ಹುಟ್ಟು ಹಬ್ಬದ ಪ್ರಯುಕ್ತ


ಕಿಟಕಿಯ ಪಕ್ಕದ ಸೀಟೇ ಬೇಕೆಂದು
ಹಟ ಹಿಡಿದು ಕೂತಿದ್ದೆ
ನನಗಾಗ ನಾಲ್ಕು ವರ್ಷಗಳಿರಬಹುದು
ಆಸ್ಪತ್ರೆ   ಹತ್ತಿರಾದಾಗ ಕುತೂಹಲ
'ತಮ್ಮ ಹುಟ್ಟಿದ್ದಾನೆ ನಿಂಗೆ'  ಎಲ್ಲರೂ ಹೇಳಿ ಕಳುಹಿಸಿದ್ದರು.

ಅಮ್ಮ ಅತ್ತದ್ದನ್ನು ನಾ ಕಂಡಿರಲಿಲ್ಲ
ಯಾಕೆ ಅಳುತ್ತಿದ್ದಾಳೆ ಎಂದೂ ನನಗೆ ತಿಳಿಯಲಿಲ್ಲ
ನನ್ನ ತಮ್ಮ ಎಲ್ಲಿ ಎಂದು ಯಾರನ್ನು ಕೇಳುವುದು
ಹುಟ್ಟಿ ಮೂರು ದಿನವಾಗಿತ್ತು ಅಷ್ಟೆ
ಅವನು ಉತ್ತರಿಸುವುದಿಲ್ಲವಲ್ಲ
ಅಮ್ಮನಿಗೆ ನಾ ಹುಟ್ಟುವ ಮುನ್ನ ಗರ್ಭಪಾತವಾಗಿತ್ತಂತೆ

-------------------------------------------------------
-------------------------------------------------------

ಆಟೋ ಹತ್ತಿದಾಗ  ನಮ್ಮವಳ   ಪಕ್ಕದಲ್ಲಿ ನಾ ಕೂತಿದ್ದೆ
ತಲೆ ತಿರುಗುತ್ತದೆಂದಾಗ ಹಣೆ ಒತ್ತುತ್ತಿದ್ದೆ
ಸುಸ್ತಾಗಿದ್ದಳು ಬಹಳ ಬಳಲಿದ್ದಳು
ಆಸ್ಪತ್ರೆ ಹತ್ತಿರ ಆದಂತೆ ಗಾಬರಿ ಭಯ
ಏನೇನೋ ಪರೀಕ್ಷೆಗಳು

ಸ್ತ್ರೀ ದೇಹ ಸಂಬಂಧಿತ ಕಾಯಿಲೆ ನನಗೆ ಅರ್ಥವಾಗಲಿಲ್ಲ
ವೈಜ್ಞಾನಿಕವಾಗಿ ವಿವರಿಸಿದಳು ಒಪ್ಪಿಕೊಂಡೆ
ತಮ್ಮನನ್ನು ಹೊತ್ತು ಹೂತು ಬಂದ ಅಪ್ಪ ನೆನಪಾದ
ಇವಳು ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದಳು

ಹುಟ್ಟು ಹಬ್ಬದ ದಿನ
ಅಪ್ಪ ಅಮ್ಮ ಮತ್ತು ನನ್ನವಳ ಪಾದ ಮುಟ್ಟಿ ನಮಸ್ಕರಿಸಿದೆ
ಯಾಕೋ ಹುಟ್ಟು ಧನ್ಯವೆಂದೆನಿಸಿ

2 ಕಾಮೆಂಟ್‌ಗಳು:

  1. nimma e kavana odee kushi aagute. nimma anubhavagalu bahala chennagi shabda rupadali baritiri.....
    sambadhagalu vandu retiya badhagalu ,naavu swatantraragi badukalu sadhave.... yava sambadhavillade huttu sadhave....

