತ್ತು. ಆ ಊರಲ್ಲಿ ನನ್ನಮ್ಮ, ಅಣ್ಣ, ತಮ್ಮ , ಅವರ ಕುಟುಂಬಗಳೂ, ಎಲ್ಲವೂ ಇತ್ತು. ಅದೇ ಊರಲ್ಲಿ ನನ್ನದೂ ಒಂದು ಹೋಟೇಲು ಇತ್ತು. ಅಲ್ಲಿಗೆ ಜನ ಬರ್ತಿದ್ರು. ನಾನು ಉಪ್ಪಿಟ್ಟು ಮಾಡ್ತಾ‌ ಇದ್ದೆ. ಆಮೇಲೆ ಅಮ್ಮ ಸತ್ಲು, ಅಣ್ಣ ಸತ್ತ, ತಮ್ಮ ಅವರ ಮಕ್ಕಳು ಊರು ಬಿಟ್ರು. ಒಂದು ದಿನ ನಾವೂ ಊರು ಬಿಟ್ಟೆವು. ಬೆಂಗಳೂರು ಸೇರಿದ್ವಿ. ಮಕ್ಕಳು ದೂರದ ಊರಿಗೆ ಹೋದರು. ಹೆಂಡತಿ ಕೆಲಸಕ್ಕೆ ಹೋಗ್ತಾಳೆ. ನಾನು ಮನೇಲಿ ಇರ್ತೇನೆ. ಹೀಗೆ ಎಲ್ಲವೂ. ಇನ್ನೂ ಹಲವು. ಕೆಲವೊಮ್ಮೆ ಒಟ್ಟಿಗೆ, ಕೆಲವೊಮ್ಮೆ ಬಿಡಿಬಿಡಿಯಾಗಿ ಸೇರಿಸಿ ತೀವ್ರವಾಗಿ ಒಂದೇ ಕ್ಷಣದಲ್ಲಿ ಇಡೀ ನನ್ನ ಬದುಕು ಒಂದು ಅಪ್ಪಟ ನೆನಪಾಗಿ ನಿದ್ರೆಯಿಂದೆಬ್ಬಿಸಿ ಬೆಚ್ಚಿಬೀಳಿಸುತ್ತೆ. ಆಗ ಗಾಬರಿಯಾಗುತ್ತೆ. ಅಷ್ಟೊಂದು ಸಂಗತಿಗಳನ್ನ, ಅಷ್ಟೊಂದನ್ನ ನಾನೇನಾ ಬದುಕಿದ್ದು ಎಂದು ತಿಳಿದು ಅಷ್ಟು ಕಡಿಮೆ ಅಂತರದಲ್ಲಿ ಹೀಗೆ ಎಲ್ಲವೂ ಎದುರಿಗೆ ಬಂದಾಗ ತಡೆಯೋಕೆ ಆಗೋಲ್ಲ. ಹೆದರಿಕೆ ಆಗುತ್ತೆ. ತಲೆ ಚಚ್ಚಿಕೊಂಡು ಬಿಡುವ ಅಂತನ್ನಿಸುತ್ತೆ. ಅದೇ ಬೆಳಗ್ಗೆ ಎದ್ದಾಗ ಯಾವುದೂ ನೆನಪಲ್ಲಿರೋದಿಲ್ಲ. ಆದರೆ ನೋವು ಇರುತ್ತೆ. ಏನೋ ಬೇಸರ. ರಾತ್ರಿ ಮಲಗಿದ್ದದ್ದೆ ನೆನಪಿಲ್ಲದ ರೀತಿಯಲ್ಲಿ ಬೇಸರ. ಹಾಲಿನವನದೋ, ಪೇಪರಿನವನದೋ ಸ್ವಲ್ಪ ಶಬ್ದವಾದರೂ ಇಡೀ ದೇಹ ಕಂಪಿಸಿ ಗಾಬರಿಗೊಂಡು ಕಿರುಚಿಕೊಂಡಿದ್ದೀನಿ ಅಂದೆನಿಸಿರುತ್ತೆ. ಆದರೆ ಹಾಗಾಗಿರುವುದಿಲ್ಲ. ಇಷ್ಟೆಲ್ಲಾ ಆದರೂನೂ ಬೆಳಗ್ಗೆಯ ನಂತರದ ದಿನ ಹಾಗೇ ಇರುತ್ತೆ. ದಿನದಲ್ಲಿ ಬದಲಾವಣೆಗಳೇನೂ ಇರೋದಿಲ್ಲ, ಹಾಗೇ ಇರುತ್ತೆ. ಏನು ನಡೀತಿದೆ ಅಂತ ಕೇಳಿಕೊಳ್ಳಬೇಕು ಎಂದೆನಿಸುವಷ್ಟರಲ್ಲಿ ಮದ್ಯಾನ್ಹದ ನಿದ್ರೆ ಬರುತ್ತೆ. ಮಲಗಿದ್ದಾಗ ಕನಸಲ್ಲಿ ಯಾವುದೋ ಹೆಣ್ಣು ಕಾಣುತ್ತಾಳೆ, ಯಾವಾಗಾದರೊಮ್ಮೆ ಸ್ಕಲನವಾದಂತೆ ಅನಿಸುತ್ತೆ ಆದರೆ ಅದೂ ಆಗಿರುವುದಿಲ್ಲ.

