ಬೃಂದವನಂನಿಗೆ ತನ್ನ ಅಷ್ಟು ಒಳ್ಳೆಯ ಹೆಸರನ್ನ ಚಿಕ್ಕದಾಗಿಸಿ ಸುಖಾಸುಮ್ಮನೆ ವನಂ ವನಂ ಅಂತ ಕರೆಯೋದೇನೂ ಇಷ್ಟವಿರಲಿಲ್ಲ. ಎಲ್ಲರ ಹೆಸರಿಗೂ ಒಂದು ಕಥೆ ಕಟ್ಟಿರುತ್ತಿದ್ದ ಕಾಲವದು. ಅವರಮ್ಮನಿಗೆ ಹೆರಿಗೆ ನೋವು ಜಾಸ್ತಿ ಆಗಿ ಮನೆಯ ಮುಂದೆ ಬೃಂದಾವನದ ಬಳಿಯೇ ಹೆರಿಗೆ ಆಗಿ ಹೋಗಿತ್ತು. ಹೆಣ್ಣು ಹುಟ್ಟಿದ್ದಿದ್ದರೆ ತುಳಸಿಯಂತ ಹೆಸರಿಡುತ್ತಿದ್ದರೋ ಏನೋ ಹುಡುಗನಾಗಿದ್ದಕ್ಕಾಗಿ ಬೃಂದಾವನಂ ಆಗಿ ಕಡೆಗೆ ವನಂ ವನ ಹೀಗೆ ಹಲವಾರು ಹೆಸರುಗಳಲ್ಲಿ ಕರೆಯಲ್ಪಡುವವನಾದ. ಬೃಂದಾವನನ ಹೆಸರಿಗಿಷ್ಟೆಲ್ಲಾ ನಾಟಕೀಯತೆ ಸೇರಲ್ಪಟ್ಟರೂ ಮೂಲದಲ್ಲವನ ಬದುಕು ಸೀದಾ ಸರಳವಾಗೇ ಇತ್ತು. ಅವನ ಕೆಲಸವೆಲ್ಲ ಸಂಜೆ ಬಜ್ಜಿ ಬೋಂಡಾ ಹಾಕುವುದು ಹಾಗೂ ಮಾರುವುದು. ಜೀವನ ನಡೆಸಲಿಕ್ಕೆ ಇಷ್ಟು ಬಹಳಷ್ಟಾಗಿತ್ತು. ತಿರುಪತಿ ಅಷ್ಟುದೊಡ್ಡ ಯಾತ್ರಾ ಸ್ಥಳವಾಗಿದ್ದರೂ ಸದಾ ಜನರಿಂದಲೇ ತುಂಬಿ ಹೋಗಿರುತ್ತಿದ್ದರೂ ಎಲ್ಲಾ ಜಾಗಗಳನ್ನೂ ಬಿಟ್ಟು ಬೃಂದವನಂ ಜನ ವಾಸಿಸುವ ತನ್ನ ಮನೆಯ ಬಳಿಯಲ್ಲೇ ಕೋದಂಡರಾಮದೇವಸ್ಥಾನದ ಆ ಗಲ್ಲಿಯಲ್ಲೇ ಅಂಗಡಿ ತೆಗೆದಿದ್ದ. ಈ ಸುತ್ತಮುತ್ತ ಇವನ ಅಂಗಡಿ ಬಹುವಾಗಿ ಪ್ರಸಿದ್ಧವಾಗಿತ್ತು. ಅದಕ್ಕೆಲ್ಲಾ ಕಾರಣ ಅವನ ಹೆಂಡತಿ ರತ್ನಮ್ಮ ಮಾಡುತ್ತಿದ್ದ ತಿಂಡಿ ತಿನಿಸುಗಳ ರುಚಿ. ಮೂಲತಃ ಬಜ್ಜಿ ಹಿಟ್ಟನ್ನೆಲ್ಲಾ ಕಲೆಸಿ ಅದನ್ನೊಂದು ಹದಕ್ಕೆ ತಂದು ಕೊಟ್ಟದ್ದನ್ನು, ವನಂ ತಾನು ಕತ್ತರಿಸಿದ ಮೆಣಸಿನ ಕಾಯನ್ನು, ಬಾಳೆಕಾಯನ್ನು ಒಂದು ಹದದಲ್ಲಿ ಬೆರೆಸಿ ಎಣ್ಣೆ ಕಾದಿರುವುದನ್ನು ಖಚಿತಪಡಿಸಿಕೊಂಡು, ಎಣ್ಣೆಗೆ ಹಾಕಿ ತೆಗೆಯುವುದೊಂದೇ ಕೆಲಸ. ಈ ಬಗೆಬಗೆಯ ಬಜ್ಜಿಗೆ ನೆಂಚಿಕೊಳ್ಳುವುದಕ್ಕೆಅಂತಾನೆ ರತ್ನಮ್ಮ ಮಾಡಿಟ್ಟಿರುತ್ತಿದ್ದ ಕೆಂಪು ಚಟ್ಣಿಯೂ ಅಲ್ಲೆಲ್ಲಾ ಪ್ರಸಿದ್ಧಿ ಪಡೆದಿತ್ತು. ಇದ್ದ ಒಬ್ಬಳೇ ಮಗಳ ಮದುವೆಯಾಗಿದ್ದರಿಂದ ಈ ದಂಪತಿಗಳಿಗೇನು ಬೇರೆ ಹೆಚ್ಚಿನ ಜವಾಬ್ದಾರಿಗಳಿರುತ್ತಿರಲಿಲ್ಲ. ತಾವಾಯಿತು ತಮ್ಮ ಈ ಪುಟ್ಟ ಕೆಲಸವಾಯಿತು ಎಂಬುದಾಗಿತ್ತು.
