ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಸಿರು ಹಾವು

ಅದು ಬಹಳ ಸರಳವಾಗಿತ್ತು
ನನಗೆ ಗೊತ್ತಿರಲಿಲ್ಲ
ನಾವು ಕದಲಿಸದೆ ಹೋದರೆ
ತಿಂಗಳುಗಟ್ಟಲೆ ಅದು ಹಾಗೇ ಅಲ್ಲೇ
ಇರುತ್ತೆ ಅಂತ
ಹಸಿರು ಹಾವು
ಮೇಲೆ ಬಿದ್ದರೂ ಏನೂ ಮಾಡುವುದಿಲ್ಲವಂತೆ

ದಿಗಿಲಾಗಿತ್ತು
ಕಾಯುವುದರಲ್ಲಲ್ಲ
ಕೊಲ್ಲುವುದರಲ್ಲಲ್ಲ
ಹಾಗೆ ಬಿಟ್ಟರೆ
ಹಸಿರುಹಾವು
ನಿಜ
ಆದರೂ ಭಯ

ಅದನ್ನು
ಹಾಗೆ ದಿಟ್ಟಿಸಿದ್ದರಲ್ಲಿ
ಏನೂ ವಿಶೇಷವಿರಲಿಲ್ಲ
ಹಸಿರು ಹಾವು
ಹಸಿರಾಗಿತ್ತು ಅಷ್ಟೆ

ಗರುಡಗಂಬದ ಕತೆಗಳು

ನನ್ನ ತಾತ ಕಡೇ ದಿನಗಳಲ್ಲಿ ಬಾಳ ಹಲುಬುತ್ತಿದ್ದ
ಗರುಡಗಂಬ ಗರ್ಡಗಂಬ ಗರ್ಡಗಂಬ ಅಂತ
ಚಂದಾ ಪಡೀಲಿಕ್ಕೆ ರಸೀದಿಗಳನ್ನೂ ಮುದ್ರಿಸಿದ್ದ
ಅದ್ಯಾಕೋ ಗರುಡಗಂಬಾನ ಪ್ರತಿಷ್ಟಾಪಿಸಲಿಕ್ಕೆ ಆಗಿರಲೇ ಇಲ್ಲ.

ತಾತ ಹೋದ ನಂತರ
ನನ್ನ ಗಣಿತದ ಲೆಕ್ಕಾಚಾರದ ಅಭ್ಯಾಸಕ್ಕೆ
ಈ ರಸೀದಿ ಪುಸ್ತಕಗಳನ್ನುಪಯೋಗಿಸಿದ್ದೆ
ಪ್ರಥಮ ದರ್ಜೆಯಲ್ಲಿ ಪಾಸಾಗಿ
ಸೈದ್ಧಾಂತಿಕ ಭೌತಶಾಸ್ತ್ರಜ್ಞನಾದೆ

ನನ್ನ ತಾತ ಕಟ್ಟಿದ ಮನೆಯನ್ನ
ನವೀಕರಣಕ್ಕೊಳಪಡಿಸಹೊರಟಾಗ
ನನ್ನ ಹಳೆಯ ಪುಸ್ತಕಗಳ ಜೊತೇಲಿ
ಈ ರಸೀದಿ ಪುಸ್ತಕಗಳೂ ಸಿಕ್ಕವು

ಇತ್ತೀಚೆಗೊಮ್ಮೆ ಆಕಸ್ಮಿಕವಾಗಿ
ಊರ ಹೊಲದಲ್ಲಿ ಗರುಡಗಂಬವೊಂದು ಸಿಕ್ಕಿತು
ದೇವಸ್ಥಾನದ ಮುಂದೆ ತಂದು ಮಲಗಿಸಿದ್ದಾರೆ

ನನ್ನ ಮಗಳು ಈ ರಸೀದಿಗಳಿಂದ ಕಾಗದದ ದೋಣಿಯನ್ನು ಮಾಡಿ
ಮಳೆ ನೀರಲ್ಲಿ ಹರಿಬಿಟ್ಟಿದ್ದಳು
ಆ ಕಾಗದದ ದೋಣಿಗಳೆಲ್ಲಾ ಬಂದು ಗರುಡಗಂಬಕ್ಕೆ ಸಿಕ್ಕಿ ಹಾಕಿಕೊಂಡಿತ್ತು
ನಾನು ಮಾತ್ರ
ಒಂದೊಂದೇ ದೋಣಿಗಳು ಬಂದು ಅಲ್ಲಿ ಸಿಕ್ಕಿ ಹಾಕಿಕೊಳ್ಳುವುದನ್ನ
ನೋಡುತ್ತಿದ್ದೆ.

ಒಂದು ಸಾಲಿನ ಕವಿತೆಗಳು

1. ಪಠ್ಯ

ಬಿಟ್ಟು ಬಂದ ಚಪ್ಪಲಿಗಳು ಅಲ್ಲೇ ಇತ್ತು

***************************
2. ಸಂಪ್ರದಾಯ 

ಬಿಟ್ಟು ಬಂದ ಚಪ್ಪಲಿಗಳು ಪಾದುಕೆಗಳಾಗಿತ್ತು.