ನಾನೇಕೆ ಇವೆಲ್ಲ ನಿನ್ನ ಹತ್ರ ಹೇಳ್ತಿದ್ದೀನಿ ಗೊತ್ತ., ನೀನು ನನಗೆ ಯಾವುದೋ ಕನಸಿನ ಭಾಗದ ರೀತೀನೆ ಅನ್ನಿಸೋಕೆ. ನೀನು ನಿಜವಲ್ಲ. ನಿಜವೆಂದು ಅನ್ನಿಸೋದೇ ಇಲ್ಲ. ಉಳಿದವರೆಲ್ಲಾ ನಿಜ ಅನ್ನಿಸ್ತಾರೆ. ಅವರೆಲ್ಲಾ ನಗ್ತಾ ಇದ್ದಾರೆ. ಹೇಗಿದ್ದೀಯ ಅಂತ ಬಾಯಿ ತುಂಬಾ ಮಾತನಾಡಿಸ್ತಾರೆ. ಅದಕ್ಕೇ ಅವರೆಲ್ಲಾ ನಿಜ. ನೀನೂ ಇದ್ದೀಯ. ಸುಮ್ಮನೆ ಇದ್ದೀಯ . ನಿನ್ನ ಮುಖ ನೋಡು ಸ್ವಲ್ಪಾನೂ ನಗು ಇಲ್ಲ. ನೀನು ನನ್ನನ್ನ ಏನು, ಹೇಗಿದ್ದೀಯ ಅಂತಾನೂ ವಿಚಾರಿಸಿಲ್ಲ. ಆದ್ದರಿಂದ ನೀನು ನನ್ನ ಮಟ್ಟಿಗೆ ಇಲ್ಲಾ ಅಂತಾನೆ ಅನ್ನಿಸೋದು. ಅದಕ್ಕೇ ಹೇಳ್ತಿದ್ದೀನಿ.

ಮಲಗಿರೋವಾಗೆಲ್ಲ ಭೂಮಿ ನಡುಗುತ್ತಾ ಇದೆಯೇನೋ ಅಂತ ಅನ್ನಿಸುತ್ತೆ. ಒಮ್ಮೊಮ್ಮೆ ಅದೇ ಭೂಮಿ ನನ್ನನ್ನ ತಬ್ಬಿಕೊಂಡಂತೆ, ಅದರ ಮಡಿಲಲ್ಲ ಮಲಗಿರುವಂತೆ ಅನ್ನಿಸುತ್ತೆ. ಆದರೂ ಗಾಬರಿ. ಭಯ. ರಾತ್ರಿಯ ಪ್ರತೀ ಕ್ಷಣ ಭಯ. ಯಾರೋ ಬಂದಂತೆ, ಕಪ್ಪು ಬಿಳಿ ಬಣ್ಣಗಳು ಹಲವು ರೂಪಗಳು ಎದುರಿಗೆ ಬಂದಂತೆ, ಸುಮ್ಮನೆ ಬಂದಂತೆ ಹೆದರಿಕೆಯಾಗುತ್ತೆ. ಓಡಿ ಹೋಗಬೇಕು ಅಂತನಿಸುತ್ತೆ. ಯಾರೋ ಇದ್ದಾರೆ ಅಂತ ಸುಮ್ಮನೆ ಅನ್ನಿಸುತ್ತೆ. ಅಲ್ಲಿ ಯಾರೂ ಇರೋಲ್ಲ.

