ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

..................

ಚಿಟ್ಟೆ ಬೇಟೆಯಾಡುತ್ತಾ?
ತಟಸ್ಥ ನಿಶ್ಚಲ ರೆಕ್ಕೆ ಹೊಡೆಯುತ್ತಾ
ಹಾರದೆ ಕೂತ, ಹೊಂಚುಹಾಕುತ್ತಿದೆಯೇನೊ
ಭಾಸವಾಗುವ ಭಂಗಿಯಿಂದಾಗಿ
ಅನುಮಾನದಿಂದ ಹತ್ತಿರ ಸರಿದಾಗ
ಚಿಟ್ಟೆಗೂ ಅಹಂಕಾರವ? ನಮ್ಮನ್ನು ಕಂಡರೂ ನಮ್ಮೆಡೆಗೇ ನೋಡುತ್ತಿತ್ತಲ್ಲ
ಅದು ಬೆಳಗಿನ ಹೊತ್ತು, ಹುಡುಗಿ ಜೊತೆಗಿದ್ದಳು
ಚಿಟ್ಟೆಯ ನೆಪದಲ್ಲಿ ದೊರೆತದ್ದು ಅವಳ ಸಾಂಗತ್ಯ

ಹಾಗೆ ಕಂಡ ಚಿಟ್ಟೆಗಾಗಿ ಕನವರಿಸುವವಳು ನನ್ನವಳಾದಳು
ಕಂಡಲ್ಲಲ್ಲಾ ಕಾವ್ಯಾತ್ಮಕವಾಗಿ ಚಿಟ್ಟೆಯನ್ನು ಭ್ರಮಿಸಿದಳು
ಚಿಟ್ಟೆ ಭೂತವಾಗಿ ಕಾಡುವುದೆಂದು ಸಿದ್ಧಗೊಳಿಸಿ ತೋರಿಸಲು
ಸೂಕ್ತ ಪರಿಕರಗಳು ಅವಳಲ್ಲಿರಲಿಲ್ಲ ನಾನು ನಂಬಲಿಲ್ಲ.

ಆ ಚಿಟ್ಟೆಯ ಚಿತ್ರವನ್ನೇನಾದರೂ ಬಿಡಿಸಿದರೆ ಸರಿಹೋದೀತು
ಎಂಬ ನಂಬಿಕೆಯೊಂದು ಅಚಾನಕ್ಕಾಗಿ ಆವಾಹಿಸಿ
ಬಿಡಿಸಿದ ಚಿತ್ರವ್ಯಾವುದೂ ಆ ಚಿಟ್ಟೆಯದೆಂದೆನಿಸದಿರಲು
ಬಿಡಿಸುತ್ತಲೇ ಇದ್ದೇನೆ  ಈ ಪ್ರಕ್ರಿಯೆಯಲ್ಲಿ
ಅವಳು ಕನವರಿಸುವುದನ್ನೂ ಭ್ರಮಿಸುವುದನ್ನೂ ಬಿಟ್ಟಿದ್ದಾಳೆ
ನನಗೆ ಎಲ್ಲೆಲ್ಲಿಯೂ ಚಿಟ್ಟೆ ಮಾತ್ರ ಕಾಣುತ್ತಿದೆ.

ಪೀಠಿಕೆ

ಕಟ್ಟು ಕತೆಯ ಸುಂದರಾಂಗಿ

ಚರಿತ್ರೆಯ ಕ್ಷಮಾಭಿಕ್ಷೆಯ ಅರ್ಹತಾ ಪಟ್ಟಿಯ ಸಾಲಿನಲ್ಲಿ ನಿಲ್ಲಲಾರೆ
ನಾನೂ ನೀನು ಎಂದಿಗೂ ಅನರ್ಹರು
ಅದಕ್ಕಾಗಿಯೆ ನಮ್ಮಿಬ್ಬರ ಮಿಲನ ಸಾಧ್ಯವಾಗುವುದು
ಪ್ರತೀ ಹಂತದಲ್ಲೂ ಆಂತರಿಕ ಅಸ್ಥಿರತೆಯ ಅಗಾಧ ಸಾಧ್ಯತೆಗಳ
ಪ್ರಯೋಗಕ್ಕೊಳಪಡುತ್ತಲೆ ನಿನ್ನ ಭೇಟಿಯಾಗುತ್ತಿರಬೇಕು