****************************
3. ಮತ್ತೆ ಗಾಂದಿ 
ಸದಾ ಗಾಂದಿ ಪಾತ್ರ ಮಾಡಿದ ನಟ ಚಪ್ಪಲಿಗಳನ್ನಾಕಿಕೊಳ್ಳಲೇ ಇಲ್ಲ.

*****************************

ಅಗ್ನಿಪಥ

ಮಹಾಭಾರತ ಯಾರ ಕಥೆ? ಕೃಷ್ಣನ ಕಥೆಯೆ? ಭೀಮನ ಕಥೆಯೆ? ಅರ್ಜುನನ ಕಥೆಯೆ? ಇವರ್ಯಾರದೂ ಅಲ್ಲ. ಅದು ಅಂಬೆ, ಗಾಂಧಾರಿ, ಮಾದ್ರಿ, ಕುಂತಿ, ದ್ರೌಪದಿಯರೆಂಬ ಐದು ಹೆಣ್ಣುಗಳ ಕಥೆಯೆಂದು ಅಗ್ನಿಪಥ ನಾಟಕ ತೆರೆದುಕೊಂಡಿತು. ಭಾನುವಾರ(೧-ಸೆಪ್ಟಂಬರ್) ಮೈಸೂರಿನ ನಟನ ತಂಡದವರ "ಅಗ್ನಿಪಥ" ನಾಟಕವನ್ನು ರಂಗಶಂಕರದಲ್ಲಿ ನೋಡಿದ ನಂತರ ನನ್ನನ್ನು ಇಡೀ ಮಹಾಭಾರತ ಕತೆಯೆ ಮತ್ತೊಮ್ಮೆ ಮತ್ತೊಂದು ಅರ್ಥದಲ್ಲಿ ತೆರೆದುಕೊಂಡಿತು. ಇತ್ತೀಚಿನ ದಿನದಲ್ಲಿ ಹಲವಾರು ಖ್ಯಾತನಾಮರ(ಮುಖ್ಯವಾಗಿ ಧಾರವಾಹಿಗಳಲ್ಲಿ ಮಾಡುವ ಖ್ಯಾತನಾಮರ) ನಾಟಕಗಳನ್ನು ನೋಡಿ ಅದರ ಏಕತಾನತೆಗೆ ಬೇಸರಬಂದಿತ್ತು. ನಟನದ(http://natanamysore.com/) ಈ ಪ್ರಯೋಗ ಎಲ್ಲ ವಿಧದಲ್ಲಿಯೂ ಇಷ್ಟವಾಯಿತು. 
ಪುರಾಣಪಾತ್ರಗಳನ್ನು ಮತ್ತೆ ಮತ್ತೆ ಕಾವ್ಯದಲ್ಲಿಯೋ, ನಾಟಕದಲ್ಲಿಯೋ, ಕಾದಂಬರಿಯಲ್ಲಿಯೋ ತಂದಾಗಲೆಲ್ಲ, ಅದೇಕೆ ಅದೆ ಹಳೆ ಪಾತ್ರಗಳನ್ನೇ ತರುತ್ತಾರೆ? ಹೊಸ ಪಾತ್ರಗಳನ್ನೂ, ಹೊಸ ಕತೆಯನ್ನೂ ಕಟ್ಟಿಕೊಡಬಹುದಲ್ಲವ ಎಂದು ಅನ್ನಿಸುತ್ತೆ. ಹೀಗಿದ್ದರೂ, ಪುರಾಣ, ಐತಿಹಾಸಿಕ ಪಾತ್ರಗಳು, ಕತೆಗಳು ಎಂದೆಂದಿಗೂ ಪ್ರಸ್ತುತವಾಗಿರುತ್ತೆ ಎಂಬ ಉತ್ತರದಿಂದ ಅದು ಮತ್ತೆ ಮತ್ತೆ ರಂಗಕ್ಕೇರುತ್ತೆ. ಹೀಗೆ ಒಂದು ಪುರಾಣ, ಐತಿಹಾಸಿಕ ಕೃತಿ ರಂಗಕ್ಕೇರಿದಾಗ ಅದು ಆ ಕಾಲದ ಪರಿಸ್ಥಿಗಳೊಂದಿಗೆ ಪ್ರಸ್ತುತವಾದಾಗ, ಹಾಗೆ ಹೊಸದಾಗಿ ರೂಪಾಂತರಗೊಂಡ ಕೃತಿಗೆ ಮೌಲ್ಯ. ಮಹಾಭಾರತದ ಕತೆ, ಅದರ ಆಳ, ಸಂಕೀರ್ಣತೆಗಳಿಂದ ಎಂದಿಗೂ ಪ…

ಇತಿಹಾಸಕಾರನ ದಿನಚರಿಯಿಂದ

೧.
ನಮ್ಮೂರಲ್ಲಿ ಒಂದು ಕಲ್ಲಿನ ಶಾಸನ
ಯಾವ ಕಾಲದಿಂದಲೋ ನಿರ್ಲಿಪ್ತವಾಗಿ ಮಲಗಿತ್ತು
ಪಾಪ, ಯಾವ ರಾಜನೋ ಸಾಮಂತನೋ
ಬರೆಸಿದ್ದಿರಬೇಕು  
ಅದರ ಭಾಷೆ ನಮಗ್ಯಾರಿಗೂ ಓದಲು ಬರುತ್ತಿರಲಿಲ್ಲ.