ಅಲ್ಲೋ ನಾಗ, ಇಲ್ಲೇ ನಮ್ಮ ಮನೆ ಇದ್ದದ್ದು ಅಲ್ವ. ಮನೆ ಮುಂದಿನ ಕಟ್ಟೆಯಲ್ಲೇ ಅಲ್ವ ಅಶ್ವತ್ಥ ವೃಕ್ಷ ಇದ್ದದ್ದು. ನೋಡು ಎಲ್ಲವನ್ನೂ ದೇವಸ್ಥಾನಕ್ಕೆ ಕೊಟ್ಟು ಬಿಟ್ಟಿದ್ದಾರೆ. ಆದರೂ ನನ್ನ ಹೋಟೇಲು ಇಲ್ಲೇ ಇದೆಯಲ್ಲ, ಅದಕ್ಕೆ ಮೆಚ್ಚಲೇ ಬೇಕು. ಒಂದಿಷ್ಟು ಜೇಡ ಕಟ್ಟಿದೆ ಒಳಗೆಲ್ಲಾ. ಯಾರು ಯಾರು ಹೋಟೆಲನ್ನ ನಡೆಸ್ತೇವೆ ಅಂತ ಬಂದಿದ್ರು. ಅದೇಕೋ ಯಾರಿಗೂ ಆಗಲಿಲ್ಲ ನೋಡು.

ಈ ಮನೆ ಇತ್ತಲ್ಲ, ಇಲ್ಲೇ ಅಲ್ಲೇನೋ ಮಂಜ, ನನ್ನ ತಮ್ಮ ಬಜ್ಜಿ ಮಾರ್ತಾ ಇದ್ದದ್ದು. ನಿಂಗೆ ಗೊತ್ತ ಅಣ್ಣಂದು ಅಲ್ಲಿ ಅಂಗಡಿ ಇತ್ತು. ಅವನ ಅಂಗಡಿ, ನನ್ನ ಹೋಟೆಲು, ಇವನದು ಸಂಜೆ ಬಜ್ಜಿ. ಇಲ್ಲೊಂದು ಭಾವಿ ಇತ್ತು. ಯಾವತ್ತೂ ನೀರಿರುತ್ತಿರಲಿಲ್ಲ. ಆದರೂ ಆ ಭಾವಿ ತೆರೆದೇ ಇರುತ್ತಿತ್ತು. ಅದನ್ನೂ ಈಗ ಮುಚ್ಚಿಯಾಗಿದೆ. ನಾವು ನಿಂತಿರೋದೆ ಹಾಗೆ ಮುಚ್ಚಿರುವ ಬಾವಿಯ ಮೇಲೆ ನೋಡು. ಬಾವಿಯೊಳಗೆ ನಮ್ಮ ಅತ್ತೇನೋ ಅವಳ ಮಗಳೋ, ಸರಿಯಾಗಿ ನೆನಪಿಲ್ಲ, ಅವಳು ಮುತ್ತೈದೆ ಅಂತೆ, ಗರ್ಬಿಣಿ ಬೇರೆ ಆಗಿದ್ದಳಂತೆ, ಬಿದ್ದು ಸತ್ತಿದ್ದಳಂತೆ. ಹಾಗಾಗಿ ಊರಿಗೆ ಕೇಡು ಅಂತ ಆ ಬಾವಿಯಿಂದ ಯಾರೂ ನೀರನ್ನ ತೆಗೆದುಕೊಂಡು ಹೋಗುತ್ತಿರಲಿಲ್ಲ. ಈಗ ಹಾಗೆ ತೆರೆದು ಇದ್ದ ಬಾವಿಯನ್ನ ಮುಚ್ಚಿದ್ದಾರೆ. ಒಳ್ಳೇದಾಯ್ತು. ನಾವು ನೋಡು ಹೀಗೆ ಯಾರೋ ಸತ್ತ ಬಾವಿಯಲ್ಲಿ, ಮುಚ್ಚಿದ ಮಣ್ಣಿನ ಮೇಲೆ ನಿಂತು ಏನೇನೋ ಮಾತಾಡ್ತಾ ಇದ್ದೀವಿ.

