ವಿಷಯಕ್ಕೆ ಹೋಗಿ

ಮೀಮಾಂಸೆ


           ೧
ಇಲ್ಲಿಗೆ ಬಂದಾಗ ನಾವು ತಿಳಿದುಕೊಂಡಿದ್ದವರು ಇವರಾಗಿರಲಿಲ್ಲ
ಇಲ್ಲಿನವರಿಗೆ ಪರಿಚಯವಾದರೂ ಆಸಕ್ತಿ ತೋರಿಸಲಿಲ್ಲ
ಅದರಲ್ಲೇನಿತ್ತು ಎಂಬುದನ್ನಾದರೂ ಹೇಳು
ನಾನು ನಿನ್ನ ಮಗ
ತಲುಪಿಸುವ ಹಾದಿಯ ಚಹರೆ ಅದರೊಳಡಗಿರಬಹುದೇನೊ
ನನ್ನ ತಮ್ಮ ಸತ್ತನೆಂದು ನೀನೆಂದೂ ಆ ಆಸ್ಪತ್ರೆಗೆ ಹೋಗಲಿಲ್ಲ
ನಾನು ಹುಟ್ಟಿದ್ದು ಅಲ್ಲೇ ಅಲ್ಲವ
ಕಾಗದ ತಲುಪಿಸುವ ಜವಾಬ್ದಾರಿ ನನ್ನದು - ಆಸ್ಪತ್ರೆಗೂ ಕಾಗದಕ್ಕೂ ಗಂಟು ಹಾಕುವುದಿಲ್ಲ

ಕಾಗದ ಹೋಗಬೇಕಿದ್ದದ್ದು ಪಕ್ಕದ ಬೀದಿಯಲ್ಲಿದ್ದ ನಿನ್ನದೇ ಹೆಸರಿನವರಿಗೆ
(ಅಂಚೆಯವನನ್ನು ದಂಡಿಸೋಣವ?)
ಅದು ನಿನ್ನದಲ್ಲ ಎಂದು ಓದಿದ ನಂತರ ತಿಳಿಯಿತು
(ವಿಳಾಸವನ್ನು ನೋಡಬೇಕು ಎಂದು ಅನ್ನಿಸಲೇ ಇಲ್ಲವೆ?)
ಅವರು ಮನೆ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದರು
(ತಿರುಗಿಸಿ ಕೊಡಬೇಕಾದ ಅವಶ್ಯಕತೆ ಇತ್ತೆ?)
ಕಾಗದವನ್ನಿಟ್ಟುಕೊಂಡು ಅವರಿಗಾಗಿ ಹುಡುಕಿಸುತ್ತಿದ್ದೀಯ
(ಯಾರ ಸಾರ್ಥಕತೆಯನ್ನು ಸಾರಲಿಕ್ಕೆ?)

        ೨

ಅಸಂಬದ್ಧವಾಗಿ ಮಾತನಾಡುವುದನ್ನು ಕಲಿಸಿಲ್ಲ    
ಇರಬಹುದು ಪ್ರಕಟವಾದದ್ದು ಸ್ವಾತಿ  ಪತ್ರಿಕೆಯಲ್ಲೆ
ತತ್ವಶಾಸ್ತ್ರದ ಅದ್ಯಾಪಕಿಯಾಗುವುದಕ್ಕೂ ಮುನ್ನ ಬರೆದ ಆ ಎರಡು ಕತೆಗಳು
ಪತ್ರದ ಕುರಿತಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡ
ಎಲ್ಲಾ ಹೇಳಿಕೆಗಳನ್ನು ಪ್ರತ್ಯಕ್ಷಪಡಿಸಲಿಕ್ಕಾಗೊಲ್ಲ
ಕಾರ್ಯ ಕಾರಣವು ಅವಶ್ಯ ಪ್ರಮೇಯವಾಗಿ ಒಳನುಸುಳಿದ್ದು