ನಮ್ಮೂರಿಗೆ ಹೊಸದಾಗಿ ಬಂದ ಶಾಮನಿಗೆ
ಸಂಪೂರ್ಣವಾಗಿ ತನ್ನನ್ನೇ ಅರ್ಪಿಸಿಕೊಂಡ ಶಾಸನ
ಅವನಿಗೆ ಕೂರಲು ಆಸನವಾಗಿ, ಮಲಗಲು ಮಂಚವಾಗಿ
ಇನ್ನೂ ಏನೇನೋ ಆಗಿ ಶಾಮನದ್ದಾಗಿ ಹೋಯಿತು.

ಒಂದು ದಿನ ಶಾಮ ಎಲ್ಲಾನೂ ಬಿಟ್ಟು ಎಲ್ಲಿಗೋ ಓಡಿ ಹೋದ
ಓಡಿ ಹೋಗಲಿಕ್ಕೆ ಏನೇನೋ ಜರುಗಿತ್ತಂತೆ ಹಾಗೂ ಕಾರಣಗಳಿತ್ತಂತೆ
-ಅಂತ ಜನಗಳು ಮಾತನಾಡಿಕೊಳ್ಳುತ್ತಿದ್ದರು.

೨.
ನನ್ನಜ್ಜಿಯ ಪ್ರೇಮ ಪತ್ರಗಳೇನಾದರೂ ಸಿಕ್ಕಬಹುದೆಂದು ಪ್ರಯತ್ನಿಸುತ್ತಿದ್ದೇನೆ
ನನ್ನಜ್ಜಿ ಬಹಳ ಸುಂದರವಾಗಿದ್ದಳು
ಎಲ್ಲಾ ವಯಸ್ಸಿನಲ್ಲೂ.
ನನ್ನ ತಾತ ಕರ್ರಗೆ, ಉಬ್ಬುಹಲ್ಲು, ಸೊಣಕಲು ಶರೀರ
ಎಷ್ಟೋ ಊರುಗಳು ದಾಟಿ ಎಲ್ಲೋ ನೆಲೆನಿಂತು ಸಾಕಿದ್ದಳು ನನ್ನಜ್ಜಿ
ಅವಳ ಚರಿತ್ರೆಯನ್ನ ಬರೆಯಲಿಕ್ಕೆಂದೇ ನಾನು ಇತಿಹಾಸಕಾರನಾದೆ.

ಕಡೆ ದಿನಗಳಲ್ಲಿ ನನ್ನಜ್ಜಿಗೆ ಗ್ಯಾಂಗ್ರಿನ್ ಆಗಿ ಕಾಲು ಕಳೆದುಕೊಂಡು
ತೀವ್ರ ನೋವಿನಲ್ಲಿದ್ದಾಗ, ಸತ್ತು ಹೋಗುವಷ್ಟು ನೋವಾಗಿದ್ದಾಗ
ತನ್ನ ನೆಚ್ಚಿನ ಮಸಾಲೆ ದೋಸೆ ತರಿಸಿಕೊಂಡು ತಿಂದು
ಮಾರನೆ ದಿನ ಸತ್ತು ಹೋದಳು.

೩.
ಮೆಜಸ್ಟಿಕ್ ಅಲ್ಲಿ
ಒಂದು ಕಾಲದಲ್ಲಿ
ಒಬ್ಬ ಅಜ್ಜಿ ಬುಟ್ಟಿಯಲ್ಲಿ ಇಡ್ಲಿ ತಂದು ಮಾರೋಳು
ನಂಗೆ ದಿನ ಎರಡು ಇಡ್ಲಿ ಕೊಡೋಳು
ತನ್ನ ಅನಿಮಿತ್ತ ಕರ್ಮದಂತೆ
ಈಗ ಎಲ್ಲೋ ಬಂದು ಏನೋ ಮಾಡಿ ಆಗಿದ…

Human Right Protection Foundation petition

Human Rights Protection Foundation, Udupi has started A Petition to the Governor of Karnataka to "Order the government of Karnataka to obey the Supreme Court Order in the  Akku Leela case". We need you to sign the online petition and help Akku and Leela finally get justice.  


Will you take 30 seconds to sign it right now? Here's the link:
Petition

Here's why it's important:  The Supreme Court has ordered Govt. of Karnataka to Pay the salary of Ms. Akku and Ms. Leela which has been denied to them right from 1971. The Supreme Court order is three years seven months old. The poor women are struggling to get justice for the last 42 years.

Please read this :-

Dear Readers,
I believe not many of you would know the classic case of how the “high-handedness” of a few officials has affected the lives of two illiterate women in Udupi. The two women, Akku and Leela, have put in about four decades of service as scavengers at the Government Women Teachers‟ Training Institute on a mo…