ಇವರಿಗೆಲ್ಲಾ ನೆನ್ನೆ ಪಿಂಡ ಇಟ್ಟು ಬಂಡೆವು. ಯಾರ್ಯೋರೋ ಸತ್ತೊದ್ದಾರಂತೆ ನಮ್ಮ ಮನೇಲಿ. ಯಾರಿಗೂ ನಾವು ಪಿಂಡ ಇಟ್ಟಿರಲಿಲ್ಲವಂತೆ. ಹಾಗಾಗಿ ನಮಗೆ ಈಗ ಈ ಪರಿಸ್ಥಿತಿ ಅಂತ ಯಾರೋ ಹೇಳಿದರಂತೆ. ಹಾಗಾಗಿ ಗೊತ್ತಿರುವ ಗೊತ್ತಿಲ್ಲದ ಎಲ್ಲಾ ಆತ್ಮಗಳಿಗೂ ಪ್ರೇತಾತ್ಮಗಳಿಗೂ ನೆನ್ನೆ ಪಿಂಡ ಇಟ್ಟು ಬಂದೆವು. ಎಲ್ಲರೂ ತಿಂದು ಸುಖವಾಗಿದ್ದು, ನಮ್ಮನ್ನೂ ಸುಖವಾಗಿರಿಸಲಿ ಅಂತ.

ನಾನೂ ಅವುಗಳಿಗೆ ಪಿಂಡ ಇಟ್ಟೆ. ನನಗೆ ಈಗ ಸರಿಯಾಗೆ ನಿದ್ರೆ ಬರುತ್ತಾ?. ನನ್ನ ನಿದ್ರೇಗೆ, ಈ ಪರಿಸ್ಥಿತಿಗೆ ಇದೇ ಗೊತ್ತಿಲ್ಲದ ಆತ್ಮಗಳೇ ಕಾರಣಾನ?, ಈಗಲಾದರೂ ನನಗೆ ನಿದ್ರೆ ಬರಿಸುತ್ತಾ ?. ಇರು ಅವುಗಳಿಗೆ ಒಮ್ಮೆ ಜೋರಾಗಿ ಒಂದು ಸರಿ ಹೇಳಿ ಬಿಡ್ತೇನೆ. ಅವುಗಳಿಗೆ ಕೇಳುತ್ತೋ ಇಲ್ಲವೋ "ಓ ಆತ್ಮಗಳೆ, ಪ್ರೇತಾತ್ಮಗಳೆ, ದಯವಿಟ್ಟು ನನಗೆ ನಿದ್ರೆ ಹೋಗಲು ಬಿಡಿ, ನಿಮಗೆ ಅದೆಷ್ಟು ಬಾರಿ ಬೇಕಾದ್ರೂ ಪಿಂಡ ಇಡಲು ನಾನು ಸಿದ್ದ".

ಅದ್ಯಾವಾಗ ಇಬ್ಬರೂ ಬೇರೆಯಾಗಿದ್ದರೋ ಇಬ್ಬರಿಗೂ ತಿಳಿಯಿತೋ ಇಲ್ಲವೋ ಅವರಿಗೂ ತಿಳಿಯಲಿಲ್ಲ. ಹೀಗೆ ಮಾತು ಮುಗಿಸಿದವನೆ ಶೇಷಣ್ಣ ಯಾರೂ ಹಿಂಬಾಲಿಸುತ್ತಿಲ್ಲ ಎಂದು ಖಾತ್ರಿಪಡಿಸಿಕೊಂಡು ನೇರ ನದಿಯೆಡೆಗೆ ನಡೆದ. ಶೇಷಣ್ಣನಿಗೆ ಯಾವಾಗಲಾದರೊಮ್ಮೆ ಬೇಸರವಾದರೆ ಇಲ್ಲಿಗೆ ಬರುವುದು ವಾಡಿಕೆ. ಯಾಕೋ ಮಾಡಿದ ಕೆಲಸ ಸಾಕಾಯಿತು ಅಂತ ಅನ್ನಿಸಿದ್ದೇ ತಡ, ಇವತ್ತು ಹೋಟೇಲು ಸಾಕು ಎಂದು ಮುಚ್ಚಿ ನೇರ ಇಲ್ಲಿಗೆ ಬಂದು ಬಿಡುತ್ತಿದ್ದ. ನದಿಯ ಪಕ್ಕದ್ದೇ ಜಮೀನು. ನದಿಯ ನೀರೆ ಜಮೀನಿಗೂ. ಹೀಗೆ ಜಮೀನಿನ ಮುಖಾಂತರ ಹೋದಾಗ ನದಿಯಲ್ಲೊಂದು ಬಂಡೆ ಸಿಗುತ್ತಿತ್ತು. ಆ ಬಂಡೆ ಅವನ ನೆಚ್ಚಿನ ಬಂಡೆ. ಅಲ್ಲಿ ಕೂರಬೇಕು. ಆ ಬಂಡೆಯಮೇಲೆ ಕೂತಾಗ ಆ ಬಂಡೆಯ ಸುತ್ತಾ ಹರಿಯುವ ನೀರಲ್ಲಿ ಕಾಲಾಡಿಸುತ್ತಾ ಆಕಾಶ ನೋಡುತ್ತ ಕೂತನೆಂದರೆ ಮುಗಿಯಿತು, ಬೇರೆ ಯಾರಾದರೂ ಬಂದು ಅವನನ್ನು ಎಬ್ಬಿಸಿದರೇನೆ ಅವನಿಗೆ ಮತ್ತೆ ಜಗತ್ತು ಕಾಣುತ್ತಿದ್ದದ್ದು. ಹಾಗೆ ಮೈ ಮರೆಯುತ್ತಿದ್ದ. ಅಲ್ಲಿಂದ ಏನೇನೆಲ್ಲಾ ಕಂಡಿದ್ದ. ಈ ನದಿ ಜೀವ ನದಿಯೇನೂ ಅಲ್ಲ. ವರ್ಷ ಪೂರ ಏನೂ ಹರಿಯೋಲ್ಲ. ಮಳೆಗಾಲದಲ್ಲಿ ಜೋರು ಮಳೆಯಾದರೆ ಆ ಮಳೆ ನೀರಿಂದ ಹರಿಯುವ ನದಿ. ಮೇಲಿನ ಪ್ರದೇಶದಲ್ಲಿ ಮಳೆಯಾಗಬೇಕು. ಹೀಗೆ ಎತ್ತರದಲ್ಲಿ ಮಳೆಯಾದರೆ ಆ ನೀರು ನದಿಯಾಗಿ ಕೆಳಗೆ ಹರಿಯುತ್ತಿತ್ತು. ಒಮ್ಮೆ ಹೀಗೆ ಆ ಬಂಡೆಯ ಮೇಲೆ ಕೂತಿದ್ದಾಗ ಮೇಲಿನ ಪ್ರದೇಶದಲ್ಲೆಲ್ಲೋ ಮಳೆಯಾದದ್ದರಿಂದ ನೀರು ಹರಿಯುತ್ತಾ ಬರುತ್ತಿತ್ತು. ಬೇಸಿಗೆ ಕಳೆದಿತ್ತು. ಇನ್ನೂ ಮಳೆಯಾಗಿರಲಿಲ್ಲ. ಈ ಸಮಯದಲ್ಲಿ ಮೊದಲ ಬಾರಿಗೆ ಹರಿಯುತ್ತಿತ್ತು.

