ಕಥೆ ಸಂಖ್ಯೆ ೧



[ಮೇಲಿನ ಕಥೆಯ ಹೆಸರಿಗೆ ಯಾವುದೇ ನಿಗೂಢ ಅರ್ಥಗಳಾಗಲಿ, ಧ್ವನ್ಯಾರ್ಥಗಳಾಗಲಿ ಇರುವುದಿಲ್ಲ. ಈ ಕಥೆಗೆ ಹೆಸರಿನ ಅವಶ್ಯಕತೆಯಿಲ್ಲ. ಆದರೆ ಮುಂದೆ ಈ ಕಥೆಯನ್ನ ಗುರುತಿಸಬೇಕಾದರೆ ಇರಲಿ ಎಂದು, ಇದಕ್ಕ ಕಥೆ ಸಂಖ್ಯೆ ೧ ಎಂದು ಹೆಸರಿಸಿರುತ್ತೇನೆ]

ಬಸುರೀನ?
(ನಾನು ಅವಳ ಹೊಟ್ಟೆಯ ಕಡೆಗೆ ನೋಡುತ್ತಿದ್ದೆ)
ಇರಲಾರದು, ಇಲ್ಲವ ಇರಬೊಹುದು,
ನನಗೇನಂತೆ?

ಅವಳ ಮುಖದಲ್ಲಿ, ನನ್ನ ಮುಖದಲ್ಲಿ, ಇಬ್ಬರ ಮುಖದಲ್ಲೂ ಯಾವ ಕ್ರಿಯೆಯೂ ಇಲ್ಲದ, ಪರಿಚಿತರ? ಅಪರಿಚಿತರ? ಎಂಬೋ ಪ್ರಶ್ನೆಯೂ ಇಲ್ಲದ,  ನೋಟಗಳ ಮುಖಾಮುಖಿಗೆ ನಾನು ಸಾಕ್ಷಿಯಾದೆ. ಅವಳು ಸಾಕ್ಷಿಯಾದಳ?  

ಸ್ವಲ್ಪ ಹೊತ್ತಾದಮೇಲೆ ಅವಳು ಹೊರಟು ಹೋದಳು.
..............................................................................................
..............................................................................................
..............................................................................................

ಹುಟ್ಟು, ಹಸಿವು, ಎರಡರ  ಕೇಂದ್ರವಾದ ಹೊಟ್ಟೆ ನನ್ನನ್ನ ಸುಮ್ಮನೆ ಆಕರ್ಷಿಸಿರಲಿಲ್ಲವೇನೋ!!

ನಾನೇಕೆ ಅವಳ ಹೊಟ್ಟೆಯೆಡೆಗೆ ಆಕರ್ಷಿತನಾದೆ?
ಸಂಬಂಧಗಳ ಬಲೆ ಹರಡುವಾಗ ಅದರೊಳಗಿದ್ದು, ಅದರ ಹರಡುವಿಕೆಗೆ ಕೇವಲ ಪ್ರೇಕ್ಷಕನಾಗಿ ಇರಬೇಕೆ?.
ಆ ಬಗ್ಗೆ ಚಿಂತಿಸಿದೆ, ತಲ್ಲಣನಾಗಿದ್ದೆ. ಯಾಕೆ ತಲ್ಲಣ ಎಂಬುದರ ಕಾರಣ ತಿಳಿಯಲಿಲ್ಲ.  ಕಾರಣ ತಿಳಿಯಲಿಲ್ಲವಲ್ಲ, ಅದೇ ಅತಿ ದೊಡ್ಡ ಸಮಸ್ಯೆಯಾಯಿತು.
ಏನೂ ಅಲ್ಲದ್ದಕ್ಕೆ ತಲ್ಲಣನಾಗಿದ್ದೀನ? ಏನೂ ಅಲ್ಲದ್ದಕ್ಕೆ ತಲ್ಲಣನಾಗೋದಾದರೂ ಹೇಗೆ? ಹಾಗಾದರೆ ಏನದು,  ಅವಳೆಡೆಗೆ, ಅವಳ ಹೊಟ್ಟೆಯೆಡೆಗೆ ನನ್ನನ್ನ, ನನ್ನ ದೃಷ್ಠಿಯನ್ನ ಕೊಂಡೊಯ್ದದ್ದು.

ಆ ತಲ್ಲಣಕ್ಕೆ ಹೆದರಿದ್ದೆನ?

ಹುಡುಕಿ ಹೊರಟೆ,

ಏನದು ನನಗೂ ಅವಳಿಗೂ ಇದ್ದ ಸಂಬಂಧ? ಅಥವಾ ಈಗ ಇರುವ ಸಂಬಂಧ?
ಯಾವ ಸಂಬಂಧಾನ ಅರೀಬೇಕು ಅಂತ ಹೋಗುತ್ತಿದ್ದೀನಿ ?  ಸಂಬಂಧಗಳನ್ನ ಅರಿಯೋಕ್ಕೆ ಆಗುತ್ತೆ ಅನ್ನೋದು, ಕೇವಲ ನಂಬಿಕೆ ಮಾತ್ರಾನ.?
ಅವಳೊಡನೆ ನನಗಿದ್ದದ್ದು, ನನ್ನ ಪ್ರಜ್ಞೆಯ ವಿಸ್ತಾರವನ್ನ ಮೀರಿ ಬೆಳದು ಬಿಟ್ಟಿದೆ. ಅದು ಅಷ್ಟು ಸಲೀಸಾಗಿರಲಿಲ್ಲ, ಅವಳ ಜೊತೆ ಎಷ್ಟೋ ದಿನಗಳ ಕಾಲ ಸಮ್ಮನೆ ನಡೆದದ್ದು ಆಗಿರಲಿಲ್ಲ.
ಅವಳು ಹೆಣ್ಣು, ನಾನು ಗಂಡು ಇಷ್ಟು ಮಾತ್ರ ಆಗಬೇಕು ಅಂತ ಅಂದುಕೊಂಡದ್ದು.  ನಾನೂ ಅವಳು ಒಂದೇ ಊರಿನಲ್ಲಿ ಸುಮಾರು ವರ್ಷಗಳಿದ್ದೆವು. ಆ ದಿನಗಳಲ್ಲಿ ನಡೆದ ಕೆಲವು ಘಟನೆಗಳು.

ಘಟನೆ ೧:: ಮೊದಲ ಬಾರಿ ನಾನು ಅವಳನ್ನ ನೋಡಿದೆ, ಮಾತಾನಾಡಿಸಿದೆ. ನಾನು ಅವಳ ಜಾತಿ ಯಾವುದು ಅಂತ ತಿಳಿಯಲಿಕ್ಕೆ ಪ್ರಯತ್ನಿಸಿದೆ.