ಎರಡು ಕೋಡಿನ ಮೊಲ

"ಇಲ್ಲ, ನನಗೆ ಆ ಕ್ಷಣದಲ್ಲಿ ಯಾವುದೇ ಸಂಧಿಗ್ಧತೆ ಇರಲಿಲ್ಲ. ಸೀದಾ ಸಾಮಾನ್ಯ ಪರಿಸ್ಥಿತಿಯಂತೆ ಅನ್ನಿಸಿತ್ತು. ಅವತ್ತು ಬೆಳಗ್ಗೆ ಎದ್ದಾಗ ನನಗೆ  ಗಾಬರಿಯಾಗುವಷ್ಟು ಏನೂ ನೆನಪಿರಲಿಲ್ಲ. ರಾತ್ರಿ ವಿಚಿತ್ರ ಅನುಭವವಾಗಿತ್ತು. ರಾತ್ರಿ ಒಮ್ಮೆ ಎಚ್ಚರಾದಾಗ ಎಲ್ಲವೂ ಕರಗುತ್ತಿರುವಂತೆ ಭಾಸವಾಯಿತು. ಗೋಡೆಗಳು, ಮನೆ, ನಾ ಮಲಗಿದ್ದ ಮಂಚ, ಕಡೆಗೆ ಇಡೀ ಜಗತ್ತೆ ಕರಗುತ್ತಿರುವಂತೆ ಅನ್ನಿಸಿತು. ಎಷ್ಟು  ಭಯವಾಯಿತು ಎಂದರೆ ಗಟ್ಟಿಯಾಗಿ ಹೊದ್ದು  ಮಲಗಿಬಿಟ್ಟೆ. ಬೆಳಗಾಗಿ ಎದ್ದಾಗ  ಯಾಕೋ ಏನೂ ನೆನಪಿರಲಿಲ್ಲ, ಏನೂ ನೆನಪಾಗುತ್ತಿರಲಿಲ್ಲ. ಆಗಲೆ ನಾನು ನಿರ್ಧರಿಸಿದ್ದು, ಅವಳಿಗೆ ನಾನು ಅವಳನ್ನ ಇಷ್ಟ ಪಡುತ್ತಿರುವ ಸಂಗತಿಯನ್ನು, ಮದುವೆಯಾಗಲು  ಬಯಸುತ್ತಿರುವ ಸಂಗತಿಯನ್ನು ತಿಳಿಸಬೇಕು ಅಂತ. ಹಾಗಾಗಿ ಅದೇ ಸಂಜೆ ತಿಳಿಸಿಬಿಟ್ಟೆ.  ಹಂಸ, ನೀನು ನಿನ್ನ ಕುಟುಂಬವನ್ನು ಪ್ರೀತಿಸುವ, ನಿನ್ನ ಅಣ್ಣನಿಗೆ ನೀನು ಮದುವೆ ಮಾಡಬೇಕೆನ್ನುವ ನಿನ್ನ ಕಾಳಜಿಯಿಂದಾಗಿ ನಾನು ನಿನ್ನನ್ನ ಇಷ್ಟ ಪಡುತ್ತಿದ್ದೇನೆ ಅಥವಾ ಪ್ರೀತಿಸುತ್ತಿದ್ದೇನೆ. ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ನಿನಗಿದೆ ಆದರೆ ತೀರ್ಮಾನವನ್ನು ತಿಳಿಸುವುದು ನಿನ್ನ ಕರ್ತವ್ಯ.  ಒಂದೆರೆಡು ದಿನಗಳ ಕಾಲ ಉತ್ತರದ ನಿರೀಕ್ಷೆಯಲ್ಲಿದ್ದೆ. ನಂತರ ಅದೇನಾಯಿತೋ ನನ್ನ ಕೆಲಸಗಳಲ್ಲಿ ನಾನು ಮರತೇ ಬಿಟ್ಟೆ. ಅವಳನ್ನು, ಅವಳ ಸಂಗತಿಯನ್ನು  ಮರೆತೇ ಬಿಟ್ಟಿದ್ದೆ . ಈಗ ನೋಡು ನೀನು ಕೇಳಿದಾಗ  ನೆನಪಾಯಿತು. ನನ್ನ ಸ…

...........................

ನನಗೆ ಕವನದ ಅನುವಾದ ಸಿದ್ಧಿಸಲೇ ಇಲ್ಲ
ತೀರ ವಿಚಿತ್ರವೆಂಬಂತೆ
ಆಸ್ಪತ್ರೆಯಲ್ಲಿ ಆ ಮುಲುಗಾಟಗಳ ಮಧ್ಯೆ
ಒಂದು ಕವನವನ್ನ ಅನುವಾದಿಸಿದ್ದೆ
"ಆಸ್ಪತ್ರೆಯ ಬೆಡ್ಡುಗಳಿಗೆ ಯಾವ ರೋಗಿಯ ನೆನಪೂ ಉಳಿದಿರೋದಿಲ್ಲ
ಜ್ವರ ತೀವ್ರವಾದಾಗ
ಅಪ್ರಜ್ಞಾವಸ್ಥೆಯಲ್ಲಿ
ಅಸಂಬದ್ಧವೆನಿಸೊ, ಸಂಬಂಧವೇ ಇಲ್ಲ ಎನಿಸೊ
ಎಷ್ಟೋ ಚಿತ್ರಗಳು
ಬಂದು ಹೋಗಿ ಬಿಡುತ್ತೆ
ಅವ್ಯವಸ್ಥಿತವಾಗಿ

ನಿರಚನೆಯ ಮಾತು ಆಗಲೆ ಶುರುವಾದದ್ದು
ನರ್ಸುಗಳಿಗೊ, ಡಾಕ್ಟರುಗಳಿಗೊ ರೋಗಿಯ ನೆನಪುಳಿದಿರಬಹುದು
ಕೆಲವೊಮ್ಮೆ ಹೀಗೂ ಆಗಿಬಿಡುತ್ತೆ
ರೋಗಿಯನ್ನ ನರ್ಸೊ, ನರ್ಸನ್ನ ರೋಗಿಯೊ ಇಷ್ಟಪಟ್ಟು ಮದುವೆಯಾಗಿಬಿಡಬಹುದು
ರೋಗಿಗಳನ್ನ ವರಿಸಿದ ಡಾಕ್ಟರುಗಳ ಕತೆ ಚರಿತ್ರೆಯಲ್ಲಿ ಗಾಢವಾಗಿ ದಾಖಲಾಗಿ ಹೋಗಿದೆ."