ಹಾಗೆ ನದಿ ಮೊದಲ ಬಾರಿಗೆ ಹರಿಯುವುದನ್ನ ಅವ ಕಾಣುತ್ತಿದ್ದ. ಕೆಳಗೆ ಬಿಸಿಲಿಂದ ಬೆಂದಿದ್ದ ಭೂಮಿ ಒಂದೇ ಒಂದು ಹನಿಯನ್ನೂ ಮುಂದಕ್ಕೆ ಬಿಡುವುದಿಲ್ಲವೆಂದೂ, ಎಲ್ಲವನ್ನೂ ಕುಡಿಯಲು ತನ್ನನ್ನು ತಣಿಸಿಕೊಳ್ಳಲು ಹೊರಟಾಗ, ನೀನೆಷ್ಟೇ ಕುಡಿದರೂ ನೀನೂ ತಣಿಯುತ್ತೀಯೆ, ತಣಿದಾಗ ನಾ ಮುಂದಕ್ಕೆ ಸಾಗಿಯೇ ಸಾಗುತ್ತೀನಿ ಎಂದು ನದಿ ಹರಿಯುತ್ತಿತ್ತು. ಹಾಗೆ ಭೂಮಿ ನೀರ ಹೀರುವಾಗ ಕೆಳಗಿಂದ ಏಳುವ ಗಾಳಿ ಗುಳ್ಳೆಗಳು ಹರಿಯುವ ನೀರನ್ನು ಕುದಿಯುತ್ತಿದೆಯೇನೋ ಎಂದು ಭಾಸವಾಗುವಂತೆ ತೋರುತ್ತಿತ್ತು. ಕಣ್ಣಳೆತೆಗೆ ಸಿಕ್ಕ ಅಷ್ಟೂ ಭೂಮಿಯಲ್ಲಿ ಹರಿಯುವ ನೀರು, ಕೆಳಗಿನ ಬಿಸಿ ಭೂಮಿಯ ಒಳಗಿಂದ ಏಳುತ್ತಿದ್ದ ಗಾಳಿ ಬುಗ್ಗೆಗಳೊಟ್ಟಿಗೆ ಇಡೀ ಭೂಮಿಯ ಕುದಿತ ಕಂಡಿತ್ತು.

ಆಗಲೇ ಅವನಿಗೊಂದು ಆಸೆ ಕಾಡಿತ್ತು. ಅದೇ ರೀತಿ, ನದಿ ಹಿಂತಿರುಗುವಾಗ, ಬತ್ತುವಾಗ, ಅದ್ಯಾವ ರೀತಿ ಕಾಣುತ್ತದೆ. ಅದ್ಯಾವ ರೀತಿ ಭೂಮಿ ನೀರು ಭೇರ್ಪಡುತ್ತದೆ, ನೋಡಬೇಕೆಂದು ಬಹುವಾಗಿ ಆಶಿಸಿದ್ದ. ಅದೆಷ್ಟೋ ಮಂದಿ ಹೇಳಿಯೂ ಇದ್ದರು, ನದಿ ಹಿಂತಿರುಗುವಾಗ ನೋಡಬಾರದು ಅಂತ, ಆದರೂ ಅದೆಷ್ಟೇ ಕಾದರೂ ಎಂದಿಗೂ ಅವನಿಗೆ ನದಿ ಹಿಂತಿರುಗುವುದನ್ನ ಕಾಣಲಿಕ್ಕೆ ಆಗಿರಲಿಲ್ಲ.

ಜಮೀನಿಗೆ ಬಂದವನೆ ನದಿಗೋಗಿ ಸ್ವಲ್ಪ ಹೊತ್ತು ತಾನು ಕೂರುತ್ತಿದ್ದ ಬಂಡೆಯ ಮೇಲೆ ಕೂರಬೇಕೆನಿಸಿತು. ಆದರೆ ಇಲ್ಲಿ ಯಾವುದು ನದಿ? ಎಲ್ಲಿದೆ ಮರಳು? ಎಲ್ಲಿದೆ ತಾನು ಯಾವಾಗಲೂ ಬಂದು ಕೂರುತ್ತಿದ್ದ ಆ ಬಂಡೆ.