ಘಟನೆ ೨:: ಒಂದು ದಿನ ಮಳೆಯಲ್ಲಿ ಅಳುತ್ತ ಬಂದಾಗ ಸಮಾಧಾನ ಪಡಿಸಿದೆ. ಒಂದು ಲೋಟ ಕಾಫಿ ಕೊಡಿಸಿದೆ. ಜೊತೆಯಲ್ಲಿ  ನಾನೂ ಕಾಫಿ ಕುಡಿದೆ.

ಘಟನೆ ೩::ನಾನು ಒಂದು ದಿನ ಕಾಫೀಗೆ ಕರೆದಾಗ, ಗಂಡುಡುಗರ ಜೊತೆ ಕಾಫೀಗೆ ಬರೋಲ್ಲ ಅಂದಳು.

ಘಟನೆ ೪::ಒಂದು ದಿನ  ನಡೆದು ಹೋಗುತ್ತಿರಬೇಕಾದರೆ, ಕೇಳಿದಳು.
 "ನಾನು ಒಬ್ಬನನ್ನ ಪ್ರೀತಿಸಿದೆ, ಅವನು ಪ್ರೀತಿಸಿದ. ಆಮೇಲೆ ನಾನು ಬೇಡ ಅಂದ.
ಅವನ್ಯಾಕೆ ಬಿಟ್ಟುಹೋದ?"
ನಂಗೆ ಗೊತ್ತಿಲ್ಲ
ಅಂದೆ.

ಘಟನೆ ೫:: "ನಾನು ಸತ್ತು ಹೋಗ್ತೀನ?" ಅಂತ ಕೇಳಿದ್ಲು.
"ಇಲ್ಲ"
ಅಂದೆ
ಅವತ್ತು ರಾತ್ರೀ ಪೂರ ನಾನು ಮಲಗ್ಲಿಲ್ಲ.

ಘಟನೆ ೬:: ಕಡೇ ದಿನ, ಮೊನ್ನೆ ಕಂಡಂತೆ, ಮುಖದಲ್ಲಿ ಯಾರೋ ಅಪರಿಚಿತರೋ, ಪರಿಚಿತರೋ ಎಂಬೋ ಭಾವ ಇಲ್ಲದೇನೆ ನನ್ನ ಜೊತೆಗೆ ಮಾತೂ ಆಡದೆ ಊರು ಬಿಟ್ಟು ಹೊರಟು ಹೋದಳು.

ನಿಜಕ್ಕಾದರೆ ಏನೂ ನಡೆದಿಲ್ಲವೆಂಬಂತೆ ಇದ್ದುಬಿಡಬೊಹುದಿತ್ತು, ನಿಜಕ್ಕೂ ಹೇಳುವುದಾದರೆ ಏನೂ ನಡೆದೂ ಇರಲಿಲ್ಲ. ಹಲವು ದಿನಗಳ ನಂತರ ನಾನು ಅವಳನ್ನ ಇಲ್ಲಿ ಕಂಡಿದ್ದೆ, ಅಷ್ಟೆ. ನಾನು ಅವಳನ್ನ ಪ್ರೀತಿಸಿರಲಿಲ್ಲ, ಅವಳನ್ನ ಮದುವೆಯಾಗಬೇಕು ಎಂದು ಅಂದುಕೊಂಡಿರಲಿಲ್ಲ, ಅವಳನ್ನ  ಬಯಸಿರಲಿಲ್ಲ. ಗೆಳತಿಯಾಗಿದ್ದಳ? ಅದೂ ಇನ್ನೂ ಪ್ರಶ್ನೆಯಾಗೆ ಉಳಿದಿದೆ. ಹೀಗೇ ಏನೂ ಅಲ್ಲದ ಸಂಬಂದಕ್ಕೆ ಏತಕ್ಕಾಗಿ ತಲ್ಲಣ, ಅಂತ ಅನ್ನಿಸೋದಕ್ಕೆ ಶುರು ಆದದ್ದಕ್ಕೆ ನಾನು ಭಯಪಟ್ಟಿದ್ದು.

ಹುಡುಕಿ ಹೊರಟೆ,
ಅವಳನ್ನ ಕಾಣಬೇಕು . ಯಾಕೆ ಅಂತ ಗೊತ್ತಿಲ್ಲ, ಆದರೆ ಅವಳನ್ನ ಕಾಣಬೇಕು, ಅದು ಮುಖ್ಯ ಅಷ್ಟೆ. ಅವಳಲ್ಲೆ  ನಾನ್ಯೇಕೆ ಹೀಗೆ ನಿನ್ನ ಬಸುರಿನ ಬಗ್ಗೆ ಖಿನ್ನನಾದೆ? ಕೇಳಬೇಕು ಅಂತ ಹೊರಟೆ,
ರಾತ್ರಿ ಬಸ್ಸು ಹತ್ತಿ ಬೆಳಗಾದಾಗ ಅವರ ಊರಿನಲ್ಲಿದ್ದೆ, ಒಂಟಿ ಮನೆ, ಸುತ್ತ ಕಾಡು ಬೆಟ್ಟ. ನೋಡಲು ನಿಜಕ್ಕೂ ಸುಂದರವಾದದ್ದು.
ಬಾಗಿಲು ತಟ್ಟಿದಾಗ ತಿಳಿಯಿತು ಮನೇಲಿ ಯಾರೂ ಇಲ್ಲ ಅಂತ.
ಸರಿ ಇನ್ನೇನು ಮಾಡೋದು, ಇಲ್ಲೆ ಯಾರನ್ನಾದರೂ ಮೊದಲು ಕೇಳಬೇಕು, ಅವಳೆಲ್ಲಿಗೆ ಹೋಗಿದಾಳೆ, ಯಾವಾಗ ಬರ್ತಾಳೆ, ಅಂತ ಅಂದು ಕೊಂಡರೆ ಅಲ್ಲೆಲ್ಲೂ ಮನೆಗಳೆ ಇರಲಿಲ್ಲ, ಕಡೆಗೆ ಯಾವುದಾದರು ಹತ್ತಿರದಲ್ಲಿ ಮನೆ ಕಾಣುತ್ತ ಅಂತ ಹೊರಟೆ. ಹತ್ತಿರದಲ್ಲಿ ಮನೆಯಿತ್ತು, ಹೋಗಿ ಕೇಳೋಣ ಅಂತ ಹೊರಟೆ. ಅವರದೂ ಇಂತದ್ದೆ ಒಂಟಿ ಮನೆ, ಹೋದೆ. ಬಾಗಿಲು ತೆರೆದಿತ್ತು. ವಿಚಾರಿಸಿದೆ.
"ನಮಸ್ಕಾರ, ನನ್ನ ಹೆಸರು ಅರವಿಂದ ಅಂತ, ಪ್ರವಳ್ಳಿಕ ಅವರ ಮನೇಲಿ ಯಾರೂ ಇಲ್ಲ, ಅವರನ್ನ ಕಾಣಬೇಕಿತ್ತು, ಅವರು ಯಾವಾಗ ಬರ್ತಾರೆ ಅಂತ ಹೇಳಿದ್ದರೆ, ಮತ್ತೆ ಬರಲಿಕ್ಕೆ ಸರಿಹೋಗುತ್ತೆ"
"ನಮಸ್ತೆ, ಮೊದಲು ಒಳಗೆ ಬನ್ನಿ, ಮತ್ತೆ ಮಾತಾಡುವ"
ಅಂತೇಳಿ ಒಳ ಕರೆದೊಯ್ದರು.
ಮನೆ ವಿಶಾಲವಾಗಿತ್ತು, ಹಲವು ಪುಸ್ತಕಗಳು, ಚಿತ್ರಗಳು, ಮತ್ತೆ ಹಲವು ಕಲಾತ್ಮಕ ವಸ್ತುಗಳಿದ್ದವು. ನನಗಂತೂ ಬಹಳ ಖುಶಿಯಾಗಿತ್ತು.
"ಬನ್ನಿ, ನಾವೂ ಪ್ರವಳ್ಳಿಕನ ಮನೆಯವರೂ ಹತ್ತಿರದ ಬಂಧುಗಳು, ಅವರು ಹೊರಗೆ ದೇವಸ್ಥಾನಕ್ಕೆ ಹೋಗಿದ್ದಾರೆ, ಬರುತ್ತಾರೆ. ನಾಳೆ ಅಥವ ನಾಡಿದ್ದು ಬರುತ್ತಾರೆ. ಕನಿಷ್ಠ ಫೋನ್ ಮಾಡೋಣ ಅಂದು ಕೊಂಡರೆ, ಅವರು ಹೋಗಿರೋ ಸ್ಥಳದಲ್ಲಿ ಸಿಗ್ನಲ್ ಇರೋಲ್ಲ. ಇರಲಿ, ಈಗ ಸದ್ಯ ಸುಧಾರಿಸಿಕೊಳ್ಳಿ. "
"ಬೇಡ, ಹಾಗಾದರೆ ನಾನು ನಾಡಿದ್ದು ಬರ್ತೇನೆ"
"ಎಲ್ಲಿರುತ್ತೀರಿ ನೀವು ಅಲ್ಲಿವರೆಗು"
"ಯಾವ್ದಾದರು ಹೋಟೇಲ್ ಮಾಡೋಣ ಅಂತ ಇದ್ದೀನಿ"
"ಅಯ್ಯೋ ಮಾರಾಯ್ರೆ, ಎಂತದ್ರೀ ನಿಮ್ಮದು? ಇಲ್ಲಿ ಮನೆ ಇಟ್ಟುಕೊಂಡು ಹೊರಗೆ ರೂಮು ಮಾಡುತ್ತೀನಿ ಅಂತೀರಲ್ಲ. ಯಾಕೆ?. ನೋಡಿ, ನೀವು ಪ್ರವಳಿಕ್ಕಳಿಗೆ ಬೇಕಾದವರು, ಹವ್ದೋ, ಹಾಗಾದರೆ ನಮಗೂ ಬೇಕಾದವರೇ ಮತ್ತೆ. ತಾವು ದಯವಿಟ್ಟು ಇಲ್ಲೇ ಇರಬೇಕು. "
