ವಿಷಯಕ್ಕೆ ಹೋಗಿ

ತಿರುಬೋಕಿಯ ಸ್ವಗತ ೧ಬದುಕಿಗೆ ರಚನೆ ಎಂಬೋದೇ ಇಲ್ಲ. ಸ್ವಲ್ಪ ಕೇಳಿ ಇಲ್ಲಿ. ಕೇಳಲಿಕ್ಕೆ ಆಗದಿದ್ದರೆ ಓದಿ. ಓದಲಿಕ್ಕೆ ಆಗದಿದ್ದರೆ ಓಡಿಹೋಗಿ. ಸತ್ಯವನ್ನ ಎರೆಡೂ ಕಣ್ಣುಗಳಿಂದ ನೋಡಬೇಕು. ಕೆಲವೊಮ್ಮೆ ಸಾದ್ಯ ಆಗೋದಿಲ್ಲ. ಕಣ್ಣು ಮಿಟಿಕಿಸುತ್ತಲೇ ಇರಬೇಕಾಗುತ್ತೆ. ಆಗ ಸತ್ಯ ತಪ್ಪಿಸಿಕೊಂಡುಬಿಡುತ್ತೆ. ಆದ್ರಿಂದ ಕಣ್ಣುಮಿಟುಕಿಸ್ದೆ ಸತ್ಯಾನ ನೋಡ್ತಾ ಇರಿ. ನೋಡೋಕೆ ಆಗೋಲ್ಲ, ಅದಕ್ಕೇ ಸುಳ್ಳನ್ನ ಸತ್ಯ ಅಂತ ಬಾವಿಸಿಬಿಟ್ಟರೆ ಆಯ್ತು. ಯಾವ ಸಮಸ್ಯೇನೂ ಇಲ್ಲ. ಅಸ್ತಿತ್ವ, ಅದೊಕ್ಕೊಂದು ಮಹಾನ್ ಕುರುವು, ಅದನ್ನ ಸ್ಥಾಪಿಸಲಿಕ್ಕೆ ಹೋರಾಡೋದು. ಯಾವುದೋ ಪ್ರತಿಮೆ, ನನ್ನನ್ನ ನಾನು ಪೂಜ್ಯಗೊಳಿಸಿಕೊಂಡುಬಿಡಬೇಕು. ನೋಡಿ ಸ್ವಾಮಿಗಳೆ, ಮಹಾನ್ ಸ್ವಾಮಿಗಳೆ. ಬನ್ನಿ, ಬನ್ನಿ ನಾನೊಬ್ಬ ಮಹಾನ್ ಪೂಜ್ಯ ವ್ಯಕ್ತಿ. ಎಲ್ಲಿ ಹಾರ ತನ್ನಿ, ಒಂದು ಶಾಲೂ, ಜೊತೆಗೆ ಒಂದಿಷ್ಟು ಹಣ್ಣು, ಒಂದು ಸಮಾರಂಭ. ನಾನೀಗ ದೊಡ್ಡ ಮನುಷ್ಯ.

ಅಸ್ತಿತ್ವದ ಮಹಾನ್ ಕುರುವನ್ನು ಸ್ಥಾಪಿಸಲು ಹೋಗುತ್ತಿದ್ದೇನ ? ಯಾವ ಪ್ರತಿಮೆಯ ಹಿಂದೆ ಹೋಗುತ್ತಿದ್ದೇನೆ? ನನ್ನನ್ನು ನಾನೆ ಪೂಜ್ಯಗೊಳಿಸಿಕೊಳ್ಳೋಕೆ ಹೋಗುತ್ತಿದ್ದೇನೆ. ಯಾವುದೋ ಪ್ರತಿಮೆ, ಒಂದಾ ನಿರಾಕರಿಸಲಿಕ್ಕೆ, ಅಥವಾ ಸ್ವೀಕರಿಸಲಿಕ್ಕೆ. ಪ್ರತಿಮೆಗಳಿಲ್ಲದೆ ಬದುಕಲಿಕ್ಕೆ ಸಾದ್ಯವೇ ಇಲ್ಲವ? ಅಥವಾ ಬದುಕನ್ನೇ ಒಂದು ಪ್ರತಿಮೆಯನ್ನಾಗಿ ಮಾಡಿಬಿಟ್ಟಿದ್ದೇವೆಯೆ? ಏನೋ, ಏನೂ ತಿಳಿಯುತ್ತಿಲ್ಲ. ಸುಮ್ಮನೆ ಪದಗಳ ಅಬ್ಬರ.

