ಭಾರತ ೨೦೧೧

[ಈ ಕವನ ಶ್ರೀ ಕೆ ವಿ ತಿರುಮಲೇಶ್ ರವರ ಅರೇಬಿಯ ೨೦೧೧(http://www.kendasampige.com/article.php?id=4200) ಕವನಕ್ಕೆ ಪ್ರತಿಕ್ರಿಯೆಯಾಗಿ ಬರೆದದ್ದು. ಅವರು ಅಲ್ಲಿನ ಪರಿಸ್ತಿತಿಯಬಗ್ಗೆ ಬರೆದರೆ ನಾನು ಅದಕ್ಕೆ ಪ್ರತಿ ಕ್ರಿಯೆಯಾಗಿ ಭಾರತದ ಬಗ್ಗೆ ಬರೆದಿದ್ದೇನೆ]



ಸಹಸ್ರ ಸೂರ್ಯರ ಘೋಷ ಮೊಳಗಿದ್ದೇ ಮೊಳಗಿದ್ದು
ಪೂರ್ವದಲ್ಲಿ ಹುಟ್ಟುವ ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಾನೆ
ಪ್ರತಿಸೂರ್ಯರ ಮಾತು ಇಲ್ಲ
"ಹೂವನ್ನ ನೋಡುವ ಪುರುಸೊತ್ತು ಇಲ್ಲ"
ಕಿತ್ತು ಮಾರಬಹುದು ಅಥವ ದೇವರಿಗೆ ಹಾಕಬಹುದು
ಕತ್ತಲ ರಾತ್ರಿಯಲ್ಲಿ ಗಾಳಿ ತಂಪಾಗಿ ಬೀಸುತ್ತದೆಂದು
ಹೊರಗೆ ನಡೆದದ್ದು
ಇದ್ದಕ್ಕಿದ್ದಂತೆ ಹೊಳೆದುಬಿಟ್ಟಿತು
"ಹೂ ಅರಳುವ ಕ್ರಿಯೆಯನ್ನ ನೋಡುವ ಬಗೆ"
(ದಯವಿಟ್ಟು ಕಾರಣ ಕೇಳಬೇಡಿ ಯಾಕೆ ಹೊಳೆದದ್ದು ಎಂದು)
ಕತ್ತಲಲ್ಲವೆ
ಮೊಬೈಲ್ ಫೋನ್ ನಲ್ಲಿನ ಬೆಳಕನ್ನ ಉಪಯೋಗಿಸಿಕೊಂಡು ಕೂತು
"ಹೂ ಅರಳುವ ಕ್ರಿಯೆಯನ್ನ ನೋಡುವುದಕ್ಕೆ"

ಕಿಟಕಿಗಳಿಲ್ಲ ಗರ್ಭಗುಡಿಗೆ
ಬಯಲಿಗೆ ಭಗವಂತ ಬಾರದೆ
ಮನುಷ್ಯ ಮಹಾಮೌನ ಮುರಿಯುವುದಿಲ್ಲ
ಹೊರಡುವುದೇ ಇಲ್ಲ ಇನ್ನು ಮರಳುವ ಮಾತೆಂತು

ಅರಚುತ್ತೇನೆ ಕಿರುಚುತ್ತೇನೆ ಕೆಲವೊಮ್ಮೆ
ಮುಷ್ಟಿ ಮೈಥುನದಂತಾದಾಗ ಬೇಸರಿಸಿಕೊಳ್ಳುತ್ತೇನೆ
ಗಿರಿಕಂದರ ಹಳ್ಳ ಕೊಳ್ಳ
ಕ್ಕೆ
ಪರಿತಾಪಿಸುತ್ತೇನೆ, ಧ್ವನಿಗೆ ಪ್ರತಿಧ್ವನಿಯನ್ನ.
ವ್ಯಾಕರಣಬದ್ದ ಪದಗಳ ರಾಶಿಯಿಂದ ಪುಸ್ತಕವಾದಾಗ
"ನಾನು ಸ್ವಾತಂತ್ರ್ಯ ಜೀವಿ"
ಮನೆ ಬಾಗಿಲು ಯಾರೋ ತಟ್ಟುತ್ತಿದ್ದಾರೆ
ಆದರೂ ನಂಬಿಕೆಯಿದೆ, ಮತ್ತೆ ಮತ್ತೆ
ಹೆಮ್ಮೆಯಿಂದ ಉಚ್ಚರಿಸುತ್ತೇನೆ
"ಭಾರತ ಓ ನನ್ನ ಭಾರತ
ಅದೆಂತ ಸಂಬಂಧ ನನಗೂ ನಿನಗು
ಅದೆಂತು ಕರೆತಂದು ನಿಲ್ಲಿಸಿದಿ ಇಲ್ಲಿ
ನಾ ಕನಸಲ್ಲೂ ಕಂಡಿರದ ಜಾಗದಲಿ"

"ಭೂಮಿ ಚಲನೆಯಲ್ಲಿ ಇರುವುದರಿಂದ
ನೀ ತಟಸ್ಥವಾಗಿದ್ದರೂ ಚಲಿಸುತ್ತಿರುತ್ತೀಯೆ"
ಇದು ಸದ್ಯದ ಪರಿಸ್ಥಿತಿ
ಆನೆ ನಡೆದದ್ದೇ ದಾರಿ ಎಂದೆಣಿಸಿದರೂ,
ಎಲ್ಲೋ ಭಯವಾಗುತ್ತಿದೆ
ಪುಟ್ಟ ಹಕ್ಕಿಗಳ ಗೂಡುಗಳು ನಲುಗುತ್ತಿವೆಯೆ ಎಂದು
ಕಾಲ್ತುಳಿತಕ್ಕೆ ಮೊಲಗಳೇನಾದರೂ ಸಿಕ್ಕಿವೆಯೆ ಎಂದು
ನೀವೆನ್ನಬೊಹುದು "ದಾರಿ ಬೇಕಲ್ಲವಯ್ಯ ಎಂದು"
ಗುರುಗಳೆ ಎಳೆ ಕಣ್ಗಳು ನಂದು
ದೂರ ಚಿಂತಿಸಲು ಶಕ್ತವಾಗಿಲ್ಲದಂತಿದೆ
ನಾನೆನುತ್ತೇನೆ
"ಕರುಣಾಳು ಬಾ ಬೆಳಕೆ, ಮುಸುಕಿದೀ
ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆದೂರೆ
ಕನಿಕರಿಸಿ ಕೈ ಹಿಡಿದು ನಡೆಸೆನ್ನನು"

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