ಆ ಮನೆಯ ರಹಸ್ಯದ ಬಗೆಗೆ ನಿನಗೆಷ್ಟು ಮಾಹಿತಿಯಿದೆ
ಹಲವರೆಂದದ್ದು ನಿನ್ನ ತಂದೆ ಕಾಣೆಯಾದದ್ದು ಅಲ್ಲಿಯೆ ಎಂದು
ಹಾಗಿರಲಿಲ್ಲ ಅದು , ಬೇರೆಯದೆ ಸಂಗತಿಯಿತ್ತು
ಕಾಗದ ತಲುಪಿಸಬೇಕೆಂಬ ನಿರ್ದಾರಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ

ಸಮಾಜವಾದಿಯೊ ಕಮ್ಯುನಿಷ್ಟರೊ ಹೇಳಲಾಗದಿದ್ದರೂ ಪ್ರಜಾಪ್ರಭುತ್ವವಾದಿಯಾಗಿದ್ದರು
ಸಮಾಜಶಾಸ್ತ್ರದ ಅಧ್ಯಾಪಕರಾಗುವುದರೊಂದಿಗೆ ಹೋರಾಟಗಳನ್ನು ಬಿಟ್ಟಿದ್ದರು
ಹೃದಯಾಘಾತದಿಂದ ಬಿದ್ದು ಕೋಮಾಕ್ಕೆ ಹೋದದ್ದು ಆ ಮನೆಯ ಮುಂದೆಯೆ
ಅಲ್ಲಿ ಒಬ್ಬ ವ್ಯಕ್ತಿಯನ್ನು ಯಾರೋ ಗುಂಡಿಕ್ಕಿ ಕೊಂದಿದ್ದರು

ನಿನಗೆ ಇದು ಯಾವುದೂ ತಿಳಿದಿಲ್ಲ


ಹತ್ತು ವರ್ಷಗಳ ನಂತರ ಪ್ರಜ್ಞೆ ಬಂದಿತ್ತು ಅರೆಬರೆಯಾಗಿ
ಕನವರಿಸುತ್ತಿದ್ದರು ಯಾವ ಯಾವುದೋ ಸಮಾಜಗಳ ರಚನೆಯ ಬಗೆಗೆ
ಯಾಕೆ ಈ ಸಮಾಜಗಳು ಹೀಗೆ? ಮನುಷ್ಯ ಯಾಕೆ ಕಲಿಯತೊಡಗಿದ?
ಯಾಕೆ ಈ ಹೋರಾಟ, ಅನ್ವೇಷಣೆ, ಕಟ್ಟೋದು, ಕೆಡವೋದು
ಎಲ್ಲವನ್ನೂ ಒಳಗೊಂಡಂತೆ ದೀರ್ಘ ಪತ್ರವನ್ನು ಬರೆದಿದ್ದರು
ಉದ್ದೇಶಪೂರ್ವಕವಾಗಿ ಆ ವಿಳಾಸ ಬರೆದರೊ ಆಕಸ್ಮಿಕವಾಗಿ ತಪ್ಪಿ ಬರೆದರೊ ತಿಳಿದಿಲ್ಲ
ಕಾಗದವು ನನಗೇ ಬರೆದಂತೆ ಅನ್ನಿಸಿದರೂ ವಿಳಾಸ ಮಾತ್ರ ಅದಾಗಿತ್ತು

ಈಗಲಾದರೂ ಹೇಳು ತಲುಪಿಸುತ್ತೀಯ ಕಾಗದವನ್ನು?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

.....

ಅವಳಿಗೊಮ್ಮೆ ನನ್ನ ಹೆಣ್ಣಾಗಿ
ನೋಡಬೇಕೆಂದೆನಿಸಿ
ಸೀರೆಯುಡಿಸಿದಳು ನಾಜೂಕಾಗಿ
ಸೊಂಟ ಹೊಕ್ಕಳು ಕಾಣುವಂತೆ.

ಬಳೆ ತೊಡಿಸಿದಳು  ಅರ್ದ ಒಡೆದಿತ್ತು
ಮಾಂಗಲ್ಯ  ಬಂಗಾರದ ಸರದಲ್ಲಿ
ಬೀರುವಿನಲ್ಲಿದ್ದದ್ದನ್ನು
ಹಾಕಿದಳು
ಸರಿ ಹೊಂದಲಿಲ್ಲವೆಂದೂ ಹೇಳಿದಳು.

ಜೊತೆಯಾಗಿ ಕುಣಿಯುವ ಎಂದಳು
ಕುಣಿವಾಗ ಸೆರಗು ಜಾರಲಿಲ್ಲ
ಅವಳ ಕೈ  ದೇಹವನ್ನಪ್ಪಿತ್ತು
ಯಾಕೋ ಮತ್ತೆ ಗಂಡಾಗಬೇಕೆಂದಿನೆಸಿಲೇ ಇಲ್ಲ.

ಹಳೆಯ ಮೊಳೆ ಹಾಗೂ ಹೊಸ ಮದುವೆ : ಒಂದು ಉಪಮೆ

ಹಾಗಾಗಿ ಮೊಳೆಯೇ
ಇದು ನಿನ್ನದೇ ತಪ್ಪೆಂದು ತೀರ್ಪನ್ನಿರಿಸಿದ್ದಾರೆ

ಆಗಿದ್ದಿಷ್ಟು

ಹೆಣ್ಣನ್ನು ಮನೆ ತುಂಬಿಸಿಕೊಳ್ಳುವಾಗ
ಹೊಸಲ ಮೇಲೆ ಕಾಸನ್ನಿಟ್ಟು ಮೊಳೆ ಹೊಡಿಸುವುದು
ಸಂಪ್ರದಾಯ

ಹೆಣ್ಣು ಗಂಡು ಅದೆಷ್ಟೇ ಪ್ರಯತ್ನಿಸಿದರೂ
ಅಂದು ಮೊಳೆ ಹೊಡೆಯುವುದು ಕಷ್ಟವಿತ್ತು
ಸುತ್ತಿಗೆ ಸರಿಯಿರಲಿಲ್ಲ ಮೊಳೆ ಚೂಪಿರಲಿಲ್ಲ ಕಾಸು ಗಟ್ಟಿಯಿತ್ತು
ಹುಡುಗ ಹುಡುಗಿ ದಣಿದಿದ್ದರು
ಇತ್ಯಾದಿ ಇತ್ಯಾದಿ

ಬಲ ಬಿಟ್ಟು ಹೊಡೆದಾಗ
ಮೊಳೆ ಹೊಸಲಿಗೆ ತಾಗುತ್ತಲೆ
ಗಂಡಿನ ಬೆರಳಿಗೂ - ಹೆಣ್ಣಿನ ಬೆರಳಿಗೂ ತಾಗಿ
ಇಬ್ಬರ ರಕ್ತವನ್ನೂ ಬೆರೆಸಿ
ಹೊಸಲಿಗಿಳಿದಿತ್ತು

ಮಾರನೇ ದಿನದಿಂದ
ಹುಡುಗ  ಹುಡುಗಿ
ಎಲ್ಲರೂ
ರಕ್ತ ಬಳಿದ ಹೊಸಲನ್ನು ದಾಟುತ್ತಲೇ ಸಂ
ಸಾರ ಸಾಗಿಸುತ್ತಿದ್ದರು

ಮೊದಲಿಗೆ ಬೆರಳಿಗೆ ಗಾಯವಾದದ್ದು
ಹುಣ್ಣಾಗಿ
ಮೊದಲು ಬೆರಳು, ಆಮೇಲೆ ಕೈ, ನಂತರ ದೇಹ
ಹೀಗೆ ಪೂರ ಆವರಿಸಿ ಮುಗಿಸುವ ಹೊತ್ತಿಗೆ
ಇಬ್ಬರ ಆಯಸ್ಸೂ

ಈಗ ಹೇಳಿ
ಇದು ಮೊಳೆಯದೇ ತಪ್ಪಲ್ಲವೆ
ಹಾಗಾಗಿ
ಹೊಸಲನ್ನು ಬಿಟ್ಟು ನಾಣ್ಯವನ್ನು ಬಿಟ್ಟು
ಹೊಡೆದ ಸುತ್ತಿಗೆಯನ್ನೂ ಕೈಯನ್ನೂ ಬಿಟ್ಟು
ಮೊಳೆಯನ್ನೇ ಶಿಕ್ಷಿಸಬೇಕಾಗಿ ತೀರ್ಪಾಗಿದೆ.

ಭೌತಶಾಸ್ತ್ರದ ಪ್ರೀತಿಗಾಗಿ

ಇನ್ನೇನು ಆಗಲೇ ಕಾಲೇಜು, ಮುಖ್ಯವಾಗಿ ಪದವಿ ತರಗತಿಗಳು ಆರಂಭವಾಗಿರಬೇಕು ಅಥವಾ ಇಷ್ಟರಲ್ಲೇ ಆರಂಭವಾಗಬಹುದು. PUC ಎಂಬ ತ್ರಾಸಮಯ ಘಟ್ಟ ಮುಗಿಸಿ ಈಗ ಹೊಸದೊಂದು ಯಾನವನ್ನ ಆರಂಭಿಸಲು ಹೊರಡುವ ಸಮಯ. ಹಲವರು ಇಂಜಿನಿಯರಿಂಗ್ ಎಂದೋ ಮೆಡಿಕಲ್ ಎಂದೋ ಹೋಗಿರುತ್ತಾರೆ. ಕೆಲವರು ಮೂಲತಃ ಮೂಲ ವಿಜ್ಞಾನದಲ್ಲಿ ಆಸಕ್ತಿಯಿರುವವರು ಪದವಿಗೆ ಸೇರಿರುತ್ತಾರೆ. ಮತ್ತೆ ಕೆಲವರಿಗೆ ಮೂಲ ವಿಜ್ಞಾನದಲ್ಲಿ ಆಸಕ್ತಿಯಿದ್ದರೂ ಇಂಜಿನಿಯರಿಂಗ್ ಸೇರಿರುತ್ತಾರೆ. ಮೂಲ ವಿಜ್ಞಾನದಲ್ಲಿ ಆಸಕ್ತರಾಗಿ ಮುಂದೆ ಸಂಶೋಧಕರಾಗಬೇಕೆಂದು ಬಯಸುವವರಿಗೆ ನನ್ನ ಅನುಭವದಲ್ಲಿ ದಕ್ಕಿದ ಒಂದಿಷ್ಟು ಮಾಹಿತಿಗಳನ್ನ ಕೊಡಬೇಕೆಂದೆನಿಸಿ ಈ ಲೇಖನ ಬರೆಯುತ್ತಿದ್ದೀನಿ. ನನ್ನ ಕ್ಷೇತ್ರ ಸೈದ್ಧಾಂತಿಕ ಬೌತಶಾಸ್ತ್ರ., ಹಾಗಾಗಿ ಆ ಕ್ಷೇತ್ರದ ಬಗೆಗೆ ಮಾತ್ರ ದೀರ್ಘವಾಗಿ ಬರೆಯುತ್ತೀದ್ದೀನಿ. ನನ್ನ ಸ್ನೇಹಿತರ್ಯಾರಾದರೂ ಒಪ್ಪಿದರೆ ಉಳಿದ ಕ್ಷೇತ್ರಗಳ ಬಗೆಗೆ ಬರೆಸಲು ಪ್ರಯತ್ನಿಸುತ್ತೇನೆ.. ಅಷ್ಟೇ ಅಲ್ಲ ಮಾನವೀಯ ವಿಷಯಗಳ ಬಗೆಗೂ ಬರೆಸಬೇಕೆಂದಿದ್ದೇನೆ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ. ವಿಷಯಾಧಾರಿತ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಉಳಿದ ಹಲವು ವಿಷಯಗಳನ್ನು ಸಮಾನವಾಗಿ ಸ್ವೀಕರಿಸಬಹುದು. ಇಲ್ಲಿನ ವಸ್ತುನಿಷ್ಠ ವಿಷಯಗಳನ್ನು ಹೊರತುಪಡಿಸಿ ಉಳಿದದ್ದು ನನ್ನ ಅನುಭವಕ್ಕೆ ಬಂದವುಗಳು, ಹಲವನ್ನು ನಾವುಗಳು ಅನುಸರಿಸಿದವುಗಳು. ಇವೇ "ಇದ ಮಿತ್ತಂ" ಎಂಬಂತಹ ಶಾಸನಗಳೇನೂ‌ ಅಲ್ಲ. ಎಲ್ಲರಿಗೂ…