ನಿಜ, ಎಂತದೂ ಇಲ್ಲ ಇಲ್ಲಿ. ಕೆಲಸಕ್ಕೆ ಬಾರದ ಪದಗಳು. ಇದೊಂತರ ತೆವಲು. ನಿಜಕ್ಕೂ ಏನೂ ತಿಳಿದಿಲ್ಲ, ಅಥವಾ ತಿಳಿಯುತ್ತಲೂ ಇಲ್ಲ. ಆದರೂ ಪದಗಳ ಅಬ್ಬರದಲ್ಲಿ ಸತ್ಯವನ್ನ, ವಾಸ್ತವವನ್ನ, ಬದುಕಿನ ಧ್ವನಿಯನ್ನ ಕಾಣಲಿಕ್ಕೆ ಹೋಗುತ್ತಿದ್ದೇನೆ. ಪದಗಳೇ ಇಲ್ಲದೆ ಬದುಕಿಬಿಡಬೇಕು. ಹಾಗೆ ಒಮ್ಮೆ ಬದುಕಿದ್ದೆ. ಬಾಲ್ಯದಲ್ಲಿ. ಕಥೆ ಕಟ್ಟುವ ಅವಶ್ಯಕತೆಯಿಲ್ಲದೆ ಬದುಕಿದ್ದ ದಿನಗಳವು. ಕಥೆ ಎಂಬೋದೇ ಮಹಾನ್ ರಚನೆ. ಆ ಕಥೆಯೇ ಎಲ್ಲ ಸಮಸ್ಯೆಗಳ ಮೂಲ. ಹಾಳು ಕಥೆ. ಒಂದಾ ಕಥೆ ಕಟ್ಟಲಿಕ್ಕೆ, ಪದಗಳನ್ನ ರಚಿಸೋದಕ್ಕೆ ಕೂಡೋದು, ಇಲ್ಲಾಂದ್ರೆ ನಾವೇ ಕಥೆ ಆಗಲಿಕ್ಕೆ ಸಾದ್ಯವ ಅಂತ ಹಂಬಲಿಸೋದು. ಒಟ್ಟಿನಲ್ಲಿ, ಚರಿತ್ರೆಯ ಪುಟದಲ್ಲಿ ಕಥೆಯಾಗಿಬಿಡಬೇಕು. ಕಥೆ ಬರೆದಾದರೂ ಕಥೆಯಾಗಿಬಿಡಬೇಕು. ನನಗೆ ಬೇಕಿಲ್ಲ. ಕಥೆಯಾಗುವುದೂ ಬೇಕಿಲ್ಲ, ಕಥೆಕಟ್ಟುವುದೂ ಬೇಕಿಲ್ಲ.

ಯಾಕೊ ಇಂದು ನನ್ನ ಬಾಲ್ಯದ ದಿನಗಳು ನೆನಪಾಗುತ್ತಿದೆ.


"ಲೇ ಏನೋ ಮಾಡ್ತಾ ಇದ್ದೀಯ?"
"ಅಮ್ಮ, ನೋಡಿಲ್ಲಿ. ಈ ಕಪ್ಪಗೆ ನೆರಳು ಇದ್ಯಲ್ಲಮ್ಮ, ಅದು ನನ್ನ ಕಾಲ ಕೆಳ್ಗೆ ಇದೆ ನೋಡಿದ್ಯ"
", ತರ್ಲೆ, ನೆರೆಳು ನಿನ್ನ ಕಾಲ್ಕೆಳ್ಗೆ ಇಲ್ದೆ ಇನ್ನೆಲ್ಲಿರುತ್ತೋ?"
"ಅಲ್ಲಮ್ಮ, ನೋಡು, ನಾನು ಆ ಬುಡ್ಡಿ ಹತ್ತಿರಕ್ಕೆ ಹೋದರೆ, ನೋಡು ನೆರಳು ದೊಡ್ಡದಾಗಿ ಕಾಣಿಸೋತ್ತೆ. ಅದೆ, ದೂರ ಹೋದರೆ ಚಿಕ್ಕದಾಗುತ್ತೆ, ಯಾಕಮ್ಮ ಹಂಗೆ?"
"ನಂಗೊತ್ತಿಲ್ವೊ, ತಲೆ ತಿನ್ಬೇಡ ಹೋಗು, ಲೇ ಇರೋದೊಂದು ಸೀಮೆಯೆಣ್ಣೆ ಬುಡ್ಡಿ, ಸೀಮೇ ಎಣ್ಣೆ ಆಗೋಗಿದೆ ಮನೇಲಿ. ಈ ಕಡೆ ಬಾ, ಏನೇನೋ ಮಾಡೋಕೋಗಿ ಬುಡ್ಡಿ ಹಾಳು ಮಾಡ್ಬೇಡ"