ಅಂತ ತುಂಬಾ ಬಲವಂತ ಮಾಡಿದ್ರು. ಅವರ ಒತ್ತಾಯಕ್ಕೆ ಮಣಿದು ಅಲ್ಲೇ ಇರಲು ತೀರ್ಮಾನಿಸಿದೆ.
"ಸರಿ ತಮ್ಮ ಒತ್ತಾಯವನ್ನ ಬೇಡ ಅನ್ನಲಿಕ್ಕೆ ಆಗೋದಿಲ್ಲ, ಆದ್ದರಿಂದ ಇರ್ತೇನೆ. ಆದರೆ ತಾವು ಏನೂ ತೊಂದರೆ ತೆಗೆದುಕೊಳ್ಳಬಾರದು"
"ಕಂಡೀತವಾಗಿ,...
ನನ್ನ ಹೆಸರು ಗೌತಮ್ ಅಂತ, ಈ ತೋಟ ಎಲ್ಲವೂ ನಮ್ಮದೆ. ಈಗ ಇಲ್ಲಿ ಯಾರೂ ಇಲ್ಲ, ಅಪ್ಪ ಅಮ್ಮ ಅಣ್ಣನ ಜೊತೆ US  ಅಲ್ಲಿ ಇದ್ದಾರೆ. ನಾನು Software Proffesional ನಂದೇ ಸ್ವಂತ ಕಂಪೆನಿ ಕೂಡಾ ಇದೆ, ನಾನು IIM ಅಲ್ಲಿ MBA ಸಹ ಮಾಡೀದೀನಿ. ಅಲ್ಲಿ ಆ ಬಿಸಿನೆಸ್ಸು ಎಲ್ಲಾ ಸಾಕು ಎಂದಾಗ ಇಲ್ಲಿಗೆ ಬರ್ತೀನಿ.  ನಂಗೆ ಸಾಹಿತ್ಯ ಇಷ್ಟ, ಬರೀತೀನೀ ಕೂಡ"
"ತುಂಬಾ ಚೆನ್ನಾಗಿದೆ, ನನಗೂ ಸಾಹಿತ್ಯ ಇಷ್ಟ."
"Good"
ಹೀಗೇ ಮಾತಾಡುತ್ತ, ಮನೆ ತೋಟ ಎಲ್ಲಾ ತೋರಿಸ್ತಾ, ನಡೀತಾ ಇದ್ದೆವು.
"ಅರವಿಂದರೆ, ಮನುಷ್ಯಂಗೆ ಸಾಹಿತ್ಯ ಕಲೆ ಎಲ್ಲ ಯಾಕೆ ಬೇಕು? "
"ಕಂಡೀತವಾಗಿ ನನಗೆ ತಿಳಿದಿಲ್ಲ, ಒಂಥರಾ ನಂದು ಹುಡುಕಾಟ, ನಂಗೆ ಯಾವ್ದೂ ಸಿಕ್ಕಿದ ಹಾಗೆ ಕಾಣೋಲ್ಲ"
"ಅದೂ ಸರಿ ಬಿಡಿ"
"ಆದರೆ ನೋಡಿ, ನನಗೆ ಅನ್ನಿಸೋದು, ನಮ್ಮ ಮುಂದೆ ನಡೆಯೋದನ್ನೇ ಮತ್ತೆ ಕಥೆ, ಕಾದಂಬರಿ ಮಾಡಿ ನಮ್ಮೆದುರಿಗೆ ಇಡುತ್ತಾರೆ, ಅಥವ ಪುರಾಣದ ಪಾತ್ರಗಳು, ಹೀಗೆ ನಮ್ಮನ್ನೇ ನಾವು ಮತ್ತೆ ಯಾಕೆ ನೋಡಿಕೋ ಬೇಕು ಅಂತ....? ಅಲ್ಲವ"
"ಹೌದು"
ಅವರು ಮಾತಾಡುತ್ತಿದ್ದರು ನಾನು ಕೇಳುತ್ತಿದ್ದೆ ಅನ್ನುವುದು ಬಿಟ್ಟರೆ ಮತ್ತೇನು ನನಗೆ ಅರ್ಥವಾಗುತ್ತಿರಲ್ಲ. ಒಂದು ಚಿಕ್ಕ ಆಪ್ತ ಸಂಬಂಧದ ಎಳೆಯನ್ನ ಹುಡುಕಿ ಇಲ್ಲಿವರೆಗೂ ಬಂದದ್ದು. ನನ್ನ ಪ್ರಜ್ಞೆಯನ್ನ ಮೀರಿ ಬೆಳೆದಿರಬೊಹುದಾದ ಇದರ ಸೂಕ್ಷ್ಮತೆ ನನಗೆ ಅತಿ ದೊಡ್ಡ ಬೆರಗು. ಕಥೆ ಯಾತಕ್ಕೆ ಎಂಬೋದು? ಕವನ ಯಾತಕ್ಕೆ ಎಂಬೋದು? ನಂಗೆ ಬದುಕು ಯಾತಕ್ಕೆ ಎಂಬೋ ಅಷ್ಟೆ ಸಹಜವಾದ ಪ್ರಶ್ನೆ. ಉತ್ತರ ನನಗಂತೂ ಸಾಮಾನ್ಯವಾಗಿರಲಿಲ್ಲ. ಕಂಡುಕೊಳ್ಳುವು ಕ್ರಿಯೆಯಲ್ಲಿ ನಾನೇ ನಿರತನಾಗಿರುವಾಗ ಇನ್ನೊಬ್ಬರ ಪ್ರಶ್ನೆ ನನ್ನಲ್ಲಿ ಅಷ್ಟು ಸುಲುಭವಾಗಿ ಇಳಿಯುತ್ತಿರಲಿಲ್ಲ.
"ಮತ್ತೆ,ಅರವಿಂದರೆ, ಮದುವೆ ಯಾಗಿದೆಯ  ?"
"ಇನ್ನೂ ಇಲ್ಲ ಸ್ವಾಮಿ, ಹುಡುಗಿ ಸಿಕ್ಕಿಲ್ಲ. ಹುಡುಕ್ಕುತ್ತಾ ಇದ್ದೀನಿ, ತಮ್ಮದು"