ಮೇಲಿನ ಅನುವಾದದ ಮೂಲ ಕವಿತೆಯ ಕರ್ತೃ-ಕವಿ
ರೋಗಿಷ್ಟನಾಗಿ ಆತನೆ ಕವಿತೆಯಾಗಿಸಿದ ಬೆಡ್ಡಿನ ಮೇಲೆ ಮಲಗಿದ್ದಾನೆ
ಅವನನ್ನೇ ನೋಡುತ್ತ ನಾನು ಕವಿತೆಯನ್ನ ಯಥಾವತ್ ಅನುವಾದಿಸಿದ್ದೇನೆ.

ದುರಂತವೆಂದರೆ,
ಆ ಕವಿ/ರೋಗಿ ಹಿಂದೊಮ್ಮೆ
ಪ್ರೇಮಿಯೂ, ತತ್ವಶಾಸ್ತ್ರಜ್ಞನೂ , ಭೌತಶಾಸ್ತ್ರಜ್ಞನೂ  ಆಗಿದ್ದ.

................ ಅನ್ನೋ ಸಂಕೀರ್ಣ ಪ್ರತಿಮೆ

ನಮ್ಮೂರಲ್ಲಿ ಸತ್ತ ನದಿ ಒಂದಿತ್ತು
ಅದರ ಪಕ್ಕ ಸುಡುಗಾಡೂ ಇತ್ತು
ನಾ ಅಂದುಕೊಂಡಿದ್ದೆ
ಗೋರೀಲಿ ಶವ ಬೆಚ್ಚಗೆ ಮಲಗಿರುತ್ತೆ ಅಂತ
ಬಸುರಿ, ಸತ್ತೋಗಿದ್ಲು
ಅವಳ ಹೊಟ್ಟೇಲಿನ ಮಗು
ಹೂಗುಡೊ ಧ್ವನಿ ಕೇಳಿ
ತತ್ತರಿಸಿ ಕುಸಿದುಬಿಟ್ಟೆ


ಜಾದುಗಾರ ಜಾದೂನಿಂದ ಮಗು ಹುಟ್ಟಿಸ್ದ
ಶಾಪಕ್ಕೆ ಸಿಕ್ಕು ಅಲೀತಿದ್ದ ದೇವ ಕನ್ಯೆಯ
ದೇಹದಿಂದ ಬರ್ತಿದ್ದ ಗಂಧಕ್ಕೆ
ಮಾರುಹೋಗೊ ಗುಣಾನ
ಆ ಮಗು ಸಹಜವಾಗೆ ದಕ್ಕಿಸಿಕೊಂಡಿತ್ತು


ಗರ್ಭಗುಡೀಲಿ ಸಮಾದಿ ಎದ್ದಿದ್ದೆ ಆಗಿದ್ದು
ಈ ದೇವಾಲಯ ದೇವರು ಇತ್ಯಾದಿ
ನದೀನ ಅಗೆದಾಗ ದೊರೆತಿದ್ದು
ಮುಪ್ಪರಿಯದ ತಲೆ ಬುರುಡೆಗಳು


ದೇವರ ಸಾವಿಗೆ ಅಳಲೇ ಬೇಕು ಅನ್ನೋ ನಿನ್ನ ಹಠಕ್ಕೆ
ಅಯ್ಯೋ ಅಂತ ಮರುಕ ಪಡೊ ಸ್ಥಿತೀಲಿ ನಾನಿಲ್ಲ
ಇದು ಊರ ಜಾತ್ರೆ
ಜನಗಳು ಜೈ ಜೈ ಅಂತಿರ್ತಾರೆ
ತೇರೆಳೆದಾಗ ಚಕ್ರಕ್ಕೆ ಬಲಿ ಹಾಕ್ತಿರ್ತಾರೆ
ಗರುಡ ತೇರಿನ ಸುತ್ತ ತಿರುಗಿದ್ನ ಅಂತ ನೋಡ್ತಿರ್ತಾರೆ


ಅನುಮಾನ ಎದ್ದು ಬಿಟ್ಟಾಗ
ಮಣ್ಣ ವಾಸನೆ ಪ್ರತೀಕಾರ ತೀರಿಸ್ಕೊಳ್ಳುತ್ತೆ
ಕಾರಣ, ನಿರಾಕರಣ, ಸಕಾರಣ ದ ಅಂಚಲ್ಲಿ
ಹೊಂಚು ಹಾಕೋನ ಬಲೆಗೆ
ಹೆಸರೆ, ರೂಪಾನೆ, ಮತ್ತೊಂದೆ ?


ಗತಿಗೆ ನಿಯತಿ ಇಲ್ಲ
ಅಹಂಕಾರಾನೆ ಗತಿ


ನಿರ್ಲಿಪ್ತತೆ ಅಂತೀವಲ್ಲ
ಅದಕ್ಕೆ ಒಂದು ರೀತಿಯ ಉತ್ಕಟತೆ ಇರುತ್ತೆ
ಕೃತಿ ನಿರ್ಮಾಣದ ಆಕೃತಿಗೆ                  
ದಿಕ್ಕಾರ ಹೇಳ್ತೀವಲ್ಲ, ಅದಕ್ಕೂ


ಜಗತ್ತಿನ ಶೀರ್ಷಿಕೇನ ಅಂಗೈಯಲ್ಲಿ ಕಟ್ಟಿಕೊಂಡ ಸುಡುಗಾಡ ಸಿದ್ಧ
ಜೋಳಿಗೇಲಿ ಹಾಕ್ಕೊಂಡು ತಟ್ಟಂತ ಮಾಯವಾಗಿ ಹೋದ.