ಸೀಮೇ ಎಣ್ಣೆ ಬುಡ್ಡಿಯೊಂದಿಗೆ ನಾನು ಸುಮ್ಮನಿರದೆ ಆಡುತ್ತಾ ಕೂರುತ್ತಿದ್ದ ದಿನಗಳವು. ಹಳೇ ಮನೆ, ಹಳೇ ಬುಡ್ಡಿ, ಅಮ್ಮ ಸ್ವಚ್ಚವಾಗಿ ವರೆಸಿಟ್ಟ ಗಾಜಿನ ಬುಡ್ಡಿಯಿಂದ ಬರುತ್ತಿರೋ ಬೆಳಕಿನ ಜೊತೆಗೇನೆ ಬರುವ ಸೀಮೇ ಎಣ್ಣೆ ವಾಸನೆ. ಅದರ ಮುಂದೆ ಕೂತು ಕೈಯನ್ನ, ಕಾಲನ್ನ, ಚಿತ್ರ ವಿಚಿತ್ರವನ್ನಾಗಿಸಿ ಎದುರು ಗೋಡೆಯಲ್ಲಿ ಮೂಡುತ್ತಿದ್ದ ನೆರಳಿನೊಡನೆ ಆಟ ಆಡುವುದು, ಮತ್ತೆ ಏನೋ ಹೊಳದವನಂತೆ ಅಮ್ಮನ್ನ ಕರೆದು,
"ಅಮ್ಮ ಇಲ್ಲಿ ನೋಡು ಹಕ್ಕಿಗಳು ಹಾರ್ತ ಇದೆ"
"ಅಮ್ಮ, ಅದು ನೋಡು ಬೆಟ್ಟಗಳು"
"ರೀ ಇಲ್ಲಿ ನೋಡ್ರೀ ಎಷ್ಟು ಚೆನ್ನಾಗಿ ಮಾಡಿದ್ದಾನೆ"
ಅಂತ ನಾನು ಮಾಡಿದ ಎಲ್ಲಾ ವಿಚಿತ್ರಗಳೂ, ತನ್ನ ಮಗನ ಹೆಮ್ಮೆಯ ಕೃತ್ಯಗಳೆಂದು ಅಮ್ಮ ಅಣ್ಣನ್ನ ಕರೆದು ತೋರಿಸಿ , ಆಮೇಲೆ ಅಜ್ಜಿ ಬಂದು ನೋಡಿ ಏನೋ ಹೇಳಿ ಹೋಗೋಳು. ಸಂಜೆಯಾದರೆ ಅಮ್ಮ, ಅಪ್ಪ, ಅಜ್ಜಿ, ನಾನು, ಪಕ್ಕದ ಮನೆಯವರು, ಎದುರು ಮನೆಯವರೂ ಎಲ್ಲಾ ಒಟ್ಟಿಗೇ ಕೂತು ಮಾತನಾಡುತ್ತಾ ಸಂಜೆಯ ಬೆಳಕು ಮಾಸಿ ಕತ್ತಲಾಗುವುದನ್ನೂ, ಹಕ್ಕಿಗಳು, ಕಾಗೆಗಳು ಶಬ್ದಮಾಡುತ್ತ ಮನೆಯ ಪಕ್ಕವೇ ಇರೋ ಅರಳಿ ಮರದ ಗೂಡುಗಳಿಗೆ ಸೇರೋದನ್ನ ನೋಡುತ್ತ, ಅಜ್ಜಿಗೆ ಏನನ್ನೋ ಕೇಳುತ್ತಾ, ಕೂತಿರುತ್ತಿದ್ದೆ.
"ಅಜ್ಜಿ, ಕಾಗೆಗಳು ಯಾಕೆ ಮರದ ಮೇಲೆ ಮನೆ ಕಟ್ಟುತ್ತೆ?"
"ಅಜ್ಜಿ ಅವೂ ನಮ್ಮನೇ ತರ ಸೀಮೆಂಟು ಎಲ್ಲ ಹಾಕಿ ಕಟ್ಟುತ್ತ?"
"ನಮ್ಮನೇಲಿ ಇರೋ ತರ TV ಇದ್ಯ?"
"ಅವೂ ಸ್ಕೂಲಿಗೋಗುತ್ತ?"
ಹೀಗೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಡವರಿಸುತ್ತರಬೇಕಾದರೆ ನನ್ನಜ್ಜಿ ಅಲ್ಲಿರೋ ಮಕ್ಕಳನ್ನೆಲ್ಲಾ ಕರೆದು, ಎಲ್ಲರೂ ಅವಲ್ಲಕ್ಕಿ ಪವಲಕ್ಕಿ ಆಟ ಆಡಿ ಅಂತ ಅಂದು ಬಿಡೋಳು. ಎಲ್ಲರೂ ಆಟದಲ್ಲಿ ತಲ್ಲೀನರಾಗಿಹೋಗಿ ಎಲ್ಲಾ ಪ್ರಶ್ನೆಗಳನ್ನೂ ಮರೆತುಬಿಡುತ್ತಿದ್ದೆವು.

