ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

March, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೈಲು ಹಳಿಯ ಮೇಲಿನ ನಾಣ್ಯ

ಚಿಕ್ಕವನಾಗಿದ್ದಾಗ ನನಗಿದ್ದ ಒಂದೇ ಕನಸೆಂದರೆ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಆಗುವುದು. ನಿತ್ಯವೂ ರೈಲಿನಲ್ಲಿ ಸಂಚರಿಸುವ, ನಿತ್ಯವೂ ಹಲವು ಬಗೆಯ ಜನರನ್ನ ಕಾಣುವ ಟಿಕೆಟ್ ಕಲೆಕ್ಟರ್ ವೃತ್ತಿ ಬಹಳ ಆಕರ್ಷಿಸಿತ್ತು. ಎಲ್ಲಿಗಾದರೂ ಉಚಿತವಾಗಿ ಪ್ರಯಾಣ ಮಾಡುವ ಅನುಕೂಲ ತಿಳಿದಾಗಲಂತೂ ಬದುಕಿನ ಧ್ಯೇಯವೆ ಆ ವೃತ್ತಿಯನ್ನ ಪಡೆಯುವುದು ಎಂದೆನಿಸಿಬಿಟ್ಟಿತ್ತು. ಅದೃಷ್ಟವೋ ದುರಾದೃಷ್ಟವೋ ನಾನು ಟಿಕೆಟ್ ಕಲೆಕ್ಟರ್ ಆಗಲಿಲ್ಲ, ಅದು ಬೇರೆಯದೆ ಕತೆ. ಏನೇ ಆದರೂ ನನಗೆ ರೈಲೆಂದರೆ ಈಗಲೂ ಇಷ್ಟ. ರೈಲಿನ ಒಳಗಿಂದ ಹೊರಗೆ ಕೈ ಬೀಸಿ ಮಕ್ಕಳಿಗೆ ಟಾಟ ಹೇಳುವ ಬಯಕೆ, ಚಿಕ್ಕವನಾಗಿದ್ದಾಗ ರೈಲು ಹೊರಗಿಂದ ರೈಲಿಗೆ ಟಾಟ ಹೇಳುವಾಗಿನ ಬಯಕೆಯಷ್ಟೆ ತೀವ್ರವಾಗಿದೆ. ಬೇಸರವಾದಾಗ, ಯಾವುದೋ ಖಿನ್ನತೆ ನನ್ನನ್ನಾವರಿಸಿಬಿಟ್ಟಿದೆಯೆಂದೆನಿಸಿದಾಗ ರೈಲು ನಿಲ್ದಾಣದಲ್ಲಿ ಹೋಗಿ ಕೂತುಬಿಡುತ್ತೇನೆ. ರೈಲು ನಿಲ್ದಾಣದಲ್ಲಿ ಟೀ ಕುಡಿಯುತ್ತ, ಅಲ್ಲಿ ಹೋಗುವ ಬರುವ ಜನರನ್ನ, ಅವರ ವೇಷಗಳನ್ನ, ಸಾಮಾನುಗಳನ್ನ ನೋಡುತ್ತ ನನ್ನ ಪ್ರಶ್ನೆಗಳ ಜಗತ್ತನ್ನ ಮರೆಯುತ್ತೇನೆ. ಇಡೀ ರೈಲು ನಿಲ್ದಾಣವು ಮೌನವಾಗಿ ಸಂವಹಿಸುವ ಗುರುವಿನಂತೆ ಕಾಣುತ್ತೆ.
ನನ್ನ ತಾತ(ಅಮ್ಮನ ಅಪ್ಪ) ದೊಡ್ಡ ಸಂಗೀತ ವಿದ್ವಾಂಸರಾಗಿದ್ದವರು. ಸಂಗೀತದಲ್ಲಿ ದೊಡ್ದ ವಿದ್ವಾಂಸರಾಗಿದ್ದರೂ ಅದರಲ್ಲಿ ಹಣ ದಕ್ಕುತ್ತಿರಲಿಲ್ಲ. ಹಲ್ಲುಪುಡಿ, ವೋಂವಾಟರ್, ಕಸ್ತೂರಿ ಮಾತ್ರೆಗಳನ್ನ ಮಾಡಿ ನಿತ್ಯವೂ ಹೆಗಲ ಮೇಲೆ ಹೊತ್ತು ಊರೂರೂ ಅಲೆದು ಅವುಗ…