ತೆಲುಗರ ರಕ್ತದಲ್ಲೇ ಸಿನಿಮಾ ಹುಚ್ಚು ಇದ್ದು ಬಿಟ್ಟಿರುತ್ತದೆ ಎಂಬುದೊಂದು ನಾಣ್ಣುಡಿ. ಈ ನುಡಿ ಅದೆಷ್ಟು ಬಾರಿ ಈ ಆಧುನಿಕ ಯುಗದಲ್ಲಿ ನಿಜವೋ ಅಲ್ಲವೋ ಆದರೂ ವನಂನ ನೋಡಿದರಂತೂ ಅದು ನಿಶ್ಚಯವಾಗುತ್ತಿತ್ತು. ವನಂಗೆ ಇದ್ದ ಆಸಕ್ತಿಯಲ್ಲ ಸಿನೆಮಾದ್ದೆ. ಸಿನಿಮಾ ನೋಡುವುದೆಂದರೆ ಎದುರಿಗಿನ ಪರದೆಯಲ್ಲಿ ನಡೆವ ಚಲನವಲನಗಳನ್ನು, ಬಣ್ಣಗಳನ್ನು ನೋಡಿದಂತಲ್ಲ. ಅವನ ಮಟ್ಟಿಗೆ ಅದು ಬೇರೆಯದೆ. “ನೋಡು ಸಿನಿಮಾ ಎಂದರೆ ಸುಮ್ಮನೆ ನೋಡೋದು ಅಷ್ಟೇ ಅಲ್ಲ. ಅಲ್ಲವೇ ಅಲ್ಲ. ಊಟ ಮಾಡುತ್ತೇವೆ, ಸ್ನಾನ ಮಾಡುತ್ತೇವೆ, ಕಕ್ಕಸಿಗೆ ಹೋಗುತ್ತೇವೆ, ನಿದ್ರೆ ಮಾಡುತ್ತೇವೆ, ಅಲ್ಲವಾ. ಅದೇ ರೀತಿ ಸಿನಿಮಾ ನೋಡುವುದೂ ಸಹ. ಸಿನಿಮಾ ನೋಡುವುದು ಅಂದರೆ ಅದೊಂದು ಕೆಲಸ ಅಲ್ಲವೇ ಅಲ್ಲ, ಅದು ಊಟ ಮಾಡೋ ರೀತಿ, ನೀರು ಕುಡಿಯೋ ರೀತಿ” ಅಂತ ಮಾತು ಆರಂಭಿಸಿದರೆ ಮಾತು ನಿಲ್ಲುವುದೇ ಇಲ್ಲ. ಒಮ್ಮೆ ಹೀಗೆ ತಿರುಪತಿಗೆ ದೇವಸ್ಥಾನಕ್ಕೆ ಅಂತ ಬಂದ ದಕ್ಷಿಣ ಕನ್ನಡದ ವ್ಯಕ್ತಿಯ ಕುಟುಂಬ ಅವರ ಗೆಳೆಯರೊಟ್ಟಿಗೆ ವನಂನ ಬೋಂಡ ಅಂಗಡಿಗೆ ಬಂದಿದ್ದರು. ವನಂನ ಈ ಸಿನೆಮಾ ಪ್ರೀತಿಯನ್ನು ಕಂಡು ಆಶ್ಚರ್ಯವಾಗಿ ಅವನ ಗೆಳೆಯನಿಗೆ ಹೇಳಿ ಯಾಕೆ ಇವರಿಗೆ ಸಿನಿಮಾ ಬಗೆಗೆ ಆಸಕ್ತಿ ಎಂಬ ಪ್ರಶ್ನೆ ಕೇಳಿದರು. ವನಂ ಈ ಪ್ರಶ್ನೆಗೆ ಉತ್ತರಿಸಲೇ ಇಲ್ಲ. ಅವರು ಹೋದ ಮೇಲೆ ಯಾಕೆ ಉತ್ತರಿಸಲಿಲ್ಲ ಅಂತ ಕೇಳಿದರೆ ಅವನೆಂದ, “ನನಗೆ ಈ ಪ್ರಶ್ನೆಯೇ ಅರ್ಥವಾಗಲಿಲ್ಲ”. ಅವನೊಟ್ಟಿಗಿದ್ದ ಗೆಳೆಯರ ಬಳಗ ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಬಹಳಷ್ಟು ಜನರು ಇವನ ಹಾಗೇ ಇದ್ದರು. ಹಾಗಾಗಿ ಯಾರಿಗೂ ವನಂ ಏನೂ ವಿಚಿತ್ರವಾಗಿಯಾಗಲಿ, ಇಲ್ಲವೇ ವಿಶೇಷವಾಗಿಯಾಗಲಿ ಯಾವ ಬಗೆಯಲ್ಲೂ ಕಾಣಲಿಲ್ಲ.
ವನಂಗೆ ತಾನು ಪ್ರಯತ್ನಿಸಿದರೂ ನೆರವೇರದ ಒಂದು ತೀವ್ರವಾದ ಬಯಕೆ ಇತ್ತು. ಈ ಜನ್ಮದಲ್ಲೇನೂ ನೆರವೇರದೆ ಹೋದರೂ, ಮುಂದಿನ ಜನ್ಮದಲ್ಲಾದರೂ ನೆರವೇರಬೇಕೆಂದೇ ಬಯಸಿದ್ದ. ಅದು ನೆರವೇರದಿದ್ದರೂ ಸಹ ಅವನ ನಿತ್ಯದ ಹಗಲು ಕನಸಿಗೆ ಬಣ್ಣ ಬಣ್ಣದ ಕಲ್ಪನೆಗಳಿಗೆ ಈ ಕನಸೇ ಆಧಾರವಾಗುತ್ತಿತ್ತು. ಈ ಕನಸು ಮೊದಲಿಗೆ ಭಾಷಾ ಸಿನಿಮಾ ನೋಡಿದಾಗ ಆರಂಭವಾದದ್ದು. ಸಮರಸಿಂಹಾರೆಡ್ಡಿ ನೋಡಿದಾಗ ಬೆಳೆದು ಇಂದ್ರ ನೋಡುವಷ್ಟರಲ್ಲಿ ಹೆಮ್ಮರವಾಗಿ ಬಿಟ್ಟಿತ್ತು. ಈ ಮೂರು ಸಿನಿಮಾಗಳು ಅದೆಷ್ಟು ಬಾರಿ ನೋಡಿದ್ದನೋ ಅವನಿಗೇ ಲೆಕ್ಕವಿಲ್ಲ. ಅದರಲ್ಲೂ ಈ ಮೂರು ಸಿನಿಮಾಗಳಲ್ಲಿ ಒಂದೊಂದು ದೃಶ್ಯಗಳುಂಟು. ಉದಾಹರಣೆಗೆ ಭಾಷಾದಲ್ಲಿ ಮೊದಲ ಬಾರಿಗೆ ಕಾಲೇಜಿನ ಪ್ರಾಂಶುಪಾಲರ ಬಳಿಯಲ್ಲಿ “ನನಗೆ ಇಲ್ಲಿ ಈ ಹೆಸರಿದೆ, ಆದರೆ ಮುಂಬೈಯಲ್ಲಿ ಬೇರೆಯದೇ ಹೆಸರು” ಅಂತ ಹೇಳುವ ಸನ್ನಿವೇಶವನ್ನು ಮೊದಲ ಬಾರಿಗೆ ನೋಡಿದ ವನಂಗೆ “ಅರೆ ಇದೇಗೆ, ಈ ಆಟೋವಾಲ ಇದ್ದಕ್ಕಿದ್ದ ಹಾಗೆ ಹೀಗಾದ”. ಒಮ್ಮೆಗೆ ಇಡೀ ಮೈ ರೋಮಾಂಚನಗೊಂಡು ಏನು ನಡೆಯುತ್ತಿದೆಯಂತಲೂ ಅರಿವಾಗದಂತಾಗಿದ್ದ. ಚನ್ನಕೇಶವರೆಡ್ಡಿಯಲ್ಲಿ ಹೋಟೆಲಿನಲ್ಲಿ ಸಪ್ಲಯರ್ ಆಗಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ, ಒಬ್ಬ ಸಾಮಾನ್ಯ ಸಪ್ಲಯರ್ ಆಗಿದ್ದವನಿಗೆ ಪೊಲೀಸ್ ಎಸ್ಪಿ ನಮಸ್ಕರಿಸುವುದೂ, ಅದೇ ರೀತಿ ಇಂದ್ರದಲ್ಲಿ ಒಬ್ಬ ಸಾಮಾನ್ಯ ಕಾರು ಚಾಲಕನಿಗೆ ಆ ರಾಜ್ಯದ ರಾಜ್ಯಪಾಲ ನಮಸ್ಕರಿಸುವುದೂ, ಆಶ್ಚರ್ಯವೆನಿಸಿತ್ತು. ಅವನಿಗಿನ್ನೂ ಆ ಸಾಲುಗಳು ನೆನಪಿದೆ. ಈ ಮೂರು ಸಿನಿಮಾಗಳಲ್ಲೂ ಆ ನಾಯಕರುಗಳ ನಿಜವಾದ ಸ್ವರೂಪ ತಿಳಿಯುವ ಸನ್ನಿವೇಶವಂತೂ ಹೊಸ ಪ್ರಪಂಚ ಸಾಧ್ಯತೆಯನ್ನು ಪರಿಚಯಿಸಿತ್ತು. ಅವನು ಆ ಒಂದು ಸನ್ನಿವೇಶಕ್ಕೇನೇ ಹಲವಾರು ಬಾರಿ ಆ ಸಿನಿಮಾಗಳಿಗೆ ಹೋದದ್ದಿದೆ. ಒಟ್ಟಿನಲ್ಲಿ ಈ ಮೂರು ಸಿನಿಮಾಗಳಲ್ಲಿನ ಒಂದು ಸಾಮಾನ್ಯ ಅಂಶವೆಂದರೆ ಒಬ್ಬ ಸೀದಾಸಾದ ಸಾಮಾನ್ಯ ವ್ಯಕ್ತಿ ಹಾಗೆ ಕಾಣುವ ವ್ಯಕ್ತಿ ನಿಜದಲ್ಲಿ ಬಹಳ ಪ್ರಸಿದ್ಧ ಇನ್ಫ್ಲುಯನ್ಷಿಯಲ್ ಪವರ್ ಫುಲ್ ವ್ಯಕ್ತಿಯಾಗಿ ಬಿಟ್ಟಿರುತ್ತಾನೆ. ಆ ನಿಜ ಸ್ವರೂಪವಿತ್ತಲ್ಲ, ಹಾಗೆ ಬರೀ ನಿಜದಲ್ಲಿ ಆ ಬಗೆಯಲ್ಲಿ ಪ್ರಸಿದ್ಧಿ ಪವರ್ ಫುಲ್ ಆಗಿದ್ದವನಲ್ಲಿ ವಿಶೇಷವಲ್ಲ. ಹೀಗೆ ಸಾಮಾನ್ಯನಂತೆ ನಮ್ಮ ಜೊತೆಯಲ್ಲೇ ಇರುವವನಂತೆ ಇದ್ದು ಇದ್ದಕ್ಕಿದ್ದಂತೆ ಅವರು ಬಹಳ ಪ್ರಸಿದ್ಧ ಪವರ್ ಫುಲ್ ಅಂತ ಹಾಗೆ ಅನಾವರಣಗೊಳ್ಳುವುದಿದೆಯಲ್ಲ, ಅದು ವನಂಗೆ ಯಾವಾಗಲೂ ಪುಳಕಗೊಳಿಸುವ ಉದ್ದೀಪಿಸುವ ಸಂಗತಿ. ಅದು ಅವನನ್ನು ಬಹಳವಾಗಿ ಆವರಿಸಿಬಿಟ್ಟಿದ್ದ ಕನಸು. ತಾನೂ ಸಹ ನಿಜದಲ್ಲಿ ಬಹಳ ಪವರ್ ಫುಲ್ ಆದ ವ್ಯಕ್ತಿಯಾಗಿ, ಇಲ್ಲಿ ಈ ಬಗೆಯಲ್ಲಿ ಬೋಂಡಾ ಮಾರುತ್ತಿರುವವನಾಗಿ, ಇದ್ದಕ್ಕಿದ್ದಂತೆ ತನ್ನನ್ನು ಯಾರೋ ಗುರುತಿಸಿ, ಅವನ ನಿಜಸ್ವರೂಪ ಇಡೀ ಊರಿಗೆ ಪ್ರಕಟಗೊಳಿಸಿದ್ದೇ ಆದರೆ ಅದು ಹೇಗಿರುತ್ತದೆ. ಇದೇ ಅವನ ಕನಸಾಗಿತ್ತು. ನಿಜದಲ್ಲಿ ಅವನೇನೂ ಯಾವ ಡಾನಾಗಲಿ ಫ್ಯಾಕ್ಷನಿಸ್ಟ ಆಗಲಿ ಅಲ್ಲದಿದ್ದ ಕಾರಣ, ನಿಜದಲ್ಲಿ ಅವನೊಬ್ಬ ಬೋಂಡ ಮಾರುವ ಸರಳ ವ್ಯಕ್ತಿ ಮಾತ್ರ ಆದ ಕಾರಣ, ಈ ಕನಸನ್ನು ಹಗಲ ಕನಸಾಗಿಸಿಕೊಂಡು ಚಿತ್ರ ವಿಚಿತ್ರ ಬಗೆಗಳನ್ನೆಲ್ಲಾ ಪರಿಕಲ್ಪಿಸಿಕೊಳ್ಳುತ್ತ ಕಟ್ಟಿಕೊಳ್ಳುತ್ತಾ ಇದ್ದ.