ಈಗ ಮತ್ತೆ ಅದೇ ಪ್ರಶ್ನೆಗಳು ಮತ್ತೊಂದು ರೂಪದಲ್ಲಿ ಎದುರಿಗೆ ನಿಂತಿವೆ. ನೆರಳಿನ ಪ್ರಶ್ನೆ. ವಾಸ್ತವದ ಪ್ರಶ್ನೆ. ಸಿದ್ದ ಸೂತ್ರಗಳ, ಸಿದ್ದ ಉತ್ತರಗಳು ನನಗೆ ಸಾಕಾಗುತ್ತಿಲ್ಲ. ಎಲ್ಲವನ್ನೂ ಅನುಮಾನಿಸುವ ಹಂತಕ್ಕೆ ತಲುಪಿದ್ದೇನೆ. ಇಲ್ಲಿ ಏನೋ ತಾತ್ವಿಕತೆ, ಹಾಳೂ, ಮೂಳೂ ಇದೆ ಎಂಬೋ ಭಾವನೆ ಎಲ್ಲಾ ತಪ್ಪು. ಮತ್ತೇ ಅದೇ ನೆರಳು, ಅದೇ ಹಕ್ಕಿ, ಅದೇ ಮನೆ, ಅದೇ ಸಂಬಂಧಗಳು. ಪ್ರಶ್ನೆಗಳು ಅವೇ, ಆದರೆ ಉತ್ತರಗಳು...? ಅವೇ ಆಗಲಿಕ್ಕೆ ಸಾದ್ಯವೆ....? ಹುಚ್ಚನಾಗಲಿಕ್ಕೆ ಹುಚ್ಚುತನದ ಬೆನ್ನುಹತ್ತಿದ್ದೇನೆ. ಇಡೀ ಪದಗಳನ್ನೇ ಸುಟ್ಟುಬಿಡಬೇಕು. ಭಾಷೆಯೇ ಇಲ್ಲದ ಕಾಲಕ್ಕೆ ನಾನು ತಲುಪಿಬಿಡಬೇಕು. ಭಾಷೆಯೂ ಇಲ್ಲ! ಪ್ರಶ್ನೆಯೂ ಇಲ್ಲ! ಉತ್ತರವೂ ಇಲ್ಲ! ದೇವರೂ ಇಲ್ಲ!