ಇಲ್ಲಿ ನದಿಯೊಂದು ಹರಿಯುತ್ತಿತ್ತು ಎಂದು ಹೇಳಲಿಕ್ಕೆ ಆ ಕಡೆಯಿಂದ ಈ ಕಡೆಯವರೆಗೆ ಇರುವ ಬ್ರಿಡ್ಜಿನಿಂದ ಮಾತ್ರ ತಿಳಿಯಲು ಸಾದ್ಯವಾಗಿರುವಂತಹ ಸ್ಥಿತಿ. ಸುಮಾರು ವರ್ಷಗಳಿಂದ ಸರಿಯಾಗಿ ಮಳೆಯಿಲ್ಲ. ಮರಳು ನಗರ ಸೇರಿದೆ. ನದಿಯಲ್ಲಿ ಮರಳಿಲ್ಲ. ಇರುವುದೆಲ್ಲಾ ಬರೀ ಗುಂಡಿಗಳು. ಮರಳು ತೆಗೆದ ದೊಡ್ಡ ದೊಡ್ಡ ಗುಂಡಿಗಳು. ಸುತ್ತಲೂ ಇರುವ ಜಾಗದಲ್ಲಿ ಬರೀ ಕಳ್ಳಿ ಕಿಡಗಳು, ಮುಳ್ಳು ಜಾಲಿ ಗಿಡಗಳು ಬೆಳೆದಿವೆ. ಅದರೊಳಗೆ ಆ ಮುಳ್ಳ ಕೊಂಪೆಯ ಮದ್ಯದಲ್ಲೇ ಎಲ್ಲಾದರೂ ತನ್ನ ಬಂಡೆ ಸಿಗಬಹುದ ಎಂದು ಹುಡುಕತೊಡಗಿದವನಿಗೆ, ಅದು ಸಿಗದೆ ತನಗೆ ವಯಸ್ಸಾಗಿದ್ದಕ್ಕೆ ಇಲ್ಲಿ ಸಿಗುತ್ತಿಲ್ಲವೋ , ಇಲ್ಲವ ಈ ನದಿಗೆ, ಈ ಭೂಮಿಗೆ ವಯಸ್ಸಾಗಿದೆಯೋ ತಿಳಿಯದೆ ಹಾಗೇ ಕುಸಿದಾಗ ಕೆಳಗಿನ ಮುಳ್ಳು ಕಾಣದೆ ಅವನ ತಿಕಕ್ಕೆ ಚುಚ್ಚಿಕೊಂಡು ಏಳಲಾರದೆ, ಕೂಡಲೂ ಆಗದೆ ತನ್ನ ಈ ಅಸಾಹಾಯಕ ಪರಿಸ್ಥಿತಿಗೆ ನೊಂದು ಕಿರುಚಿ, ಆ ಮುಳ್ಳನ್ನು ತೆಗೆಯಲು ಹೋಗಿ ಅದು ಮತ್ತೆ ಕೈಗೆ ಚುಚ್ಚಿದಾಗ ನೋವು ತಾಳಲಾರದೆ ಜೋರಾಗಿ ಅಳಲಾರಂಬಿಸಿದಾಗ, ಅವನ ಅಳು ಆ ನದಿಯಲ್ಲಿ ಪ್ರತಿಧ್ವನಿಸಿ ಅದೆಷ್ಟೋ ಆಕ್ರಂದನಗಳು ಬೆರೆತು ಒಮ್ಮೆಲೆ ಎಲ್ಲ್ಲರೂ ಅಳುತ್ತಿರುವವರಂತೆ ಕೇಳಲಾರಂಬಿಸಿದಾಗ, ಏನೂ ಮಾಡಲೂ ತೋಚದೆ ಹಾಗೆಯೇ ರಕ್ತ ಹರಿವ ಮೈಯಿಂದ ತಾನಿದ್ದ ಮನೆಯೆಡೆಗೆ ನಡೆದ. ಈಗ ಹಿಂತಿರುಗುವ ದಾರಿಯೂ ಮರೆತಿತ್ತು. ಯಾವುದೋ ದಾರಿಯಲ್ಲಿ ಹಿಂತಿರುಗಿ ಮನೆ ಸೇರಿದರೆ ಸಾಕಿತ್ತು. ದಾರಿಗುಂಟಾ ನಡೆವಾಗೆಲ್ಲಾ ಅನುಭವಿಸಿದ್ದು ಮುಳ್ಳು ಚುಚ್ಚಿದ ಬರೀ ನೋವು.