"ನಮ್ಮದು ಮದುವೆಯಾಗಿಲ್ಲ, ಆದರೆ ನನಗೆ ಹೆಂಡತಿ ಇದ್ದಾಳೆ, ರಾತ್ರಿ ಬರ್ತಾಳೆ. ತೋರಿಸ್ತೀನಿ. ಮಾತಾಡುವಿರಂತೆ. ನನಗೆ ಮದುವೆ ಎನ್ನೋದರಲ್ಲಿ ನಂಬಿಕೆ ಇಲ್ಲ. ಸಂಬಂಧ ಅನ್ನೋದರಲ್ಲಿ ನಂಬಿಕೆ ಇಲ್ಲ, ಅದಕ್ಕೆ ನಾನು ಅವಳನ್ನ ಮೆಚ್ಚಿದ್ದೀನಿ ಅವಳು ನನ್ನನ್ನ ಮೆಚ್ಚಿದ್ದಾಳೆ ಒಟ್ಟಿಗೆ ಇರುತ್ತೀವಿ. ಒಟ್ಟಿಗೆ ಮಲಗುತ್ತೀವಿ"
"ಯಾಕೆ ಸಂಬಂಧದಲ್ಲಿ ನಂಬಿಕೆ ಇಲ್ಲ?"
"ಗೊತ್ತಿಲ್ಲ"
"ಹೌದು ಅರವಿಂದರೆ, ನೀವು ಹುಡುಕುತ್ತಿದ್ದೀನಿ ಅಂದಿರಲ್ಲ, ಯಾರನ್ನ ಅಂತ ಹುಡುಕುತ್ತೀರ?  ಹಾಗು ಹೇಗೆ ಗುರುತಿಸುತ್ತೀರ, ಇಷ್ಟಕ್ಕೂ ಒಂದು ಸಂಬಂಧಕ್ಕೇಕೆ ಹುಡುಕಾಟ?"
"ಒಬ್ಬಳನ್ನ ಹುಡುಕುತ್ತಿದ್ದೀನಿ, ಯಾವ ಅಪೇಕ್ಷೆಯೂ ಇಲ್ಲದೆ ನಾನೂ ಅವಳೂ ಸೇರಬಲ್ಲವಳಾಗುವಂತವಳು, "
"Bull Shit, ಗಂಡು ಹೆಣ್ಣು ಸೇರೋದೆ ಲೈಂಗಿಕ ಅಪೇಕ್ಷೆಯಿಂದ, ಅಥವಾ ಇನ್ನೂ ಹೀನರಿಗೆ, ಹಣ ಅಂತಸ್ಥಿನ ವ್ಯವಹಾರ ಅಷ್ಟೆ. ಮದುವೆ ಅನ್ನೋದು ಕಾನೂನು ಬದ್ದ ಲೈಂಗಿಕ ವ್ಯಾಪಾರ ಅಷ್ಟೆ"
"ನನಗಂತೂ ಹಾಗೆ ಅನ್ನಿಸೋಲ್ಲ,  ನೀವು ಹೇಳುವ ಪ್ರಕಾರ ಹೆಚ್ಚಿರಬೊಹುದು, ಆದರೆ ಎಲ್ಲಾ ಆಕರ್ಷಣೆಗಳನ್ನ ದಿಕ್ಕರಿಸಿ ಸೆಳೆಯಲ್ಪಡುವುದೂ ಉಂಟು.  ಬೆತ್ತಲೆಯಾಗಿ ಇಬ್ಬರೂ ನಿಂತರೂ ದೇಹವನ್ನ ಮೀರಿ ಮಾತನಾಡಬಲ್ಲೆವಾದರೆ ನಾನು, ಅವಳು ಸೇರಿದಂತೆಯೇ ಸರಿ, ಹುಡುಕಾಟ ಅಂದರೆ ಅದೇ ನನಗೆ"
"ಹಾಳು, ಬಿಡಿ ನಿಮ್ಮದು ನಿಮಗೆ, ರಾತ್ರಿ ನನ್ನವಳು ಬರುತ್ತಾಳೆ ತೋರಿಸ್ತೀನಿ, ಮಾತನಾಡಿ"
"ಕಂಡಿತ"
ಅವರು ಹೇಳಿದ್ದರಲ್ಲು ಸುಳ್ಳಿರಲಿಲ್ಲ, ಆದರೆ ನಾನು ಹೇಳಿದ್ದು ಸುಳ್ಳಲ್ಲ ಎಂಬೋ ನಂಬಿಕೆ ನನ್ನಲ್ಲಿತ್ತು. ದೈಹಿಕ ವಾಂಛೆಯನ್ನ ಮೀರಿ ಅವಳನ್ನ ಕಾಣುವುದು, ಹುಡುಕುವುದು, ಪಡೆಯುವುದು, ಇದೇ ಸದ್ಯ ಜೀವಿತೋದ್ದೇಶವೇಕಾಗಬಾರದು? ಈಗ ನಾನು ಪ್ರವಳ್ಳಿಕಳನ್ನ ಕಾಣಲು ಬಂದದ್ದು, ಕೇವಲ ನಾನು ಅವಳ ಹೊಟ್ಟೆಯನ್ನ ಯಾಕೆ ಕಾಣಲು ತೊಡಗಿದೆ ಎಂಬೋದು ಮಾತ್ರವಾಗಿರಲಿಲ್ಲ, ನನ್ನ ಹಲವು ಪ್ರಶ್ನೆಗಳಿಗೆ ಅವಳು ಉತ್ತರವಾಗ ಬಲ್ಲವಳಾಗಿದ್ದಳು. ನನ್ನ ದ್ವಂದ್ವಗಳಿಗೆ ಕಂಡಿತವಾಗಿಯು ಉತ್ತರವಾಗ ಬಲ್ಲವಳಾಗಿದ್ದಳು.
ಆಲೋಚಿಸುತ್ತ ಮಲಗಿಬಿಟ್ಟೆ, ಗೌತಮ್ ಹೇಳಿದ್ದು ನೆನಪೇ ಇರಲಿಲ್ಲ.