.............................

ಅದೇಕೆ ಸಮುದ್ರದ ಎದುರು ನಿಲ್ಲುತ್ತೀಯ ಎಂಬುದಾಗಲಿ
ಅದೇಕೆ ಅದನ್ನೇ ನೋಡುತ್ತಿರುತ್ತೀಯ ಎಂಬುದಾಗಲಿ
ತಿಳಿಯುವುದೇ ಇಲ್ಲ.

ನಾವು ಒಟ್ಟಿಗೆ ಕೂತಿರುತ್ತಿದ್ದ
ಎಲೆ ಇಲ್ಲದ ಆ ಒಂಟಿ ಮರ
ಈಗಲೂ ಅಲ್ಲೇ ಇದೆ

ಈ ಬಾರಿ ನೀನು ಸೀಮಂತಕ್ಕೆ ಬಂದಾಗ
ಸಿಗುತ್ತೀಯ?
ಒಟ್ಟಿಗೆ ಮರಕ್ಕೆ ಒರಗಿ ಕೂತು ಸಮುದ್ರ ನೋಡುವ

ಸಮುದ್ರದ ದಂಡೆಯಲ್ಲಿದ್ದೂ ಯಾಕೆ ಈ ಮರದಲ್ಲಿ ಎಲೆಗಳೆ ಇಲ್ಲ ಎಂಬುದು
ತಿಳಿಯುವುದೇ ಇಲ್ಲ

ತೇಟ್ ನಿನ್ನಂತೆ.....

ರೈಲು ಹಳಿಯ ಮೇಲಿನ ನಾಣ್ಯ

ಚಿಕ್ಕವನಾಗಿದ್ದಾಗ ನನಗಿದ್ದ ಒಂದೇ ಕನಸೆಂದರೆ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಆಗುವುದು. ನಿತ್ಯವೂ ರೈಲಿನಲ್ಲಿ ಸಂಚರಿಸುವ, ನಿತ್ಯವೂ ಹಲವು ಬಗೆಯ ಜನರನ್ನ ಕಾಣುವ ಟಿಕೆಟ್ ಕಲೆಕ್ಟರ್ ವೃತ್ತಿ ಬಹಳ ಆಕರ್ಷಿಸಿತ್ತು. ಎಲ್ಲಿಗಾದರೂ ಉಚಿತವಾಗಿ ಪ್ರಯಾಣ ಮಾಡುವ ಅನುಕೂಲ ತಿಳಿದಾಗಲಂತೂ ಬದುಕಿನ ಧ್ಯೇಯವೆ ಆ ವೃತ್ತಿಯನ್ನ ಪಡೆಯುವುದು ಎಂದೆನಿಸಿಬಿಟ್ಟಿತ್ತು. ಅದೃಷ್ಟವೋ ದುರಾದೃಷ್ಟವೋ ನಾನು ಟಿಕೆಟ್ ಕಲೆಕ್ಟರ್ ಆಗಲಿಲ್ಲ, ಅದು ಬೇರೆಯದೆ ಕತೆ. ಏನೇ ಆದರೂ ನನಗೆ ರೈಲೆಂದರೆ ಈಗಲೂ ಇಷ್ಟ. ರೈಲಿನ ಒಳಗಿಂದ ಹೊರಗೆ ಕೈ ಬೀಸಿ ಮಕ್ಕಳಿಗೆ ಟಾಟ ಹೇಳುವ ಬಯಕೆ, ಚಿಕ್ಕವನಾಗಿದ್ದಾಗ ರೈಲು ಹೊರಗಿಂದ ರೈಲಿಗೆ ಟಾಟ ಹೇಳುವಾಗಿನ ಬಯಕೆಯಷ್ಟೆ ತೀವ್ರವಾಗಿದೆ. ಬೇಸರವಾದಾಗ, ಯಾವುದೋ ಖಿನ್ನತೆ ನನ್ನನ್ನಾವರಿಸಿಬಿಟ್ಟಿದೆಯೆಂದೆನಿಸಿದಾಗ ರೈಲು ನಿಲ್ದಾಣದಲ್ಲಿ ಹೋಗಿ ಕೂತುಬಿಡುತ್ತೇನೆ. ರೈಲು ನಿಲ್ದಾಣದಲ್ಲಿ ಟೀ ಕುಡಿಯುತ್ತ, ಅಲ್ಲಿ ಹೋಗುವ ಬರುವ ಜನರನ್ನ, ಅವರ ವೇಷಗಳನ್ನ, ಸಾಮಾನುಗಳನ್ನ ನೋಡುತ್ತ ನನ್ನ ಪ್ರಶ್ನೆಗಳ ಜಗತ್ತನ್ನ ಮರೆಯುತ್ತೇನೆ. ಇಡೀ ರೈಲು ನಿಲ್ದಾಣವು ಮೌನವಾಗಿ ಸಂವಹಿಸುವ ಗುರುವಿನಂತೆ ಕಾಣುತ್ತೆ.
ನನ್ನ ತಾತ(ಅಮ್ಮನ ಅಪ್ಪ) ದೊಡ್ಡ ಸಂಗೀತ ವಿದ್ವಾಂಸರಾಗಿದ್ದವರು. ಸಂಗೀತದಲ್ಲಿ ದೊಡ್ದ ವಿದ್ವಾಂಸರಾಗಿದ್ದರೂ ಅದರಲ್ಲಿ ಹಣ ದಕ್ಕುತ್ತಿರಲಿಲ್ಲ. ಹಲ್ಲುಪುಡಿ, ವೋಂವಾಟರ್, ಕಸ್ತೂರಿ ಮಾತ್ರೆಗಳನ್ನ ಮಾಡಿ ನಿತ್ಯವೂ ಹೆಗಲ ಮೇಲೆ ಹೊತ್ತು ಊರೂರೂ ಅಲೆದು ಅವುಗ…