—————
--------------------------------
ಅದೇ ಸಮಯಕ್ಕೆ ವನಂಗೆ ಪರಿಚಿತನಾದವನು ಪಂಚಾಚರಂ. ಈ ಊರಿನವನಲ್ಲದವ. ಇತ್ತೀಚೆಗೆ ಒಂದಿಷ್ಟು ಕಾಲದಿಂದ ಇಲ್ಲಿ ವಾಸಿಸುತ್ತಿದ್ದಾನೆ. ವಾರಕ್ಕೆ ಒಂದೆರಡು ಬಾರಿಯಂತೂ ಬಂದು ಬೋಂಡಾ ತಿಂದು ಹೋಗುತ್ತಿದ್ದ. ಅದೆಷ್ಟೋ ಬಾರಿ ವನಂ ಮಾತನಾಡಿಸಬೇಕೆಂದು ಪ್ರಯತ್ನಿಸಿದರೂ, ಸುಮ್ಮನೆ ಏನೋ ಒಂದು ಉತ್ತರ ಕೊಟ್ಟುಬಿಟ್ಟುಡುತ್ತಿದ್ದ. ಹೀಗೆ ತನ್ನ ಗ್ರಾಹಕರ ಅಪರಿಚಿತತೆಯನ್ನು ವನಂಗೆ ಸಹಿಸಲಾಗುತ್ತಿರಲಿಲ್ಲ. ಒಂದು ಹಗಲಲ್ಲಿ ಹಾಗೆ ಕಂಡ ಪಂಚಾಚರನ ಹಿಂಬಾಲಿಸಿ ಅವನಿರುವ ಪ್ರದೇಶ ಮನೆ ಎಲ್ಲವನ್ನೂ ಪತ್ತೆ ಹಚ್ಚಿ ಬಂದಿದ್ದ. ಒಂದು ಆರು ತಿಂಗಳಿನಿಂದ ಇಲ್ಲೇ ಕೋದಂಡರಾಮಸ್ವಾಮಿ ದೇವಸ್ಥಾನದ ದಕ್ಷಿಣ ದಿಕ್ಕಿನ ಮಾಡುಬೀದಿಯ ಕೊನೆಯಲ್ಲಿನ ನಾಲ್ಕನೇ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸುತ್ತಿದ್ದನಂತೆ. ಕೆಲಸ ಮನೆಯಿಂದಲೇ ಆಗಿದ್ದರಿಂದ ಬೆಂಗಳೂರಲ್ಲಿ ದುಬಾರಿ ಎಂದೆನಿಸಿ ಸುಲಭಕ್ಕೆ ಹೋಗಿ ಬರುವುದಕ್ಕೆ ಅನುಕೂಲವಾದ ಹಾಗೂ ಒಂದಿಷ್ಟು ದೈವಭಕ್ತಿ ಇದ್ದುದರಿಂದ ತಿರುಪತಿಯಲ್ಲಿ ಮನೆಯಲ್ಲಿ ವಾಸಿಸುತ್ತಿದ್ದನಂತೆ. ಮೂಲತಃ ತಮಿಳುನಾಡಿನವನೆಂದೂ, ತಮಿಳು ಮನೆ ಮಾತೆಂದು ಆದರೂ, ತೆಲುಗು ಬಹಳಷ್ಟು ಬಲ್ಲವನಾಗಿದ್ದನು. ಸದಾ ಬರುವ ಗ್ರಾಹಕರ ಬಗ್ಗೆ ತಿಳಿದುಕೊಳ್ಳುವುದು ವನಂನ ಆಸಕ್ತಿ. ಪಂಚಾಚರನ ಬಗ್ಗೆ ಆಸಕ್ತಿ ಹುಟ್ಟಲು ಕುತೂಹಲ ಮೂಡಲು ಕಾರಣವಾಗಿದ್ದು ವನಂ ಕಂಡ ಎರಡು ದೃಶ್ಯಗಳು.
ಒಮ್ಮೆ ಹಗಲಿನ ವೇಳೆಯಲ್ಲಿ ಅಂಗಡಿಗೆ ಸಾಮಾನು ತರಲಿಕ್ಕೆ ಹೋದವ, ಪಂಚಾಚರನ ಮನೆ ಮುಂದಿನ ದಾರಿಯಲ್ಲಿ ಬರುತ್ತಿರಬೇಕಾದರೆ ಅಕಸ್ಮಾತಾಗಿ ತಲೆಯತ್ತಿ ನೋಡಿದರೆ ಮೇಲೊಂದು ಗರುಡ ತಿರುಗುತ್ತಿತ್ತು. ತಿರುಪತಿಯಲ್ಲಿ ಗರುಡ ಕಂಡರೆ ಆಶ್ಚರ್ಯವೇನಿಲ್ಲ. ಕೋದಂಡರಾಮನಿಗೋ ಆ ತಿಮ್ಮಪ್ಪನಿಗೋ ಸುತ್ತು ಹಾಕಲಿಕ್ಕೆ ಬಂದಿದೆಯೆಂದೇ ಅನ್ನಿಸಬಹುದು. ಆದರೆ ಈ ಯಾವ ಗರುಡಗಳು ಎಂದಿಗೂ ಆಕಾಶದ ಆ ಎತ್ತರರಿಂದ ಕೆಳಗೆ ಬರುವುದೇ ಇಲ್ಲ. ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ಹಾರುವುದೂ ಇಲ್ಲ. ಗರುಡ ಕೆಳಗೆ ಕಂಡದ್ದು ಆಶ್ಚರ್ಯಕರವಾಗಿತ್ತು ಅವನಿಗೆ. ವನಂ ಅಂತು ಈ ಹಕ್ಕಿಗಳು ಆಕಾಶದಲ್ಲೇ ಗೂಡುಕಟ್ಟಿ, ಆಕಾಶದಲ್ಲೇ ಸಂಸಾರ ಮಾಡಿ, ಆಕಾಶದಲ್ಲೇ ಸಾಯುವುದು ಎಂತಲೇ ಹೇಳುತ್ತಿದ್ದ. ಅಂತಹ ಗರುಡನನ್ನು ಮೊದಲ ಬಾರಿಗವನು ಅಷ್ಟು ಹತ್ತಿರದಿಂದ ಕಂಡಿದ್ದು ಪಂಚಾಚರನ ಮಹಡಿಯ ಮೇಲೇ. ಕೆಳಗೆ ನಿಂತವ ಅಷ್ಟು ಹತ್ತಿರದಿಂದ ಕೆಳಗಿನ ರಸ್ತೆಯಲ್ಲೇ ನಿಂತು ಅದನ್ನೇ ನೋಡುತ್ತಿದ್ದ. ಅದು ಬಯಲಿನ ಆಕಾಶಕ್ಕೆ ಮುತ್ತಿಡುತ್ತಿದ್ದಂತೆ ಕಂಡಿತು. ಆ ಬಿಳಿ ಬಣ್ಣದ ಪಟ್ಟಿಗಳು, ಕಾಲಲ್ಲಿದ್ದ ಉಗುರುಗಳು, ದೊಡ್ಡ ಕೊಕ್ಕು, ಭಾರೀ ದೇಹ. ಆಹಾ ಅದೆಷ್ಟು ಅದ್ಭುತವಾಗಿದೆಯಂದೆನಿಸಿತ್ತು. ಆಗಲೇ ಮನೆಯಿಂದ ಹೊರಬಂದ ಪಂಚಾಚರನು ಆ ಹಕ್ಕಿಯನ್ನು ಕಂಡದ್ದೇ ಅದು ಅವನೆಡೆಗೇ ನೋಡಿತು. ಒಂದಿಷ್ಟು ಕಾಲ ಆ ಹಕ್ಕಿ ಅವನನ್ನೇ, ಪಂಚಾಚರನನ್ನೇ ನೋಡುತ್ತಿದ್ದಂತೆಯೇ ಇತ್ತಾದರೂ ಹಾಗೆ ನೋಡುತ್ತಿರಬೇಕಾದರೇನೇ ಹಾಗೆ ಅದು ಹಾರಿ ಹೋಯಿತು. ಹಲವಾರು ಬಾರಿ ಊರದೇವರ ವಾರ್ಷಿಕ ಉತ್ಸವಕ್ಕೆ ತೇರನೆಳೆಯಬೇಕಾದರೆ ಬಂದೇ ಬರುತ್ತಿದ್ದ ಗರುಡ ನೆನಪಾಯಿತು. ಅಷ್ಟು ಎತ್ತರರಿಂದ ಸ್ವಾಮಿಯ ರಥಕ್ಕೆ ಮೂರು ಸುತ್ತು ಹಾಕಿ ತನ್ನ ಸೇವೆಯನ್ನು ನೆರವೇರಿಸಿದ ನಂತರವೇ ರಥ ಕದಲುತ್ತಿದ್ದದ್ದು. ಕೈಹಿಡಿದು ಕರೆದೊಯ್ಯುತ್ತಿದ್ದ ಮಾವ ಹೆಗಲ ಮೇಲೆ ಇರಿಸಿಕೊಂಡು ತೋರಿಸುತ್ತಿದ್ದ, ಅಗೋ ಅಲ್ಲಿ ನೋಡು ಗರುಡ ಹಾರುತ್ತಿದೆ ಅಂತ. ಈಗ ವನಂ ಅದನ್ನು ಇಷ್ಟು ಹತ್ತಿರದಿಂದ ನೋಡಿದ್ದ. ಯಾಕೋ ಅವನಿಗೆ ಈ ಬಗೆಯ ಗರುಡದರ್ಶನಕ್ಕೆ ಪಂಚಾಚರನೇ ಕಾರಣವೆಂದೆನಿಸಿತ್ತು. ಮೂಲತಃ ಗರುಡ ಪಕ್ಷಿಗಳೇನೂ ಮನುಷ್ಯರಿಗೆ ಅಷ್ಟೇನೂ ಪರಿಚಿತವಲ್ಲವಾದರೂ ಪಂಚಾಚರನ ಮನೆಯ ತಾರಸಿಯ ಮೇಲೆಯೇ ಕಂಡಿದ್ದರಿಂದ, ವನಂಗೆ ಪಂಚಾಚರನ ಮೇಲೆ ಒಂದು ಬಗೆಯ ಆಸಕ್ತಿ ಆಸ್ತೆ ಬೆಳೆಯಿತು. ಹೇಗಾದರೂ ಅವನೊಟ್ಟಿಗೆ ಸ್ನೇಹವನ್ನು ಗಳಿಸಬೇಕೆಂದುಕೊಂಡ. “ಪಂಚಾ, ನಿಮ್ಮ ಮನೆ ಮೇಲೆ ಮೊನ್ನೆ ಗರುಡ ಹಾರುವುದನ್ನು ಕಂಡೆ” ಅಂದದ್ದಕ್ಕೆ ಸುಮ್ಮನೆ ನಕ್ಕುಬಿಟ್ಟ. ಇಷ್ಟಕ್ಕೂ ಈ ವ್ಯಕ್ತಿಯನ್ನು ತಿಳಿಯುವುದಾದರೂ ಹೇಗೆ? ಪರಿಚಯಿಸಿಕೊಳ್ಳುವುದಾದರೂ ಹೇಗೆ? ಏನೂ ಹೆಚ್ಚು ಜವಾಬ್ದಾರಿಗಳಿಲ್ಲದ, ಸುಲಭವಾಗಿ ಸಾಗಿ ಹೋಗುತ್ತಿದ್ದ ವನಂಗೆ, ಬದುಕಿಗೆ ಯಾಕೋ ಏನಾದರೊಂದು ಸಾಹಸವಿರಲಿ ಎಂದೆನಿಸಿ, ಹೇಗೋ ತಾನೇನೂ ಯಾವ ಸಿನಿಮಾ ಹೀರೋ ರೀತಿಯಲ್ಲೂ ಇದ್ದಕ್ಕಿದ್ದಂತೆ ಹಿಮಾಲಯ ಹತ್ತುವುದೋ, ಆಕಾಶದಿಂದ ಹಾರುವುದೋ ಸಾಧ್ಯವಿಲ್ಲದುದರಿಂದ ಕಡೇ ಪಕ್ಷ ಪಂಚಾಚರನೊಟ್ಟಿಗೆ ಸ್ನೇಹಗಳಿಸಬೇಕೆಂದೆನಿಸಿತು. ಅವನಿಗೆ ಪಂಚಾಚರನ ಬಗೆಗೆ ತಿಳಿದು ಸ್ನೇಹಗಳಿಸುವುದೇ ಏಕೋ ಏನೋ ಸಾಹಸವೆಸಿ ಸರಿ ಇದನ್ನೇ ಮಾಡಿಬಿಡೋಣೋವೆಂದು ಅ ಸಾಹಸಕ್ಕೆ ಸಿದ್ಧನಾದ.
ಅದಕ್ಕವನು ಮೊದಲು ಪಂಚಾಚರನನ್ನು ಗಮನಿಸಬೇಕು. ಹತ್ತಿರದಿಂದ, ಅತೀ ಹತ್ತಿರದಿಂದ ಅವನನ್ನು ಗಮನಿಸಬೇಕು. ಪಂಚಾಚರ ಏನು ಮಾಡುತ್ತಾನೆ? ಅವನ ಆಸಕ್ತಿಗಳೇನು? ಅವರ ಮನೆಯವರೆಲ್ಲಾ ಎಲ್ಲಿದ್ದಾರೆ? ಯಾರಾದರೂ ಬರುತ್ತಿರುತ್ತಾರಾ? ಅವನ ಹೆಂಡತಿ ಯಾರು? ಮದುವೆ ಆಗಿದೆಯಾ? ಅವನು ಕೆಲಸ ಮಾಡುವ ಕ್ಷೇತ್ರ ಯಾವುದು? ಯಾವ ಕಂಪನಿ? ಹಲವಾರು ಪ್ರಶ್ನೆಗಳಿತ್ತು. ಎಲ್ಲಕ್ಕೂ ಉತ್ತರ ದೊರಕಬೇಕಾದರೆ ಪಂಚಾಚರನನ್ನು ಹತ್ತಿರದಿಂದ ಬಹಳ ಹತ್ತಿರದಿಂದ ಕಾಣಬೇಕಿದೆ. ನೋಡಬೇಕು. ಹೇಗಿದ್ದರೂ ಬೆಳಗ್ಗಿನಿಂದ ಸಂಜೆಯವರೆಗೂ ಹೆಚ್ಚಿನ ಕೆಲಸಗಳೇನೂ ಇಲ್ಲದ ವನಂಗೆ ಯಾಕಾಗಬಾರದು ಎಂದೆನಿಸಿ ಪಂಚಾಚರನ ಗಮನಿಸಲಿಕ್ಕೆ, ಅವನನ್ನೇ ಹಿಂಬಾಲಿಸಿ ನೋಡಿಯೇ ಬಿಡುವ ಎಂದು ಹೊರಟ. ಈ ಊರಿನ ಬೀದಿ ಬೀದಿಗಳಲ್ಲೆ ಬೆಳೆದು ಆಟವಾಡಿದ್ದ ವನಂಗೆ ಅಲ್ಲಿನ ಪ್ರತಿ ಗಲ್ಲಿಯೂ ಪರಿಚಿತ. ಅಲ್ಲಿನ ಪ್ರತೀ ವ್ಯಕ್ತಿಯೂ ಪರಿಚಿತ. ಅವನು ಹೋದ ಜಾಗಗಳಲ್ಲೆಲ್ಲಾ ಸಿಗುವವರ ಬಳಿಯೆಲ್ಲಾ ಮಾತನಾಡಲಿಕ್ಕೆ ಹರಟಲಿಕ್ಕೆ ಅವನ ಬಳಿ ಹಲವಾರು ವಿಷಯಗಳು ಸರಕುಗಳು ಇರುತ್ತಿದ್ದವು.