ಹಪಾಹಪಿಯಲ್ಲಿ ನಿನ್ನ ತಿರಸ್ಕರಿಸಬೇಕೆಂದಿದ್ದೆ
ಆಹಾ ಸಂಕೀರ್ಣಾಕಾರವೆ ಎಂದು
ಸಂರಚನೆಯ ಗೋಜಿನಲ್ಲೆಲ್ಲಿ ಅಡಗಿಬಿಡುತ್ತೀಯೊ
ಎಂದೂ ಅನ್ನಿಸಿದ್ದುಂಟು - ಆದರೆ
ಆಗು ಹೋಗುಗಳ ಸ್ಪಷ್ಟ ಚಿತ್ರಣ ನೆನಪು
ಸಂಘರ್ಷದ ಅಭಿವ್ಯಕ್ತಿಯಲ್ಲಿ ರೂಪತಳೆಯುತ್ತಿತ್ತು
"ಅನಿಶ್ಚಿತ ನಿಯಮಗಳ ಸರದಾರನ ಆದಿಮ ಪ್ರಜ್ಞೆಗೆ ಹುಟ್ಟಿದ ಕೂಸು"
ಕಲಾಕೃತಿಯಿದ್ದ ಪುರಾತತ್ವ ಇಲಾಖಾ ವಸ್ತುಸಂಗ್ರಹಾಲಯದ
ಕೀಲಿಕೈಯನ್ನು ಕಳೆದದ್ದು
ಉದ್ದೇಶ ಪೂರ್ವಕವಾಗಿಯೆ ಎಂದೆನಿಸಿದರೂ
ಪುರಾವೆಗಳು ದೊರೆಯುವುದು ಆಕಸ್ಮಿಕಕ್ಕೇ

ತಾರುಮಾರಾದ
ನಿನ್ನ ಟಿಪ್ಪಣಿ ಪುಸ್ತಕದ ಸರಕು
ಎಂದಾದರೂ ಸ್ಮಾರಕವಾಗಬಹುದು
ಈ ಅವ್ಯವಸ್ಥೆಯ ಅಧೀನದ ಹಕ್ಕುಬಾಧ್ಯಸ್ಥರಾಗಿ ನಾವಿದ್ದೇವೆ
ರೂಪವಾಗಬಯಸಿದ ಪ್ರತೀ ಸಾಧ್ಯತೆಗಳ ಅಡಿಗೆ
ವಿಕಾಸದ ನಿರಂತರತೆಯ ನಿಗೂಢತೆಯಲ್ಲಿನ
ಎಚ್ಚರಿಕೆಯ ನಿನ್ನ ಇರುವಿಕೆಯಿದೆ
ನಮ್ಮ ಮಿಲನಕ್ಕೆ ದಕ್ಕಿದ ಸಿದ್ಧಿಯದು

ಆ ಸಿದ್ಧಿಗೆ ಶರಣು


ಒಂದಿಷ್ಟು ಆತ್ಮಕತೆಗಳು

.............ಪ್ರಜ್ಞೆಯ ವಿಕಸನದ ಹಲವು ಆಯಾಮಗಳು
                                                                           ಒಂದಿಷ್ಟು ಆತ್ಮಕತೆಗಳು...........

ಭಾಗ ೧

ಪ್ರತೀ ದಿನದ ನಿತ್ಯ ಕರ್ಮದಂತೆ ಕಾಫಿ ಲೋಟವನ್ನೂ ಅಂದಿನ ಪತ್ರಿಕೆಯನ್ನೂ ತೆಗೆದುಕೊಂಡು ಹೋಗಿ ನಿತ್ಯವೂ ಇಡುತ್ತಿದ್ದ ಜಾಗದಲ್ಲಿ ಇಟ್ಟು ಬಂದ. ಬೆಳಗಿನ ಹೊತ್ತಲ್ಲೇ, ಚಳಿಗಾಲವಾದರೂ ಸಹ ಯಾಕೋ ಬೆವರು ಇಳಿಯುತ್ತಿರುವುದನ್ನು ಕಂಡು,  ಸ್ವಲ್ಪ ಸೆಕೆಯಂತೆ ಅನ್ನಿಸಿದರೂ ಆ ಸೆಕೆ ತನಗೆ ಮಾತ್ರ ಇದ್ದಂತೆ ಅನ್ನಿಸಿದ್ದು ಉಳಿದ ಕೆಲವರು ಆರಾಮಾಗೆ ಹೋಟೇಲಿನ ಮುಂದೆ ಹಾಕಿದ್ದ ಬೆಂಕಿ ಕಾಯಿಸುತ್ತಿದ್ದಾಗ. ಈ ಅನಿರೀಕ್ಷಿತ ನಡುವಳಿಕೆಗೆ ಹೆದರಿದರೂ ಮಾಮೂಲೀ ಹೋಟೇಲಿನ ಕೆಲಸದಲ್ಲಿ  ಶ್ರೀನಿವಾಸಯ್ಯ ತೊಡಗಿದ್ದ. ತಾನಿಟ್ಟು ಬಂದಿದ್ದ ಕಾಫಿಯನ್ನು  ಕುಡಿಯುತ್ತ ಪತ್ರಿಕೆಯನ್ನು ತಿರುವಿ ಹಾಕುತ್ತಾ ಅಲ್ಲಿ  ಇಷ್ಟೊತ್ತಿಗಾಗಲೆ ಪದ್ದಣ್ಣ ಕೂತಿರಬೇಕಿತ್ತು. ಇಷ್ಟೊತ್ತಾದರೂ ಪದ್ದಣ್ಣನ ಕಾಣದಿದ್ದುದರಿಂದ   ಯಾರಾದರೂ ಪತ್ರಿಕೆ ತಿರುವಿ ಹಾಕುತ್ತಾರ ಎಂದು ಪತ್ರಿಕೆ ತಿರುವಿ ಹಾಕುವ ಶಬ್ದಕ್ಕೆ    ಕಾಯುತ್ತಿದ್ದ. ಸೂರ್ಯನ ಬಿಸಿಲು ಏರುತ್ತಿದ್ದಂತೆ ವಿಪರೀತ ಸೆಕೆ ಅನ್ನಿಸತೊಡಗಿತು. ತಿಂಡಿಗೆ  ಕೂಡುವ ಮುನ್ನ ಪ್ಲೇಟಲ್ಲಿ ತಿಂಡಿ ಕಾಫಿ ತೆಗೆದುಕೊಂಡು ಹೋಗಿ ಪತ್ರಿಕೆ ಇಟ್ಟು ಬಂದಿದ್ದ ಜಾಗದಲ್ಲಿ ಇಟ್ಟು…