ಕಾಮೆಂಟ್‌ಗಳು

  1. ಮನದಾಳದಲ್ಲಿ ಯಾವ ಚೌಕಟ್ಟೂ ಇಲ್ಲ -- ಶಬ್ಧಗಳು, ಮಾತು, ಎಲ್ಲ ಅರ್ಥಹೀನ! ಈ ಅನುಭವವನ್ನೂ ಶಬ್ಧಗಳಲ್ಲಿ ಹಿಡಿದಿಡಬೇಕಾಗಿರುವುದು ಒಂದು ವಿಪರ್ಯಾಸ! ಒಳ್ಳೆ ಯತ್ನ -- ಮನ ಮುಟ್ಟಿತು.

    ಪ್ರತ್ಯುತ್ತರಅಳಿಸಿ
  2. ಹುಡುಕ ಹೊರಟರೆ ಸಿಕ್ಕಿದ್ದೆಲ್ಲವೂ ಸುಳ್ಳೇನೋ ಎನಿಸುತ್ತದೆ ಕೆಲವೊಮ್ಮೆ. ವಾಸ್ತವ, ಅವಾಸ್ತವಗಾಳ್ಯಾವೂ ಅರ್ಥವಾಗದೇ ಸುಮ್ಮನೆ ಬದುಕಿಬಿಡೋಣ ಅನ್ನಿಸಿದರೂ ಮತ್ತೆ ನೆರಳು, ಮತ್ತದೇ ಪ್ರಪಂಚದ ಬಣ್ಣಗಳು, ಬುದ್ಧನ ವೈರಾಗ್ಯಕ್ಕೂ, ಶಿಶುನಾಳರ ಜಿಜ್ಞಾಸೆಗೂ ಎಲ್ಲಕ್ಕೂ ಬಣ್ಣಗಳು ಕಾಣತೊಡಗುತ್ತವೆ. ಮತ್ತೆ ಬರೆಯಲು ಕೂಡುತ್ತೇನೆ, ಬಣ್ಣಗಳನ್ನು ಬಯಲುಮಾಡಿಬಿಡುತ್ತೇನೆ, ಶುಭ್ರ ಬಿಳಿ ಸ್ಥಾಪಿಸುತ್ತೇನೆಂದು. ಸ್ವಲ್ಪವೇ ಹೊತ್ತಿನಲ್ಲಿ ಇಂಕು ಹರಡಿ ನಾನೇ ಬರೆಯುತ್ತಿರುವ ಹಾಳೆಯ ತುಂಬ ರಾಡಿ. ಅಬ್ಬ! ಯಾವ ಭ್ರಾಂತಿಯ ಹಿಂದೆ ನಡೆದೆ! ಕೊನೆಗೆ ಮೌನವಾಗಿ, ಎಲ್ಲೂ ಇರದಂತೆ ಜಗತ್ತಿನೊಡನೆ ಲೀನವಾಗಬೇಕೆನಿಸಿದ್ದುಂಟು. ಮೌನವೂ ಸುಮ್ಮನಿರುವುದಿಲ್ಲ ಮತ್ತೆ. ಮೌನವೇನೋ ಇನ್ನೂ ಘಾಡವಾದದ್ದು ಹೇಳಬೇಕೆನ್ನುತ್ತಿದೆಯೆಂದು ಕೇಳಿಸಿಕೊಳ್ಳುತ್ಟಾ ಅರ್ಥೈಸಲು ತಿಣುಕಾಡುತ್ತ ಇರುತ್ತೇನೆ! ಮತ್ತೆ ಬರೆಯುತ್ತೇನೆ. ಅಬ್ಬ! ಕೊನೆಗೂ ನಾವು ತಿರುಬೋಕಿಗಳೇ!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

.....

ಅವಳಿಗೊಮ್ಮೆ ನನ್ನ ಹೆಣ್ಣಾಗಿ
ನೋಡಬೇಕೆಂದೆನಿಸಿ
ಸೀರೆಯುಡಿಸಿದಳು ನಾಜೂಕಾಗಿ
ಸೊಂಟ ಹೊಕ್ಕಳು ಕಾಣುವಂತೆ.

ಬಳೆ ತೊಡಿಸಿದಳು  ಅರ್ದ ಒಡೆದಿತ್ತು
ಮಾಂಗಲ್ಯ  ಬಂಗಾರದ ಸರದಲ್ಲಿ
ಬೀರುವಿನಲ್ಲಿದ್ದದ್ದನ್ನು
ಹಾಕಿದಳು
ಸರಿ ಹೊಂದಲಿಲ್ಲವೆಂದೂ ಹೇಳಿದಳು.