**********
********
ಅದೆಷ್ಟೇ ನೋವಿದ್ದರೂ ಕಡೆಯ ದಿನದ ಜಪ ಹಾಗೂ ಹೋಮ ಮಾಡಿಬಿಟ್ಟರೆ ಮನೆಯವರಿಗೆಲ್ಲರಿಗೂ ಒಳಿತಾಗುವುದೆಂಬ ಕಾರಣದಿಂದಲೋ, ಇದೊಂದು ದಿನವಲ್ಲವ ಆಗಿ ಹೋಗಲಿ ಅಂತಲೋ, ಏನೋ ಶೇಷಣ್ಣ ಒಪ್ಪಿ ದೇವಸ್ಥಾನಕ್ಕೆ ಬಂದಿದ್ದ. ಹಿಂದಿನ ದಿನ ತಿಕಕ್ಕೆ ಮುಳ್ಳು ಚುಚ್ಚಿದ್ದರಿಂದ ಅವನಿಗೆ ಕೂರಲು ಆಗದಾದ ಕಾರಣ ನಿಂತೇ ಗಾಯತ್ರೀ ಜಪಿಸುವುದೆಂದು ನಿಂತೇ ಜಪಿಸುತ್ತಿದ್ದ. ಆ ನೋವಿಗೋ ನೆನ್ನೆಯ ದಿನ ತಿಂದದ್ದು ಸರಿ ಹೋಗದ ಕಾರಣಕ್ಕೋ , ನೋವಿಗೆ ತೆಗೆದುಕೊಂಡ ಮಾತ್ರೆಯಿಂದಲೋ ಹೊಟ್ಟೆಯೆಲ್ಲಾ ಒಂದು ರೀತಿಯಲ್ಲಿ ಗುಳ ಗುಳ ಎನ್ನುತ್ತಿತ್ತು. ಕಕ್ಕವೋ, ಹೂಸೋ ತಿಳಿಯದಾದರೂ ಈ ಜಪವೊಂದು ಮುಗಿದು ಹೋಗಲಿ ಆಮೇಲೆ ಹೋದರಾಯಿತು ಎಂದು ಕಷ್ಟಪಟ್ಟು ತಡೆದುಕೊಂಡಿದ್ದ. ಆಗಲೇ ಅನಾಹುತ ಸಂಭವಿಸಿದ್ದು. ಆಗಲೇ ದೇವಸ್ಥಾನಕ್ಕೆ ನಮಸ್ಕಾರಕ್ಕೆ ಅಂತ ರಾಮಕ್ಕ ಬಂದದ್ದು. ಆಕೆ ಕಂಡದ್ದೇ ಅವಳನ್ನು ತಕ್ಷಣ ಗುರುತಿಸಿದವನಿಗೆ ಬಸ್ಸಿನಲ್ಲಿ ಬಂದಿದ್ದ ಉಪ್ಪಿಟ್ಟಿನಲ್ಲಿದ್ದ ಕರಿಬೇವಿನ ಸೊಪ್ಪಿನ ವಾಸನೆ ನೆನಪಾಗಿ ಜಪ ತಪ್ಪಿದ್ದೇ ಊಸೆಂದು ಬಿಟ್ಟವನಿಗೆ ಗೊತ್ತಾದದ್ದು ಅದು ಬೇದಿಯೆಂದು. ಭಾರೀ ಶಬ್ದದಿಂದ ಹೊರಬಂದದ್ದರಿಂದ ಎಲ್ಲರಿಗೂ ತಿಳಿದು ಅವರವರ ಜಪಗಳು ಭಗ್ನವಾಗಿ ಅಲ್ಲೊಂದು ಕೋಲಾಹಲವೇ ನಿರ್ಮಾಣವಾದ ಸಂದರ್ಭದಲ್ಲಿ ಶೇಷಣ್ಣನಿಗೆ ರಾಮಕ್ಕನ ಮುಖ ತಪ್ಪ ಬೇರೇನೂ ಕಾಣದೆಂಬಂತೆ ಅವಳನ್ನೂ, ಅವಳ ಪೂಜೆಯನ್ನೂ ದಿಟ್ಟಿಸುತ್ತಿದ್ದ. ರಮಾಬಾಯಿ ತಕ್ಷಣ ಎದ್ದವಳೆ ಶೇಷಣ್ಣನ್ನ ಬಚ್ಚಲಿಗೆ ಕರೆದುಕೊಂಡು ಹೋಗಿ ಬಂದು ಅಲ್ಲಿದ್ದವರಿಗೆಲ್ಲಾ ಕ್ಷಮೆಕೇಳಿ ಆಗಿದ್ದ ಗಲೀಜನ್ನೆಲ್ಲಾ ನೀರು ಬಟ್ಟೆ ತಂದು ವರೆಸುತ್ತಿದ್ದಾಗ, ಹೇಗಾದರೂ ಈಗ ರಾಮಕ್ಕನ ಮನೆಗೋಗಿ ಕರಿಬೇವಿನ ಸೊಪ್ಪಿನ ಒಗ್ಗರಣೆ ಹಾಕಿದ ಉಪ್ಪಿಟ್ಟು ಮಾಡಲೇ ಬೇಕೆಂದು ಶೇಷಣ್ಣ ನಿರ್ದರಿಸಿದ್ದ.

******************

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