ಮೀಮಾಂಸೆ


ಇಲ್ಲಿಗೆ ಬಂದಾಗ ನಾವು ತಿಳಿದುಕೊಂಡಿದ್ದವರು ಇವರಾಗಿರಲಿಲ್ಲ
ಇಲ್ಲಿನವರಿಗೆ ಪರಿಚಯವಾದರೂ ಆಸಕ್ತಿ ತೋರಿಸಲಿಲ್ಲ
ಅದರಲ್ಲೇನಿತ್ತು ಎಂಬುದನ್ನಾದರೂ ಹೇಳು
ನಾನು ನಿನ್ನ ಮಗ
ತಲುಪಿಸುವ ಹಾದಿಯ ಚಹರೆ ಅದರೊಳಡಗಿರಬಹುದೇನೊ
ನನ್ನ ತಮ್ಮ ಸತ್ತನೆಂದು ನೀನೆಂದೂ ಆ ಆಸ್ಪತ್ರೆಗೆ ಹೋಗಲಿಲ್ಲ
ನಾನು ಹುಟ್ಟಿದ್ದು ಅಲ್ಲೇ ಅಲ್ಲವ
ಕಾಗದ ತಲುಪಿಸುವ ಜವಾಬ್ದಾರಿ ನನ್ನದು - ಆಸ್ಪತ್ರೆಗೂ ಕಾಗದಕ್ಕೂ ಗಂಟು ಹಾಕುವುದಿಲ್ಲ

ಕಾಗದ ಹೋಗಬೇಕಿದ್ದದ್ದು ಪಕ್ಕದ ಬೀದಿಯಲ್ಲಿದ್ದ ನಿನ್ನದೇ ಹೆಸರಿನವರಿಗೆ
(ಅಂಚೆಯವನನ್ನು ದಂಡಿಸೋಣವ?)
ಅದು ನಿನ್ನದಲ್ಲ ಎಂದು ಓದಿದ ನಂತರ ತಿಳಿಯಿತು
(ವಿಳಾಸವನ್ನು ನೋಡಬೇಕು ಎಂದು ಅನ್ನಿಸಲೇ ಇಲ್ಲವೆ?)
ಅವರು ಮನೆ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದರು
(ತಿರುಗಿಸಿ ಕೊಡಬೇಕಾದ ಅವಶ್ಯಕತೆ ಇತ್ತೆ?)
ಕಾಗದವನ್ನಿಟ್ಟುಕೊಂಡು ಅವರಿಗಾಗಿ ಹುಡುಕಿಸುತ್ತಿದ್ದೀಯ
(ಯಾರ ಸಾರ್ಥಕತೆಯನ್ನು ಸಾರಲಿಕ್ಕೆ?)