ಜೊತೆಯಾಗಿ ಕುಣಿಯುವ ಎಂದಳು
ಕುಣಿವಾಗ ಸೆರಗು ಜಾರಲಿಲ್ಲ
ಅವಳ ಕೈ  ದೇಹವನ್ನಪ್ಪಿತ್ತು
ಯಾಕೋ ಮತ್ತೆ ಗಂಡಾಗಬೇಕೆಂದಿನೆಸಿಲೇ ಇಲ್ಲ.

ಹಳೆಯ ಮೊಳೆ ಹಾಗೂ ಹೊಸ ಮದುವೆ : ಒಂದು ಉಪಮೆ

ಹಾಗಾಗಿ ಮೊಳೆಯೇ
ಇದು ನಿನ್ನದೇ ತಪ್ಪೆಂದು ತೀರ್ಪನ್ನಿರಿಸಿದ್ದಾರೆ

ಆಗಿದ್ದಿಷ್ಟು

ಹೆಣ್ಣನ್ನು ಮನೆ ತುಂಬಿಸಿಕೊಳ್ಳುವಾಗ
ಹೊಸಲ ಮೇಲೆ ಕಾಸನ್ನಿಟ್ಟು ಮೊಳೆ ಹೊಡಿಸುವುದು
ಸಂಪ್ರದಾಯ

ಹೆಣ್ಣು ಗಂಡು ಅದೆಷ್ಟೇ ಪ್ರಯತ್ನಿಸಿದರೂ
ಅಂದು ಮೊಳೆ ಹೊಡೆಯುವುದು ಕಷ್ಟವಿತ್ತು
ಸುತ್ತಿಗೆ ಸರಿಯಿರಲಿಲ್ಲ ಮೊಳೆ ಚೂಪಿರಲಿಲ್ಲ ಕಾಸು ಗಟ್ಟಿಯಿತ್ತು
ಹುಡುಗ ಹುಡುಗಿ ದಣಿದಿದ್ದರು
ಇತ್ಯಾದಿ ಇತ್ಯಾದಿ

ಬಲ ಬಿಟ್ಟು ಹೊಡೆದಾಗ
ಮೊಳೆ ಹೊಸಲಿಗೆ ತಾಗುತ್ತಲೆ
ಗಂಡಿನ ಬೆರಳಿಗೂ - ಹೆಣ್ಣಿನ ಬೆರಳಿಗೂ ತಾಗಿ
ಇಬ್ಬರ ರಕ್ತವನ್ನೂ ಬೆರೆಸಿ
ಹೊಸಲಿಗಿಳಿದಿತ್ತು

ಮಾರನೇ ದಿನದಿಂದ
ಹುಡುಗ  ಹುಡುಗಿ
ಎಲ್ಲರೂ
ರಕ್ತ ಬಳಿದ ಹೊಸಲನ್ನು ದಾಟುತ್ತಲೇ ಸಂ
ಸಾರ ಸಾಗಿಸುತ್ತಿದ್ದರು

ಮೊದಲಿಗೆ ಬೆರಳಿಗೆ ಗಾಯವಾದದ್ದು
ಹುಣ್ಣಾಗಿ
ಮೊದಲು ಬೆರಳು, ಆಮೇಲೆ ಕೈ, ನಂತರ ದೇಹ
ಹೀಗೆ ಪೂರ ಆವರಿಸಿ ಮುಗಿಸುವ ಹೊತ್ತಿಗೆ
ಇಬ್ಬರ ಆಯಸ್ಸೂ

ಈಗ ಹೇಳಿ
ಇದು ಮೊಳೆಯದೇ ತಪ್ಪಲ್ಲವೆ
ಹಾಗಾಗಿ
ಹೊಸಲನ್ನು ಬಿಟ್ಟು ನಾಣ್ಯವನ್ನು ಬಿಟ್ಟು
ಹೊಡೆದ ಸುತ್ತಿಗೆಯನ್ನೂ ಕೈಯನ್ನೂ ಬಿಟ್ಟು
ಮೊಳೆಯನ್ನೇ ಶಿಕ್ಷಿಸಬೇಕಾಗಿ ತೀರ್ಪಾಗಿದೆ.