ಬೆಳಗ್ಗೆ ಬಿಸಿ ಬಿಸಿ ಕಾಫಿಯೊಂದಿಗೆ ಬಂದ ಗೌತಮ್ ರು
"ಏನ್ರೀ ಅರವಿಂದರೆ ಹೇಗಿದೆ ನನ್ನ ಆಯ್ಕೆ, ಹೇಗಿದ್ದಾಳೆ ನಮ್ಮ ಹುಡುಗಿ, ನೋಡಿ ನೆನ್ನೆ ಎಂತಾ ತಪ್ಪಾಗಿ ಹೋಗಿತ್ತು, ನಾನು ನಿಮಗೆ ಅವಳ ಹೆಸರನ್ನೇ ಹೇಳಿರಲಿಲ್ಲ, ನೀವು ಅವಳನ್ನೇ ನಿಮ್ಮ ಹೆಸರೇನು ಅಂತ ಕೇಳಿ ಬಿಡೋದೆ, ಅವ್ಳು ನೀವು ಹೋದ ಮೇಲೆ ಸುಮ್ಮನೆ ನನ್ನ ಬೈಯ್ಯೋದಕ್ಕೆ ಆರಂಬಿಸಿದಳು, ನನ್ನೆಸರನ್ನೂ ಹೇಳಿಲ್ಲವೆ ಅಂತ, ಹೋಗಲಿ ಬಿಡಿ ಈಗ ಏಳಿ."
ನಾನು ಒಂದು ರೀತಿಯ ಅಯೋಮಯಕ್ಕೆ ತಲುಪಿದೆ, ನಾನ್ಯಾವಾಗ ಅವರನ್ನ ಬೇಟಿಯಾದೆ,
"ಯಾರನ್ನ? ಏನು ಹೆಸರು?"
"ಅಯ್ಯೋ ನಿಮ್ಮ ಮರುವಿಗೆ, ಅದೆ ನಮ್ಮವಳು, ಪ್ರತೀಕ್ಷ,
ನೋಡಿದ್ರ, ಅವಳು ರಾತ್ರಿ ಅದೇ ಪ್ರಶ್ನೆ ಕೇಳಿದ್ಲು? ಯಾಕೆ ನಾವು ಕಥೆ ಎಂಬೋ ಕಲ್ಪನೆಯ ಪ್ರಪಂಚಕ್ಕೆ ಹೋಗಬೇಕು ಅಂತ ಭಾವಿಸ್ತೀವಿ. ನಮ್ಮ ಸುತ್ತ ಕಾಣೋ ವಾಸ್ತವ ಪ್ರಪಂಚದಿಂದ ಹೊರಗೋಗಿ, ಅದ್ಯಾಕೆ ಕಲ್ಪಿಸಿಕೊಳ್ತೀವಿ ಅಂತ,"
ಯಾವ ಕಲ್ಪನೆ, ಯಾವ ವಾಸ್ತವ, ಯಾವ ಕಥೆ, ಈ ಆಸಾಮಿ ಏನನ್ನ ಮಾತಾಡ್ತಾ ಇದ್ದಾನೆ, ಒಂದೂ ದೇವರಾಣೇಗೂ ಅರ್ಥ ಆಗಲಿಲ್ಲ. ಯಾಕೆ ಅಂದರೆ ರಾತ್ರಿ ಮಲಗಿದವನು ಎದ್ದದ್ದು ಈಗ ಮಾತ್ರ, ಇಂತ ಹೊತ್ತಲ್ಲಿ, ಅದೇನು ಹೇಳ್ತಾ ಇದ್ದಾನೆ ಅಂತ ನಿಜಕ್ಕೂ ಅಯೋಮಯಕ್ಕೆ ಬಿದ್ದೆ.
ಯಾರೋ ಕರೆದರು ಅಂತ ಗೌತಮ ಹೊರಗೆ ಹೋದ.
ಸ್ಪಷ್ಟವಾಗ ತೊಡಗಿತು. ಎಲ್ಲೋ ಏನೋ ತಪ್ಪಿದೆ. ಭ್ರಮೆ, ಕಲ್ಪನೆ, ಹಾಗು ವಾಸ್ತವ ಇವುಗಳ ನಡುವಿನ ಸೂಕ್ಷ್ಮ ತೆರೆಯು ವಾಸ್ತವವೋ, ಕಲ್ಪನೆಯೋ, ಭ್ರಮೆಯೋ ಎಂಬ ಗೊಂದಲಕ್ಕೆ ಬಿದ್ದೆ. ಕೆಲವು ನಿಗೂಢವಾಗಿಯೆ ಇದ್ದು ಬಿಡುತ್ತದೋ ಏನೋ ಅನ್ನಿಸುವಷ್ಟು. ನನಗೆ ಪ್ರವಳ್ಳಿಕ ಎಂದು ಬರುತ್ತಾಳೋ ಎಂದು ಕಾಯುವುದರಲ್ಲಿ, ಇಲ್ಲಿ ನಡೆದದ್ದಕ್ಕೆ ಹೆಚ್ಚು ಗಮನ ಕೊಡಲಿಲ್ಲ, ನಾಳೆ ಬರುತ್ತಾಳಲ್ಲ ಆಗ ಇಲ್ಲಿಂದ ಹೊರಟು ಬಿಟ್ಟರೆ ಆಯಿತು ಎಂದು ಸುಮ್ಮನಾದದ್ದು.
ಸಂಜೆಯಾಯಿತು.
ರಾತ್ರಿ ತುಂಬಾ ಹೊತ್ತಿನ ನಂತರ ಗೌತಮ ಮನೆಗೆ ಬಂದ. ಹೆಚ್ಚು ಹೊತ್ತಾದದ್ದರಿಂದ, ನನಗೆ ನಮಸ್ಕರಿಸಿ ಸೀದ ಆತನ ರೂಮಿಗೆ ಹೊರಟು ಬಿಟ್ಟ.
"ಅರವಿಂದರೆ, ನಮ್ಮವಳು ಕರೆಯುತ್ತಿದ್ದಾಳೆ,ನಾಳೆ ಬೆಳಗ್ಗೆ ಸಿಗುತ್ತೀನಿ."
ಮೊದಲ ಬಾರಿಗೆ ನನಗೆ ಕುತೂಹಲ ತಡೆಯಲಾಗಲಿಲ್ಲ. ಸತ್ಯವನ್ನ ಕಾಣಬೇಕು ಅಂತ ಹೋಗಬೇಕಾಗಿ ಹೋದರೂ, ಅವರ ವೈಯುಕ್ತಿಕ ಕೋಣೆಯ ಕಿಟಕಿಗಳನ್ನ ತೆರೆದು ನೋಡುವುದು ಎಷ್ಟು ಸರಿ ಎಂದು ಅನ್ನಿಸದೆ ಇರಲಿಲ್ಲ. ಅಲ್ಲಿ ಹೆಣ್ಣು ಇದ್ದಿದ್ದೇ ಆದರೆ, ಗಂಡು ಹೆಣ್ಣಿನ ಮಿಲನದ ಸಮಯದಲ್ಲಿ ನನ್ನ ಉಪಸ್ಥಿತಿ ಎಷ್ಟು ಅಸಮಂಜಸ ಕ್ರಿಯೆ. ಆದರೆ ಬೆಳಗ್ಗೆ ಆತ ಹೇಳಿದ್ದುದರಲ್ಲಿ ಏನೋ ತಪ್ಪಿದೆ ಅಂತ ಅನ್ನಿಸಿದ್ದಂತು ಸತ್ಯವಲ್ಲವೆ,...... ಹೀಗೆ ಸ್ವಲ್ಪ ಹೊತ್ತು ಚಿಂತಿಸಿ ನೋಡೇ ಬಿಡುವ, ಆಕೆ ಇದ್ದರೆ........ ಇಲ್ಲದೇ ಹೋದರೆ...... ಸತ್ಯ....... ಸಂಸ್ಕಾರ......
ಕಡೆಗೆ,
ಆತನ ರೂಮಿಗೋಗಿ ಕಿಟಕಿ ತೆರೆದು ನೋಡುತ್ತೇನೆ, ಆಶ್ಚರ್ಯ, ಆತ ಒಬ್ಬನೇ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದಾನೆ. ಆಕೆ ಇರಲಿಲ್ಲ.
ಅಂದರೆ?
ಅಂದರೆ?
.............................?