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಕಮೆಂಟಿಸಿದ್ದಕ್ಕೆ ಧನ್ಯವಾದಗಳು ---

      ಒಳ್ಳೆಯ ಪ್ರಶ್ನೆ. ಒಂದಾನೊಂದು ಕಾಲದಲ್ಲಿ ನಾನೂ ಹೀಗೆಯೆ ಆಲೋಚಿಸುತ್ತಿದ್ದೆ. ಸಂಬಂಧಗಳೆಂದರೆ ಬಂಧನಗಳೆಂದೂ, ಪ್ರತೀ ಸಂಬಂಧದ ಹಿಂದೆ ಒಂದು ಸ್ವಾರ್ಥವಡಗಿರುತ್ತದೆಂದೂ ಭಾವಿಸಿದ್ದೆ. ಆದರೆ, ನಂತರದ ನನ್ನ ಅನುಭವಗಳು ಮೇಲಿನ ಹೇಳಿಕೆಗೆ ವ್ಯತಿರಿಕ್ತವಾಗಿತ್ತು. ಅದೆಷ್ಟೊ ನಿಸ್ವಾರ್ಥ ಸಂಬಂಧಗಳ ಪ್ರೀತಿ ನನ್ನೆಡೆಗೆ ಹರಿದು ಬಂತು.

      ಬಂಧನ ಎಂದರೆ ಏನು? ಹಾಗು ಸ್ವಾತಂತ್ರ್ಯ ಅಂದರೆ ಏನು? ಇವುಗಳ ಉತ್ತರಗಳನ್ನು ಸಿದ್ದ ಮಾದರಿಯಿಂದ ಸ್ವೀಕರಿಸಿದಾಗ ಸಮಸ್ಯೆಗಳಾಗುತ್ತದೆ ಎಂದು ಭಾವಿಸಿದೆ. ಇವುಗಳಿಗೆ ನಮ್ಮ ಅನುಭವಗಳಲ್ಲೆ ಉತ್ತರಗಳನ್ನು ಹುಡುಕಬೇಕು.

      ನನ್ನ ತಾಯಿ ತಂದೆಯರ ಸಂಬಂಧ ಎಂದೂ ನನಗೆ ಬಂಧನವೆಂದೆನಿಸಿಲ್ಲ. ನನ್ನವಳ ಜೊತೆಯಲ್ಲೂ ಸಹ ಸಂಬಂಧವೆಂದೂ ಬಂಧನವೆಂದೆನಿಸಿಲ್ಲ. ಒಂದು ಹಂತದಲ್ಲಿ ಈ ಸಂಬಂಧವೆ ನನ್ನನ್ನು ಅನಂತ ಸ್ವಾತಂತ್ರ್ಯದೆಡೆಗೆ ಕರೆದೊಯ್ಯುತ್ತಿದೆ. ನನ್ನ ಅವಳ ಸಂಬಂಧದಲ್ಲೆ ನನ್ನ ಹುಟ್ಟನ್ನು ನಾನು ಅನುಭವಿಸುತ್ತಿದ್ದೇನೆ ಹಾಗು ಆ ಸಂಬಂಧದಲ್ಲೆ ಪ್ರತಿ ಹಂತದಲ್ಲೂ ಮರುಹುಟ್ಟನ್ನು ಪಡೆಯುತ್ತಲೆ ಇದ್ದೇನೆ. ನನ್ನ ವೈಯುಕ್ತಿಕ ಅನುಭವದಲ್ಲಿ ಆ ಹುಟ್ಟಿಗೆ 'ನನಗೆ' ಸಂಬಂಧ ಬೇಕು. ನನ್ನ ಹುಟ್ಟಿಗಾಗಿ (ಮರುಹುಟ್ಟಿಗಾಗಿ) ನನ್ನ ನನ್ನವಳ ಸಂಬಂಧ.

      ಧನ್ಯವಾದಗಳು

      ಕನ್ನಡ ಲಿಪಿಯಲ್ಲಿ ಬರೆದರೆ ಓದಲು ಅನುಕೂಲವಾಗುತ್ತೆ --- ಇಲ್ಲಿ ಕ್ಲಿಕ್ಕಿಸಿ --- http://www.kannadaslate.com/

      ಅರವಿಂದ

      ಅಳಿಸಿ