ಭೌತಶಾಸ್ತ್ರದ ಪ್ರೀತಿಗಾಗಿ

ಇನ್ನೇನು ಆಗಲೇ ಕಾಲೇಜು, ಮುಖ್ಯವಾಗಿ ಪದವಿ ತರಗತಿಗಳು ಆರಂಭವಾಗಿರಬೇಕು ಅಥವಾ ಇಷ್ಟರಲ್ಲೇ ಆರಂಭವಾಗಬಹುದು. PUC ಎಂಬ ತ್ರಾಸಮಯ ಘಟ್ಟ ಮುಗಿಸಿ ಈಗ ಹೊಸದೊಂದು ಯಾನವನ್ನ ಆರಂಭಿಸಲು ಹೊರಡುವ ಸಮಯ. ಹಲವರು ಇಂಜಿನಿಯರಿಂಗ್ ಎಂದೋ ಮೆಡಿಕಲ್ ಎಂದೋ ಹೋಗಿರುತ್ತಾರೆ. ಕೆಲವರು ಮೂಲತಃ ಮೂಲ ವಿಜ್ಞಾನದಲ್ಲಿ ಆಸಕ್ತಿಯಿರುವವರು ಪದವಿಗೆ ಸೇರಿರುತ್ತಾರೆ. ಮತ್ತೆ ಕೆಲವರಿಗೆ ಮೂಲ ವಿಜ್ಞಾನದಲ್ಲಿ ಆಸಕ್ತಿಯಿದ್ದರೂ ಇಂಜಿನಿಯರಿಂಗ್ ಸೇರಿರುತ್ತಾರೆ. ಮೂಲ ವಿಜ್ಞಾನದಲ್ಲಿ ಆಸಕ್ತರಾಗಿ ಮುಂದೆ ಸಂಶೋಧಕರಾಗಬೇಕೆಂದು ಬಯಸುವವರಿಗೆ ನನ್ನ ಅನುಭವದಲ್ಲಿ ದಕ್ಕಿದ ಒಂದಿಷ್ಟು ಮಾಹಿತಿಗಳನ್ನ ಕೊಡಬೇಕೆಂದೆನಿಸಿ ಈ ಲೇಖನ ಬರೆಯುತ್ತಿದ್ದೀನಿ. ನನ್ನ ಕ್ಷೇತ್ರ ಸೈದ್ಧಾಂತಿಕ ಬೌತಶಾಸ್ತ್ರ., ಹಾಗಾಗಿ ಆ ಕ್ಷೇತ್ರದ ಬಗೆಗೆ ಮಾತ್ರ ದೀರ್ಘವಾಗಿ ಬರೆಯುತ್ತೀದ್ದೀನಿ. ನನ್ನ ಸ್ನೇಹಿತರ್ಯಾರಾದರೂ ಒಪ್ಪಿದರೆ ಉಳಿದ ಕ್ಷೇತ್ರಗಳ ಬಗೆಗೆ ಬರೆಸಲು ಪ್ರಯತ್ನಿಸುತ್ತೇನೆ.. ಅಷ್ಟೇ ಅಲ್ಲ ಮಾನವೀಯ ವಿಷಯಗಳ ಬಗೆಗೂ ಬರೆಸಬೇಕೆಂದಿದ್ದೇನೆ ಮುಂದಿನ ದಿನಗಳಲ್ಲಿ ಪ್ರಯತ್ನಿಸುತ್ತೇನೆ. ವಿಷಯಾಧಾರಿತ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಉಳಿದ ಹಲವು ವಿಷಯಗಳನ್ನು ಸಮಾನವಾಗಿ ಸ್ವೀಕರಿಸಬಹುದು. ಇಲ್ಲಿನ ವಸ್ತುನಿಷ್ಠ ವಿಷಯಗಳನ್ನು ಹೊರತುಪಡಿಸಿ ಉಳಿದದ್ದು ನನ್ನ ಅನುಭವಕ್ಕೆ ಬಂದವುಗಳು, ಹಲವನ್ನು ನಾವುಗಳು ಅನುಸರಿಸಿದವುಗಳು. ಇವೇ "ಇದ ಮಿತ್ತಂ" ಎಂಬಂತಹ ಶಾಸನಗಳೇನೂ‌ ಅಲ್ಲ. ಎಲ್ಲರಿಗೂ…