ಮೊದಲನೆಯ ದಿನ ಪಂಚಾಚರನ ಎದುರಿಗಿನ ಮನೆ ಪಕ್ಕದ ಮನೆಯವರ ಬಳಿಗೆಲ್ಲಾ ಹೋದವನೆ ಅವನಿಗೆ ತಾನೇ ಮಾಡಿದ್ದ ಕೋಡುಬಳೆ ನಿಪ್ಪಟ್ಟು ಕೊಟ್ಟು, ಹೀಗೇ ಸುಮ್ಮನೆ ಬಂದನೆಂದೂ ಬಹಳಷ್ಟು ಕಾಲವಾಯಿತು ಮಾತನಾಡಿ ಹಾಗೆಯೇ ಮಾತನಾಡಲಿಕ್ಕೆ ಬಂದೆನೆಂದು ಹೇಳಿ, ಪಂಚಾಚರನ ಬಗೆಗೆ ಅವನ ಮನೆಯಲ್ಲಿರಬಹುದೋ ಎನ್ನುವುದರ ಬಗೆಗೆ ಒಂದಿಷ್ಟು ತಿಳಿಯಲು ಉತ್ಸುಕನಾದ. ಎದುರಿನ ಮನೆಯವರನ್ನ ಮಾತನಾಡಿಸುತ್ತಲೇ ಅವರನ್ನು ನೋಡಲಿಕ್ಕೆಯಂತಲೇ ಬಂದಿದ್ದೆ ಎಂಬಂತೆ ಅವರಿಗೆ ಒಂದು ಗುಲಗಂಜಿಯೂ ಅನುಮಾನ ಬಾರದಂತೆ, ಪಂಚಾಚರನ ಮನೆಯೆಡೆಗೆ ದೃಷ್ಟಿ ಇಟ್ಟು ಬಂದ. ಮನೆಯವರ ಬಗೆಗಿನ ಎಲ್ಲಾ ಸಮಾಚಾರಗಳನ್ನು ತಿಳಿಯುತ್ತಾ ಹರಟೆಗಿಳೆದಿದ್ದರೂ ತನ್ನ ದೃಷ್ಟಿಯಲ್ಲ ಪಂಚಾಚರನ ಮನೆಯ ಮೇಲೆಯೇ. ಯಾವ ದಿಕ್ಕಿನಿಂದ ನೋಡಿದರೂ ಸಹ ಮನೆಯೊಳಗೆ ಒಂದು ಇಣುಕು ನೋಟವೂ ಸಾಧ್ಯವಾಗಲಿಲ್ಲ. ಎಲ್ಲಾ ದಿಕ್ಕುಗಳಿಂದಲೂ ಎಲ್ಲಾ ಕಿಟಗೆಗಳಿಗೂ ಪರದೆಗಳಾಕಿಬಿಟ್ಟಿದ್ದಾರೆ. ಅದೂ ಕೆಂಪು ಬಣ್ಣದ ಪರದೆಗಳು. ಒಳಗಿನ ಯಾವುದೂ ಕಾಣುವುದಿಲ್ಲ. ಅಲ್ಲ ತಿರುಪತಿಯ ಬಿಸಿಲಿಗೆ ಯಾರಾದರೂ ಯಾಕೆ ಹೀಗೆ ಎಲ್ಲವನ್ನೂ ಬಂಧಿಸಿ ಇಟ್ಟುಕೊಂಡಿರುತ್ತಾರೆ. ಕನಿಷ್ಠ ಬಟ್ಟೆಯೂ ಎಲ್ಲೂ ಒಣಗಿಸಿದ್ದು ಕಾಣಲಿಲ್ಲ. ಒಟ್ಟಿನಲ್ಲಿ ಅಷ್ಟು ಕಷ್ಟಪಟ್ಟರೂ ಅಲ್ಲೇನೂ ಯಾವ ಬಗೆಯೂ ಕುರುಹು ದೊರೆಯದಿದ್ದದ್ದು ವನಂಗೆ ಒಂದಿಷ್ಟು ಬೇಸರ ಮೂಡಿಸಿದರೂ ಅದೇ ಅವನಿಗೊಂದು ಚಾಲೇಂಜ್ನ ರೀತಿ ಭಾಸವಾಯಿತು. ಅರೆ ಯಾರಿವನು ಏನಿವನು? ಯಾವ ಬಗೆಗೂ ದೊರೆಯದವನು, ಏನೋ ಇದೆ ಅವನಲ್ಲಿ ರಹಸ್ಯ. ತಾನದನ್ನು ಭೇಧಿಸಲೇಬೇಕು. ಸುತ್ತಲಿನ ಮನೆಗಳಿಂದೆಲ್ಲಾ ತಿಳಿದುಬಂದ ಸಂಗತಿಗಳೆಂದರೆ, ಆ ವ್ಯಕ್ತಿ ಹೆಚ್ಚಾಗಿ ಯಾರನ್ನೂ ಮಾತನಾಡಿಸುವುದಿಲ್ಲ. ಯಾರಿಗೂ ಏನಕ್ಕೂ ತೊಂದರೆ ಮಾಡುವುದೂ ಇಲ್ಲ. ಅಡುಗೆ, ಮೆನಗೆಲಸ ಎಲ್ಲಾ ಸ್ವತಃ ಅವನೇ ಮಾಡಿಕೊಳ್ಳುತ್ತಾನೆ. ಹಾಲು ಹಾಕಲಿಕ್ಕೆ, ಪೇಪರ್ ಹಾಕಲಿಕ್ಕೂ ಜನ ಅವನ ಬಳಿಗೇನೂ ಹೋಗುವುದಿಲ್ಲ. ಅವನೇ ಹೋಗಿ ಹಾಲು ಪೇಪರ್ ನಿತ್ಯ ಕೊಂಡುಬರುತ್ತಾನೆ. ಯಾರಾದರೂ ವಯಸ್ಸಾದವರು ಏನಾದರೂ ಬೇಡದ ಕಥೆಗಳನ್ನು ಹೇಳುತ್ತಿದ್ದರೂ ಸುಮ್ಮನೆ ಕೇಳುತ್ತಿರುತ್ತಾನೆ. ಮನೆ ಮಾಲೀಕನಿಗೂ ಅವನಿಗೂ ಪರಿಚಯವಂತೆ. ಹಾಗಾಗಿ ಮನೆ ಮಾಲೀಕ ಅಮೇರಿಕದಲ್ಲಿರುವವರು, ಸದ್ಯ ತಾನು ಭಾರತಕ್ಕೆ ಬರುವುದಿಲ್ಲವೆಂದೂ, ಈ ಮನೆಯನ್ನು ಪಂಚಾಚರನಿಗೆ ಬಾಡಿಗೆ ಕೊಟ್ಟಿದ್ದಾರೆ. ಇನ್ನುಳಿದಂತೆ ಆಗಾಗ ಸುಮಾರು ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ಒಬ್ಬಾಕೆ ಅವನ ಮನೆಗೆ ಬಂದು ಹೋಗುತ್ತಿರುತ್ತಾಳೆಂದೂ, ಅವಳ ಅಕ್ಕನೆಂದು ಪರಿಚಯಿಸಿದ್ದಾನೆಂದೂ ತಿಳಿದುಬಂದಿತು.