"ನೂತನ, ನೂತನ....."
ಶಬ್ದ ಕೇಳಿ ಗಾಬರಿಗೊಂಡು ಎದ್ದೆ,
ಗೌತಮ್ ಎಲ್ಲಾ ಕಡೆ ನೂತನ ನೂತನ ಅಂತ ಕೂಗುತ್ತಿದ್ದ, ಕಡೆಗೆ ನನ್ನ ರೂಮಿಗೆ ಬಂದವನೆ,
"ಹೇ ಏನೋ ಮಾಡಿದೆ ನನ್ನ ಮಗನ್ನ?"
"ನಾನಾ...? ಮಗಾನಾ....? "
"ಹೌದು, ರಾತ್ರಿ ನೀನು ನನ್ನ ರೂಮಿಗೆ ಬಂದದ್ದು ನನಗೆ ಗೊತ್ತಿದೆ. ರಾತ್ರಿ ನಾನು ನನ್ನ ಮಗನ್ನ ಕೆಳ್ಗೆ ಮಲಗಿಸಿದ್ದೆ, ಏನೋ ಮಾಡಿದೆ ನನ್ನ ಮಗನ್ನ? ಹೇಳೋ, ರಾತ್ರಿ ಮಲಗಿರ್ಬೇಕಾದ್ರೆ ಬಂದಿದ್ದೆಯಲ್ಲ, ಹೇಸಿಗೆ ಮನುಷ್ಯ ನೀನೂ,
ನೊಡು, ಹೇಳು, ಎಲ್ಲಿ ನನ್ನ ಮಗ? ಇಲ್ಲವೋ ನೋಡು,
ಏನು ಮಾಡಿದ್ಯೋ ನನ್ನ ಮಗಂಗೆ? ಹೇಳೋ...
ನೂತನ ನೂತನ....?"
ಚಿತ್ರ ವಿಚಿತ್ರದ ಈ ಪ್ರಪಂಚದಲ್ಲಿ ಗಾಬರಿಯೆದ್ದು ಹೋದೆ, ಮೊದಲು ಇದನ್ನು ತಪ್ಪಿಸಿಕೊಂಡರೆ ಸಾಕು ಅಂತ ಅನ್ನಿಸ್ತು.
"ಎಲ್ಲೋ ನನ್ನ ಮಗ?"
ಅಂತ ಅಟ್ಟಿಸಿಕೊಂಡು ಬರಲಿಕ್ಕೆ ಆರಂಬಿಸಿದ.
ಪ್ರವಳ್ಳಿಕ ಮರೆತಿದ್ದಳು. ಈಗ ಸದ್ಯ ತಪ್ಪಿಸಿಕೊಂಡರೆ ಸಾಕಿತ್ತು. ಗೌತಮನ ಕೈಯಲ್ಲಿ ಮಚ್ಚು ಬೇರೇ ಇತ್ತು, ಸಾವು ತೀರ ಸನಿಹದಲ್ಲಿ, ಆ ಕ್ಷಣದಲ್ಲಿ, ನನ್ನೆದುರಿಗೆ ಪ್ರತ್ಯಕ್ಷವಾಗಿತ್ತು. ಎಲ್ಲಿ ಹೋಗುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬೋ ಯಾವುದರ ಪರಿವೆಯೂ ಇಲ್ಲದೆ ಓಟ ಕಿತ್ತೆ. ಮೊದಲ ಬಾರಿಗೆ, ನಿಜಕ್ಕೂ ತುಂಬಾ ಭಯದಲ್ಲಿದ್ದೆ. ಆ ಭಯವೇ ನನ್ನ ಆ ಓಟಕ್ಕೆ ಹತ್ತಿಸಿತ್ತು. ನಾನು ಓಡಿದಷ್ಟು ಅವನು ಹಿಂದೆ ಹಿಂದೆ ಬರುತ್ತಲೇ ಇದ್ದ. ಓಡಿದೆ.
ಹೊಟ್ಟೆಯನ್ನ ಕಂಡು ಹುಟ್ಟು ಹಾಗು ಹಸಿವನ್ನ ಹುಡುಕಿ ಬಂದವನಿಗೆ ಸಾವು ಇಷ್ಟು ಸನಿಹದಲ್ಲಿ ಇರುತ್ತೆ ಅಂತ ಗೊತ್ತಿರಲಿಲ್ಲ. ಆತನಿಗೆ ಹೇಳುವುದಾದರೂ ಹೇಗೆ? ಕೇಳುವ ತಾಳ್ಮೆ ಕಂಡೀತವಾಗಿಯೂ ಆತನಿಗಿಲ್ಲ. ನನ್ನ ಜೀವನದಲ್ಲಿ ಎಂದೂ ಓಡಿರಲಿಲ್ಲ, ಅಷ್ಟು ಜೋರಾಗಿ ಓಡುತ್ತಿದ್ದೆ. ಇಲ್ಲದ ಮಗನನ್ನ ಹುಡುಕುತ್ತಿರುವವನ ಕೈಗೆ ನಾನು ಸಿಕ್ಕು ಸಾಯುವುದು ನನಗೆ ಬೇಕಿರಲಿಲ್ಲ. ಸಾವಿಗೂ ಘನತೆಯಿದೆಯೆಂದು ನಂಬಿದವನು ನಾನು. ಬದುಕು ನನಗೆ ಅದ್ಭುತ, ಬದುಕಬೇಕು ಅದೊಂದೇ ನನ್ನಲ್ಲಿ ಇದ್ದದ್ದು, ಓಡುತ್ತಿದ್ದದು ಅದಕ್ಕಾಗಿಯೆ.
ಕಡೆಗೆ ಓಡಲಿಕ್ಕೆ ಆಗಲಿಲ್ಲ. ಓಡುತ್ತಾ ಇದ್ದರೆ ಓಡುತ್ತಲೇ ಇರಬೇಕು ಎಂದನಿಸಿತು, ದೈರ್ಯ ಮಾಡಿದೆ, ಎರಡೆ ಆಯ್ಕೆ, ಒಂದೋ ಸಾವು, ಇಲ್ಲವ ಬದುಕು, ನಿಚ್ಚಳವಾಗಿ ನನ್ನೆದುರಿಗೆ ನಿಂತಿವೆ. ಎಂದಿಗೂ ನಾನು ಈ ಆಯ್ಕೆಯನ್ನ ಬಯಸಿದವನಲ್ಲ. ಆದರೆ ಬದುಕು ನನ್ನನ್ನ ಕೇಳಿ ಆಯ್ಕೆ ನೀಡೋದಿಲ್ಲ ಎಂಬೋದು ಮೊದಲಬಾರಿಗೆ ಕಂಡಿತು.
ಅವನು ಬಂದದ್ದೇ ತೆಗೆದು ನನಗೆ ಬಾರಿಸಿದ, ಬಿದ್ದೆ, ಮತ್ತೆ ಎದ್ದೆ, ಕೈಯಲ್ಲಿ ನನಗೂ ಏನೋ ಸಿಕ್ಕಿತು,
"ಎಲ್ಲೋ ನನ್ನ ಮಗ? ಪಾಪಿ, ಕೊಡೋ ನನ್ನ ಮಗನ್ನ"
"ನಿನ್ನ ಮಗ ಇಲ್ಲ ಕಣೋ"
"ಬೇವರ್ಸಿ, ಎಲ್ಲಿ ನನ್ನ ಮಗ"
ಆಗ ನಿಶ್ಚಯಿಸಿದೆ, ನನ್ನಲ್ಲಿದ್ದ ಬಲವನ್ನೆಲ್ಲ ಜೋಡಿಸಿ ಸಿಕ್ಕಿದ ಕಟ್ಟಿಗೆ ತೆಗೆದುಕೊಂಡು ಒಂದು ಏಟು ಬಾರಿಸಿದೆ.
ಕಾಡಿನ ಮದ್ಯಕ್ಕೆ ನಾವು ಬಂದಿದ್ದೆವು.
ಇಳಿಜಾರಿತ್ತು,
ಅದೇ ಸಮಯ,
ಹೊಡೆದೆ, ಉರುಳಿಕೊಂಡು ಬಿದ್ದುಬಿಟ್ಟ.
ಭಯವಾಯಿತು, ಪಾಪ ಅನ್ನಿಸಿತು.
ಕೆಳಗೆ ನೋಡಿದೆ, ಬದುಕಿದ್ದ. ಎದ್ದು ನಿಂತಿದ್ದ.
ಬದುಕಿದೆನ ಬಡ ಜೀವವೆ ಎಂದೇಳಿ, ಓಡಿ ಬಿಟ್ಟೆ.
ಹೇಗೋ ಅಲ್ಲಿಂದ ತಪ್ಪಿಸಿಕೊಂಡು, ಇನ್ನು ಈ ಸಹವಾಸವೇ ಬೇಡ ಅನ್ನಿಸಿ ಹೊರಡಲು ಸಿದ್ದನಾಗಿ, ಮರಳಿ ವಾಪಸ್ಸು ಹೋಗುವ ಬಸ್ಸು ಹತ್ತಿದ್ದೆ. ಪ್ರವಳ್ಳಿಕಳ ನೆನಪೂ ಸಹ ಮಾಸಿ ಹೋಗುತ್ತಿತ್ತು. ಸಾವಿಗೆ ಬಹಳ ಶಕ್ತಿಯಿದೆ. ಬಸ್ಸಿನಲ್ಲಿ ಕೂತವನೆ ಟಿಕೇಟಿನ ಹಿಂದೆ ಹೀಗೆ ಬರೆದೆ
"ರಾತ್ರಿ ಕನಸಲ್ಲಿ ಸುಂದ್ರಿ ಜೊತೆ
ಸಂಭೋಗ ಮಾಡಿ
ಹಗಲಲ್ಲಿ ಮಗನನ್ನ ಹುಡುಕಿದ
ಮನುಷ್ಯ ಅಂತ"