ಮಾರ್ಗ ದರ್ಶನ

೧.

ಸೀರಯಂಗಡಿ ಮುಂದೆ ಇದ್ದ ಹೆಣ್ಣುಗೊಂಬೆಯನ್ನು ಹೊತ್ತೋದವನು
ರಾತ್ರಿಯಲ್ಲಿ ನಿರ್ಜನ ಮಧ್ಯರಸ್ತೆಯಲ್ಲಿ
ವಿಗ್ರಹದ ಪಕ್ಕದಲ್ಲಿ ಸೀರೆಯುಡಿಸತೊಡಗಿದ

ನನಗೆ ಗಾಬರಿಯಾಗಿದೆ

ಆತ ನಿಜದ ವ್ಯಕ್ತಿಯ? ಪ್ರೇತಾತ್ಮವ?
ಹುಚ್ಚನ?  ಙ್ಞಾನಿಯ?

ನಿನ್ನ ಮಾಂತ್ರಿಕ ತಂತ್ರ ವಿದ್ಯೆಗೆ
ನಾನೇ ಗಾಬರಿಗೊಂಡಿದ್ದೇನೆ
ಕಲಿಸಿದ್ದು ನಾನೇ ಇರಬೊಹುದು
ಉಪಸಂಹಾರಕ್ಕೆ ನೀನೇ ಬೇಕು

೨.

ವಿದ್ಯೆ ನನಗೆ ಅಸ್ಮಿತೆ ಹಾಗೂ ಅಹಂಕಾರ
ಅಚ್ಚರಿಗೊಳ್ಳುತ್ತೀರೆಂದು ಭಾವಿಸಿದ್ದೆ  
ಗಾಬರಿಗೊಂಡಿದ್ದರ ಮರ್ಮ ತಿಳಿಯುತ್ತಿಲ್ಲ.

ಕಪ್ಪು ಬೆಕ್ಕು ಮಾಂತ್ರಿಕ ವಿದ್ಯೆಯಲ್ಲಿ ಶ್ರೇಷ್ಠ ಬಲಿ 

ಮೊದಲು ಹುಡುಕಬೇಕು
ಕಪು ಬೆಕ್ಕು ಅಪರೂಪ

ಸಣ್ಣ ತಂತಿಯನ್ನಿಟ್ಟುಕೊಂಡು ತಣ್ಣಗಿನ ಹಾಲನ್ನಿಟ್ಟು
ಅದರ ಬರುವಿಕೆಯ ನಿರಂತರ ಧ್ಯಾನದಲ್ಲಿರಬೇಕು
ಬರುತ್ತೆ, ಬಂದೇ ಬರುತ್ತೆ, ಮೆಲ್ಲಗೆ
ಯಾರೂ ಇಲ್ಲವೆಂದು ಭಾವಿಸಿ
ಹಾಲು ಕುಡಿಯುತ್ತಿರುತ್ತೆ
ಅರ್ದ ಕುಡಿದಿದ್ದಾಗ ನೆಮ್ಮದಿಯಿಂದಿರುತ್ತೆ
ಆಗ ಎಳೆಯಬೇಕು ತಂತಿಯನ್ನ
ಚೀರುತ್ತೆ, ತೊಳಲಾಡುತ್ತೆ, ಒದ್ದಾಡುತ್ತೆ, ಪರಚಲು ಮೇಲೆ ಬರುತ್ತೆ
ಸೋತಾಗ ದೀನ ನೋಟದಿಂದ ನೋಡುತ್ತೆ  
ಆಗ ಮನಸು ಕರಗತೊಡಗುತ್ತೆ
ಇಲ್ಲಿಯವರೆಗೆ ಎಲ್ಲ ಸಾಮಾನ್ಯನೂ ಮಾಡಬಲ್ಲ
ಅಯ್ಯೋ ಪಾಪ ಬಿಟ್ಟುಬಿಡುವ ಅಂತ ಅನ್ನಿಸುತ್ತೆ
ಆಗ
ಬಿಗಿಹಿಡಿದು ತಂತಿಯನ್ನ ಎಳೆಯಬೇಕು
ಅದರ ಕಡೆಯ ಕ್ಷಣಗಳನ್ನ ನಿಬ್ಬೆರಗಾಗದೆ ನೋಡಬೇಕು
ಸಾಯುವ ಕ್ಷಣಗಳಲ್ಲಿ ಆ ಕಣ್ಣುಗಳಲ್ಲಿ ಭೀಕರ ಕಠೋರತೆ ಕಾಣುತ್ತೆ
ಅಲ್ಲಿದೆ ನೋಡಿ …

......................

ನಿನ್ನ ಬಸುರಿನ ಹಾರೈಕೆ ದೊಡ್ಡದು ಕಣೇ
ನನ್ನನ್ನೇ ಹೊಟ್ಟೆಯೊಳಗಿಟ್ಟುಕೊಂಡು ಸಲಹತೀ
ನಾ ಒದ್ದರೂ ಖುಷಿಪಡ್ತೀಯ ಮಗೂನ ಆಟ ಅಂತ
ನನಗೆ ಪಾಪ ಪ್ರಜ್ಞೆ ಕಾಡುತ್ತೆ
ಎಂದಿಗೂ ನೀನು ನನ್ನ ಪ್ರೇಯಸಿ ಆಗಲಿಲ್ಲ ಆಗಲಾರೆ
ನನ್ನ ಅಮ್ಮ ಕಣೇ ನೀನು

.........................

ಶೌಚಕ್ಕೆ ಹೋದಾಗ ಕೈ-ಕಾಲು ತೊಳೆದು ಬರ್ತೇವೆ
ಮಲ ಒಳಗಿದ್ದಾಗ ನಾವೆ ಜೀರ್ಣಿಸಿಕೊಂಡದ್ದು
ಹೊರಗೆ ಬಂದರೆ ಗಲೀಜು ಅಸಹ್ಯ
ಒಂದಾ ಕೈ ಕಾಲು ತೊಳೆದು ಬರೋದನ್ನೇ ಬಿಡಬೇಕು
ಇಲ್ಲವಾ ಒಳಗಿದ್ದಾಗಲೂ ತೊಳೀಬೇಕು
ಶಬ್ದ ಹಾಗು ಮಲ ಎರೆಡೂ ಒಂದೇ ರೀತಿ
ಇಲ್ಲಿ ತೊಳೆದು ಅಲ್ಲಿ ಬಿಡ್ತೀನಿ ಅನ್ನೋನು ಕಿರುಚುತಾನೆ

.....................

ಒಮ್ಮೆ ಒಬ್ಬ ಒಂದು ಅನಾಥ ಮನೆಯೊಂದನ್ನು ಕಂಡು ಒಳಹೊಕ್ಕ
ಗೋಡೆಯ ಮೇಲೆಲ್ಲ ಅರ್ಥವಾಗದ ಮಗುವಿನ ಬರಹಗಳು
ಹಳದಿ ಬಣ್ಣ ತಿರುಗಿದ ಕಿರಾಣಿ ಅಂಗಡಿ ಲೆಕ್ಕದ ಪುಸ್ತಕ ಹಾಗು ದಿನಚರಿ
ಹರಿಸಿನ ಕುಂಕುಮ ಚೆಲ್ಲಿದ್ದ ಸಮಾಧಿ

ಏನನ್ನೋ ಕಂಡವನಂತೆ ತಿಳಿಸಿದಾಗ
ಪುರಾತತ್ವ ಇಲಾಖೆಯವರು ಆಕ್ರಮಿಸಿ
ಪ್ರವೇಶ ಶುಲ್ಕವನ್ನು ನಿಗದಿಗೊಳಿಸಿದ್ದಾರೆ

...........................

ಪ್ರಶ್ನೆ ಉತ್ತರ ಎಂಬೋದು ಸಂಭೋಗದಂತೆ
ಆತ್ಮ ಸಂತೃಪ್ತಿ ಅಥವಾ ಹುಟ್ಟು
ಮತ್ತೆ ಮತ್ತೆ ಬೇಕಾದಾಗ ಚಟ
ಪ್ರಭುದ್ಧ ಭಾಷೇಲಿ ಸಂಬಂಧ

ಹುಟ್ಟು ಸಂಭೋಗಾನ ಮೀರಿದ್ದು   
ತೇಟ್ ಪ್ರಶ್ನೆ ಉತ್ತರಗಳಂತೆ
ತಿರುಕನ ಮನೆಯ ಮುಂದೆ ತಿರುಕ
ತಿರುಬೋಕಿಯ ಸ್ವಗತ

...................

ನನಗೆ ತಿಳಿಯೋಲ್ಲ
ಯಾಕೆ ಜನಗಳು ದೆವ್ವಗಳನ್ನ ಕಂಡರೆ ಹೆದರುತ್ತಾರೆ ಅಂತ,
ದೆವ್ವಗಳು ಅಂದರೆ ಅತೃಪ್ತ ಆತ್ಮಗಳಂತೆ

ನಾನು ಒಂದು ಅತೃಪ್ತ ಆತ್ಮಕ್ಕೆ
ಕಾವಲುಗಾರನಾಗಿ ನಿಯಮಿಸಲ್ಪಟ್ಟಿದ್ದೇನೆ
ಒಂಟಿ ಕಾವಲುಗಾರನಾದುದರಿಂದ
ಬೇಸರ ಕಾಡದಿರಲೆಂದು/ಭಯಪಡಬಾರದೆಂದು
ಈ ಅತೃಪ್ತ್ ಆತ್ಮವು ತೃಪ್ತವಾಗುವ ಬಗೆಯನ್ನ ತಿಳಿಯಲಿಕ್ಕೆ
ನನ್ನ ಜೀವನವನ್ನ ಮೀಸಲಿರಿಸಿದ್ದೇನೆ.