———————
--------------------------------
ಒಮ್ಮೆ ಇವರಿಬ್ಬರ ಮುಖಾಮುಖಿ ಸಹಜವಾಗಿ ಸಾಧ್ಯವಾಗಿತ್ತು. ಅದೂ ರಂಗಮಂದಿರದಲ್ಲಿ. ಮಹತಿ ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟಕವು ನೋಡಿದ ನಂತರ. ತೆಲುಗಿನ ನಾಟಕ. ದೂರದ ವಿಶಾಖಪಟ್ಟಣಂ ಇಂದ ಬಂದಿದ್ದ ನಾಟಕದ ಗುಂಪಿನವರದ್ದಾಗಿತ್ತು. ಬೃಂದಾವನಂಗೇನೂ ನಾಟಕದ ಹುಚ್ಚೇನೂ ಇಲ್ಲವಾದರೂ, ಚಿಕ್ಕಂದಿನಿಂದಲೂ ನಾಟಕ ನೋಡುತ್ತಲೇ ಇದ್ದಾನೆ. ಅದಕ್ಕೂ ಮೀರಿ ಈ ನಾಟಕವನ್ನು ಅಭಿನಯಿಸಿದವರು ರತ್ನನ ಊರಿನ ಪಕ್ಕದ ಊರಿನವರಾಗಿತ್ತು. ರತ್ನಳಿಗೆ ಆ ನಾಟಕದಲ್ಲಿನ ಒಂದೆರಡು ಪಾತ್ರಗಳ ಅಭಿನಯಧಾರಿಗಳ ಪರಿಚಯವತ್ತು. ಅವರುಗಳು ಖುದ್ದಾಗಿ ಮನೆಗೆ ಬಂದು ತಾವುಗಳು ನಾಟಕ ನೋಡಲು ಬರಲೇಬೇಕು ಎಂದು ಆಹ್ವಾನಿಸಿದ್ದರಿಂದ ರತ್ನಮ್ಮಳು ಒತ್ತಾಯಿಸಿದ್ದರಿಂದ ಸರಿ ಎಂದು ರತ್ನಮ್ಮಳನ್ನು ಕರೆದುಕೊಂಡು ವನಂ ನಾಟಕ ನೋಡಲಿಕ್ಕೆ ಬಂದಿದ್ದ. ನಾಟಕ ಬಹಳ ವಿಚಿತ್ರ ಹಾಗೂ ವಿಶಿಷ್ಟವಾಗಿತ್ತು. ತಾನು ಇಷ್ಟು ದಿನಗಳ ಕಾಲ ನೋಡಿದ ನಾಟಕವೆಂದು ಬಗೆದ ಎಲ್ಲಾ ಹಂಗುಗಳನ್ನು ಕಿತ್ತೊಗೆದಿತ್ತು. ಅವನು ಇಷ್ಟು ಕಾಲ ನೋಡುತ್ತಿದ್ದ ನಾಟಕ ಎಂದರೇನೇ ಅದು ಪೌರಾಣಿಕವಾಗಿತ್ತು. ಇಲ್ಲ ಎಂದರೂ, ಸಾಮಾಜಿಕ ನಾಟಕವಾದರೆ ಆ ನಾಟಕದಲ್ಲಿ ಹಾಸ್ಯವೆಂದು ಹೇಳುವ ಪಾತ್ರವು, ಶೃಂಗಾರದ ಹೆಸರಲ್ಲಿ ಒಂದಷ್ಟು ಅಶ್ಲೀಲ ಪದ ಪಾತ್ರಗಳನ್ನು ಸೇರಿಸಿ ಸುಮ್ಮನೆ ರಂಜಿಸುವುದು. ಇವೆರಡೂ ಅಲ್ಲದಿದ್ದರೆ ಕ್ರಾಂತಿ ನಾಟಕಗಳಾಗಿ ಒಬ್ಬ ಇಲ್ಲ ಒಂದು ಒಟ್ಟು ಸಮುದಾಯ ಅವರೆಲ್ಲರನ್ನೂ ಖಳನಾಯಕರನ್ನಾಗಿಸಿ, ಅವರ ವಿರುದ್ಧ ಹೋರಾಡುವ ಹೋರಾಟದ್ದೆ ಚಿತ್ರ. ಹೋರಾಡಲಿಕ್ಕೆಂದಿರುವ ನಾಯಕ ಹಾಗು ನಾಯಕನ ಗುಂಪು. ಅದನ್ನ ವಿರೋಧಿಸಲಿಕ್ಕೆ ಅಂತಲೇ ಇರುವ ಖಳನಾಯಕ ಹಾಗೂ ಅವನ ಒಂದು ಗುಂಪು. ಒಟ್ಟಿನಲ್ಲಿ ಎಲ್ಲವನ್ನೂ ಎರಡು ಭಾಗಗಳಾಗಿ ವಿಭಾಗಿಸಿ ಒಂದರ ವಿರುದ್ಧ ಮತ್ತೊಂದು ಎಂಬಂತೆಯೇ ಬಿಂಬಿಸಿ ಅದೇ ಸತ್ಯವೆಂದಾಗಿಸಿ, ಬಿಂಬಿಸಿ ಕಟ್ಟಿರುತ್ತಿದ್ದ ನಾಟಕಗಳನ್ನೇ ನೋಡುತ್ತಿದ್ದುದು. ಆದರೆ ಈಗ ಅವನು ನೋಡುತ್ತಿದ್ದ ನಾಟಕ ತೀರಾಭಿನ್ನವಾಗಿತ್ತು. ನಾಟಕದ ಹೆಸರು ರೈಲು ನಿಲ್ದಾಣ. ನಾಟಕದ ಕಥೆ ತೀರಾ ಸರಳ. ರಂಗದ ಮೇಲೆ ರೈಲು ನಿಲ್ದಾಣವೆಂದು ಬಿಂಬಿಸಲಿಕ್ಕೆ ಬೇಕಾದಂತಹ ರಂಗ ಪರಿಕರಗಳನ್ನೆಲ್ಲ ಜೋಡಿಸಿದ್ದರು. ರೈಲು ಮಾದರಿಯಲ್ಲೆ ರೈಲನ್ನು ಹೋಲುವ ಮಾಡಲ್. ಆಗಾಗ ಬಂದು