ಕತೆ ಮುಗಿಯುವುದೇ ಇಲ್ಲವೇನೋ...
ಅಷ್ಟೊತ್ತಿಗೆ ಫೋನ್ ರಿಂಗಾಯಿತು.
Kappe calling, Kappe calling ಅಂತಿತ್ತು. ನಾನು ಕರೆ ಸ್ವೀಕರಿಸುವಷ್ಟರಲ್ಲಿ ಕಟ್ ಆಯಿತು.
ಪಕ್ಕದ ಸೀಟಿನಲ್ಲಿ ಕೂತಿದ್ದ ಸಹ ಪ್ರಯಣಿಕನಿಗೆ ಆ kappe calling ಯಾಕೋ ಕುತುಹಲವಾಯಿತೋ ಏನೋ,
"ಸಾರ್ ಅದೇನ್ ಸಾರ್ kappe calling ಅಂತ ಬರ್ತಿದೆ"
"ಹ.... ಅದು ನನ್ನ ಗೆಳತಿಯ ಅಡ್ಡಹೆಸರು,"
"ಅವಳ ನಿಜ ಹೆಸರೇನು ಸಾರ್"
"ಇಂದ್ರಾಣಿ ಅಂತ"
"ಅದೇನ್ ಸರ್ ಅಷ್ಟು ಚಂದ ಹೆಸರಿದೆ ಅದು ಬಿಟ್ಟು ಪಾಪ ಕಪ್ಪೆ ಅಂತ ಕರೀತೀರಲ್ಲ ಸಾರ್,
ಸಾರ್ ನಿಮಗೆ ಗೊತ್ತ, ಇಂದ್ರಾಣಿ ಅಂದ್ರೆ ಇಂದ್ರನ ಹೆಂಡತಿ. ಇಡೀ ಜಗತ್ತನ್ನ ನಿಯಂತ್ರಿಸೋ ಇಂದ್ರನ ಹೆಂಡತಿ"
"ಹ ಹ ಗೊತ್ತು. ಆದರೆ ನಿಮಗೆ ಗೊತ್ತೋ ಇಲ್ಲವೋ, ಇಂದ್ರ ಅನ್ನೋದು ವ್ಯಕ್ತಿಯಲ್ಲ ಅದು ಪದವಿ, ಇಂದ್ರನ ಪದವಿಗಿ ಯಾರೇ ಬಂದರೂ ಇಂದ್ರಾಣಿ, ಅದೇ ಶಚೀದೇವಿ ಅವರಿಗೆಲ್ಲರಿಗೂ ಹೆಂಡತಿಯಾಗಿರುತ್ತಾಳೆ"
"ಹೌದು, ಕಪ್ಪೆ ಅಂತ ಯಾಕೆ ಸಾರ್"
"ಅದಾ.... ಹೇಳ್ತೀನಿ ಕೇಳಿ, ಅವಳಿಗೆ ಚಿಕ್ಕ ವಯಸಲ್ಲಿ ಕಪ್ಪೆಗಳು ಅಂದರೆ ಇಷ್ಟವಂತೆ, ಈಗಲು ಕಪ್ಪೆಗಳನ್ನ ಅವಳು ಇಷ್ಟ ಪಡ್ತಾಳೆ. ಆದ್ರೆ ಆಗ ಅವ್ಳು ಒಂದು ಕಪ್ಪ ಸಾಕಿದ್ಲಂತೆ, ಆ ಕಪ್ಪೆ ಅವಳು ಹೇಳಿದ ರೀತಿ ಕೇಳುತ್ತಿತ್ತಂತೆ , ಆದರೆ ಒಂದು ದಿನ ಒಂದು ಕೇರೆ ಹಾವು ಅವಳು ಸಾಕಿದ ಕಪ್ಪೆಯನ್ನ ಹಿಡಿದು ಬಿಟ್ಟಿತಂತೆ. ಆ ಹಾವು ಆ ಕಪ್ಪಯನ್ನ ತಿನ್ನೋದನ್ನ ನೋಡಿ ಅತ್ತು ಅತ್ತು ಹಲವು ದಿನ ಊಟ ಕೂಡ ಮಾಡಿರಲಿಲ್ಲವಂತೆ , ನಿಮಗೆ ಗೊತ್ತ ಅವತ್ತಿನಿಂದ ಇವಳು ಕೇರೆ ಹಾವು ಕಂಡರೆ ಕಲ್ಲು ಹೊಡೆದು ಸಾಯಿಸ್ತಾಳೆ, ಮತ್ತೆ ಅದಾದಮೇಲೆ ಕಪ್ಪೆಗಳನ್ನ ಸಾಕಿಲ್ಲ. ಆದರೂ, ಈಗಲೂ ಅವಳಿಗೆ ಕಪ್ಪೆಗಳನ್ನ ಕಂಡರೆ ಬಹಳ ಪ್ರೀತಿ, ಎಷ್ಟೋ ಬಾರಿ ಕಪ್ಪೆಗಳೊಡನೆ ಮಾತಾಡುತ್ತಿರುತ್ತಾಳೆ ಕೂಡ. ಅವಳ ಆ ಕಪ್ಪೆ ಪ್ರೀತಿಗೆ ಅವಳಿಗೆ ಕಪ್ಪೆ ಅಂತ ಕರೆಯೋದು"
"ಚೆನ್ನಾಗಿದೆ ಸಾರ್"


1 ಕಾಮೆಂಟ್‌: