..........................



ನಾ ಬರೆದ ಕವನಕ್ಕೆ ಬಲಿಯಾದದ್ದು ನನ್ನ ತಪ್ಪೆ?
ರೂಪಕವನ್ನ ದಕ್ಕಿಸಿಕೊಳ್ಳಲಾರದ ನಿಷ್ಪ್ರಯೋಜಕನಾದೆನ?

ನನಗೆ ಗೊತ್ತು ಗುರುಗಳೆ,
ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ.
ತಮ್ಮೆಲ್ಲಾ ತಪೋ ಶಕ್ತಿಯನ್ನೂ
ನನ್ನ ಸುಡಲಿಕ್ಕೆ, ಸುಟ್ಟು ಸ್ಮಾರಕವನ್ನ ಮಾಡಲಿಕ್ಕೆ
ನನ್ನ ಬಲಿಯನ್ನು ತ್ಯಾಗವೆಂದು ಘೋಷಿಸಲಿಕ್ಕೆ

ಬಾವಗೀತಾತ್ಮಕವಾಗುತ್ತಿದೆಯೆಂದು ಬೇಸರಿಸಿಕೊಳ್ಳಬೇಡಿ,
ಕವನ ಬರೆಯಲೇ ಬೇಕೆಂದು, ಎಂದೂ ನಾನೂ ಹೊರಡಲಿಲ್ಲ.

ನೀವೇ ಹೇಳಿದ್ದು ಗುರುಗಳೆ,
ಛಂದಸ್ಸನ್ನು ಮೀರುವ ಮುನ್ನ ಛಂದಸ್ಸನ್ನು ಅರಿ.
ಅರಿತಿದ್ದೀನೋ ಇಲ್ಲವೋ ನಾ ಅರಿಯೆ!?
ಮೀರುವ, ಛಿದ್ರಿಸುವ ಸಂಕಲ್ಪಕ್ಕೆ ಶರಣಾಗಿದ್ದೇನೆ.
ಬಲಿಯಾಗುವುದೇ ಆದರೆ,
ಇರಲಿ ಬಿಡಿ ಅದಕ್ಕೂ ಒಂದು ಸಾಲು.
ತಪ್ಪಿದ್ದರೆ ಕ್ಷಮಿಸಿಬಿಡಿ.

3 ಕಾಮೆಂಟ್‌ಗಳು:

  1. ಕವನ ಬಲಿ ಸಿಧಿಸದ ರೂಪಕ
    ಭಗ್ನತಪ ಉರಿದ ಸ್ಮಾರಕ ತ್ಯಾಗ
    ಬೇಸರ ಭಾವ ಬೇಡದ ಬರಹ

    ಅರಿವು, 'ಛಂದ' ಮೀರುವ ಅರಿವು
    ಅರಿತಿಹೆನೊ-ಮೀರಿಹೆನೊ ದ್ವಂದ್ವ
    ಅರಿವಿರದ ತಪ್ಪಿನಾಂತರಂಗ

    ಇದೇ ಚುಕ್ಕಿಗಳ ಸಾಲು ..........................

    ಪ್ರತ್ಯುತ್ತರಅಳಿಸಿ
  2. ಕುರಿಮಂದೆಯ ಮೌನ
    ಎಂದೂ ಒಳ್ಳೇದಲ್ಲ,
    -ತೋಳದ ದವಡೆಗೆ ಮೂಲ!?

    ಅಪ್ಪಣೆ ಪುರೋಹಿತರೇ
    ಕುರಿಯಾದದ್ದೋ ಯಾ ಆಗಿಸಿದ್ದೋ
    ಇತ್ಯಾದಿಯೆಲ್ಲ ಚಿಂತನೆ ನಿರರ್ಥಕ..
    ಕೊಬ್ಬಿಸಿಕೊಂಡು ಮಸಾಲೆಗೀಡಾದದ್ದು ಮಾತ್ರ ಸತ್ಯಸ್ಯ ಸತ್ಯ.

    ಮತ್ತಪ್ಪಣೆಯೇ ಪುರೋಹಿತರೇss
    ಕುರಿಯಾದ ಮೇಲೆ
    ಮೌನ ಕಾಗೆಬಂಗಾರ
    ಅರಣ್ಯರೋಧನವಾದರೂ ಸರಿ
    ಬೇಂss ಎಂದರಚುತ್ತಿರುವ...
    ಶುದ್ಧ ನಿರುಪಯೋಗಿ ಅಸಮಾಧಾನಕ್ಕೂ
    ಹೀಗೆ ವಾಚ್ಯ ಅಭಿವ್ಯಕ್ತಿಯಿರಲಿ...

    ಪ್ರತ್ಯುತ್ತರಅಳಿಸಿ
  3. ಮೀರಿದ್ದೀನೋ ಇಲ್ಲವೋ ಅಂತ ತಿಳಿಯಲೂ ಅರಿವು ಬೇಕು. ಅರಿವಿನ ಒಂದು ವರ್ತುಲ ಮುಗಿವಲ್ಲಿ ಮೀರುವ ಸೀಮೋಲ್ಲಂಘನದ ಆರಂಭ. ಛಿದ್ರಿಸಲು ಹೊರಡುವ ಮುಖಾಂತರವೂ ಅರಿಯಬಹುದು; -ವಿಷಯದ ಸೂಕ್ಷ್ಮ ಪ್ರದೇಶ (weak/singular points)ಗಳನ್ನಾದರೂ.

    ಪ್ರತ್ಯುತ್ತರಅಳಿಸಿ