        ೨

ಅಸಂಬದ್ಧವಾಗಿ ಮಾತನಾಡುವುದನ್ನು ಕಲಿಸಿಲ್ಲ    
ಇರಬಹುದು ಪ್ರಕಟವಾದದ್ದು ಸ್ವಾತಿ  ಪತ್ರಿಕೆಯಲ್ಲೆ
ತತ್ವಶಾಸ್ತ್ರದ ಅದ್ಯಾಪಕಿಯಾಗುವುದಕ್ಕೂ ಮುನ್ನ ಬರೆದ ಆ ಎರಡು ಕತೆಗಳು
ಪತ್ರದ ಕುರಿತಾಗಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಬೇಡ
ಎಲ್ಲಾ ಹೇಳಿಕೆಗಳನ್ನು ಪ್ರತ್ಯಕ್ಷಪಡಿಸಲಿಕ್ಕಾಗೊಲ್ಲ
ಕಾರ್ಯ ಕಾರಣವು ಅವಶ್ಯ ಪ್ರಮೇಯವಾಗಿ ಒಳನುಸುಳಿದ್ದು

ಆ ಮನೆಯ ರಹಸ್ಯದ ಬಗೆಗೆ ನಿನಗೆಷ್ಟು ಮಾಹಿತಿಯಿದೆ
ಹಲವರೆಂದದ್ದು ನಿನ್ನ ತಂದೆ…

........

ನನ್ನ ಮುದ್ದಿನ ಪುಟ್ಟ ರಾಜಕುಮಾರಿ
ನಿನ್ನ ರಟ್ಟಿನ ಅರಮನೆಯ ಮಾದರಿಗೆ ಬಹುಮಾನ ಬಂತಂತೆ - ಅಭಿನಂದನೆಗಳು
ನಾನು ಬರೆದ ಚಿತ್ರಗಳೆಲ್ಲ ವ್ಯಂಗ್ಯಚಿತ್ರಗಳಾಗಿವೆ
ಉದ್ದೇಶಪೂರ್ವಕವಾಗಿ ವ್ಯಂಗ್ಯಚಿತ್ರ ಬರೆಯಬೇಕೆಂದುಕೊಂಡವನೇನೂ ಅಲ್ಲ
ರಸ್ತೆ ಅಗಲೀಕರಣ ಪ್ರಕ್ರಿಯೆಯಲ್ಲಿ ಆ ಎಲೆ ಇಲ್ಲದ ಒಂಟಿ ಮರವನ್ನು ಉರುಳಿಸಿದ್ದಾರೆ
ಬರುತ್ತೀಯ ಸಸಿ ನೆಟ್ಟು ತೋಟ ಮಾಡುವ
ನಿನಗೆ ಎಲ್ಲಾ ಬಣ್ಣಗಳೂ ಇಷ್ಟ
ನನಗೆ ಶುಭ್ರ ಆಕಾಶ ನೀಲಿ
ಶರಣು ರಾಜಕುಮಾರಿ- ಸೋಲಿಸಿದ್ದಕ್ಕೆ, ನನ್ನ ಮಿತಿಯ ತಿಳಿಸಿಕೊಟ್ಟದ್ದಕ್ಕೆ


ಹುಲ್ಲು ಕಡ್ಡಿ ಪುರಾಣ

ಏನೇ ಆದರೂ ಅದೊಂದು ಹುಲ್ಲು ಕಡ್ಡಿ
ನೇರ ಸಣ್ಣಗೆ ಚೂಪಾಗಿ ಎದ್ದು ತೋರುವಂತದ್ದು
ಎಷ್ಟೋ ಜನ ಸವಾಲೆಸೆದಿದ್ದಿದೆ
"ಹುಲ್ಲು ಕಡ್ಡೀನೂ ಕದಲಿಸಲಿಕ್ಕೆ ಆಗೋಲ್ಲ"
ಅದರ ಗುರುತು ನೆನಪು
ಎಂದಿನಿಂದ ಶುರುವಾಯಿತು ಎಂಬುದು ತಿಳಿದಿಲ್ಲ

ನನಗೆ ಆತ್ಮೀಯವೆನಿಸಿದ್ದು
ಅದರ ಏಕಾಂತ - ಒಂಟಿತನದ ಅಹಂಕಾರ
ಹಾಗಂತ ಸಂಘ ಬಿಟ್ಟಿದ್ದಿಲ್ಲ
ಒಂಟಿ ಹುಲ್ಲು ಕಡ್ಡಿ ಎಲ್ಲೂ ಬೆಳೆಯೋಲ್ಲ
ಅದು ಹರಡಿಕೊಂಡೆ ಬೆಳೆಯೋದು
ಆದರೂ ಕೆಟ್ಟ ಕೋಪ ಅದರ ಮೇಲೆ

ಹುಲ್ಲು ಕಡ್ಡಿಯ ನೆನಪು ಎಷ್ಟೇ ಗಾಢವಾಗಿದ್ದರೂ
ಹೆಸರು ನೆನಪಿಗೆ ಬಾರದಂತಾಗಿ
ಅಸ್ಪಷ್ಟವಾಗಿ ಕರಗುತ್ತ
ಎಲ್ಲವನ್ನೂ ಮರೆತುಬಿಡುತ್ತಿದ್ದೇನೆ