ಹೋಗುತ್ತಿದ್ದ ಜನ. ರೈಲು ನಿಲ್ದಾಣದ ಮಾದರಿಯಲ್ಲೇ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಒಂದು ಮೈಕು, ಹಿನ್ನೆಲೆ ಸಂಗೀತವಿದ್ದದ್ದು ಬಹಳಷ್ಟು ಬಾರಿ ರೈಲ್ವೆ ನಿಲ್ದಾಣದಲ್ಲಿನ ಗಲಾಟೆಯನ್ನು, ರೈಲು ಚೆಲಿಸುವ ಶಬ್ಧಗಳೆಲ್ಲವನ್ನೂ ಸಂಯೋಜಿಸಿ, ದೃಶ್ಯಕ್ಕೆ ತಕ್ಕಂತೆ ಅವುಗಳನ್ನು ಪ್ರದರ್ಶಿಸುತ್ತಿದ್ದರು. ಮೊದಲಿಗೆ ನಾಟಕದಲ್ಲಿ ಸಿದ್ಧ ಮಾದರಿಯ ಯಾವುದೇ ಕಥೆಯಿರಲಿಲ್ಲ ಅಥವಾ ಇದನ್ನು ಕಥೆಯನ್ನಬಹುದೆಂದಾದರೆ ಕಥೆಯಿತ್ತೆಂದೇ ಹೇಳುವ. ಯಾಕೆಂದರೆ ಇಲ್ಲಿ ನಾಯಕ ನಾಯಕಿ ಖಳನಾಯಕ ಹಾಗೇನೂ ಸಿದ್ಧ ಮಾದರಿಯಿರಲಿಲ್ಲ. ಅಷ್ಟೇ ಅಲ್ಲ, ಇಡೀ ನಾಟಕ ರೈಲು ಉಗಿಬಂಡಿಯಾಗಿ ಪ್ರಾರಂಭವಾದಾಗಿನಿಂದ ವಂದೇ ಭಾರತವೆಂಬೋ ಅತಿವೇಗದ ರೈಲಾಗುವವರೆಗಿನ ಎಲ್ಲಾ ಕಾಲವನ್ನು ಸುಮ್ಮನೆ ಒಂದೊಂದೇ ರೈಲುಗಳೂ ಆ ಮಾದರಿಗಳು ಬದಲಾಗುವುದು, ನಂತರ ಒಬ್ಬೊಬ್ಬರಂತೆ ವ್ಯಕ್ತಿಗಳಲ್ಲಿ, ಅವರ ವೇಷಭೂಷಣ ಬದಲಾಗುವುದರ ಮೂಲಕವಾಗಿ ಕಟ್ಟಿಕೊಡಲಾಗಿತ್ತು. ಎರಡನೆಯದಾಗಿ ನಾಟಕ ಅತಿ ನಿಧಾನ ಹಾಗೂ ಅತಿ ಜೋರು ಕ್ರಮವನ್ನು ಅನುಸರಿಸುತ್ತಿತ್ತು. ನಿಧಾನವೆಂದರೆ ಬೇಕೆಂತಲೇ ಅತೀ ನಿಧಾನ. ಒಂದು ಹೆಜ್ಜೆ ಹಾಕಲಿಕ್ಕೆ ಕಾಲನ್ನು ಅತಿ ನಿಧಾನಕ್ಕೆ ಕೆಳಗಿರಿಸುವುದೂ ನಂತರ ಯಾವುದೋ ಹೊತ್ತಲ್ಲಿ ಇದ್ದಕ್ಕಿದ್ದಂತೆ ಅತಿ ವೇಗವನ್ನು ತಲುಪಿಬಿಡುವುದು, ಎರಡೂ ನಡೆಯುತ್ತಿತ್ತು. ಹಾಗಾಗಿ ಇದೇ ಮೊದಲ ಬಾರಿಗೆ ಈ ಬಗೆಯ ನಾಟಕವನ್ನು ವನಂ ನೋಡುತ್ತಿದ್ದ. ಸರಿಸುಮಾರು ಒಂದೂವರೆ ಶತಮಾನದ ಕಾಲಮಾನವನ್ನು, ಆ ಕಾಲಮಾನದ ಆಗುಹೋಗಗಳನ್ನು ಆ ಕಾಲದೊಳಹೊಕ್ಕ ಕ್ರೌರ್ಯಗಳನ್ನೆಲ್ಲ ಮಾತಿಲ್ಲದೆ, “ಅಯ್ಯೋ” ಎನ್ನುವ ಒಂದೇ ಶಬ್ದವನ್ನಾಡಿಸಿ ಮನುಕುಲದ ಆಧುನಿಕ ಯುಗದ ಕ್ರೌರ್ಯದ ಮುಖವನ್ನೆಲ್ಲಾ ಒಂದು ರೈಲು ನಿಲ್ದಾಣದಲ್ಲಿ ತೋರಿಸಿತ್ತು. ಆ ನಾಟಕ ಅದೆಷ್ಟು ತೀವ್ರವಾಗಿ ಪರಿಣಾಮಕಾರಿಯಾಗಿತ್ತೆಂದರೆ ವನಂಗೆ ಹೊಟ್ಟೆಯಲ್ಲ ತಿರುಗಿಸಿದಂತೆ, ಏನೋ ಹೇಳಲಾರದ ಆವೇದನೆ. ಯಾಕೋ ಎದೆಯಲ್ಲ ಭಾರ ಭಾರವಾಗಿ, ತಡೆಯಲಾರದೆ ಹೋದ. ರತ್ನಾಳ ಕಡೆಗೆ ತಿರುಗಿದರೆ ಕೊನೆ ಮೊದಲುಗಳಿಲ್ಲದ ನಾಟಕವನ್ನು ಬಯ್ಯುತ್ತಾ ಇದ್ದಳು. ತನಗೇನಾಗುತ್ತಿದೆ ಅಂತಲೇ ವನಂಗೆ ತಿಳಿಯಲಿಲ್ಲ. ದೇಹವೆಲ್ಲಾ ದಣಿವಾಗಿ ಅಲ್ಲೇ ಕೂತ. ಏನೋ ಕೆಲಸವಿದೆಯೆಂದೋ, ಯಾರೋ ಸಿಕ್ಕಿದರೆಂದೋ ರತ್ನ ಹೊರಟುಬಿಟ್ಟಳು. ಹಾಗೆ ಒಬ್ಬನೇ ಹೊರಗೆ ಕೂತವನಿಗೆ ತಾನು ಕೂತಿರುವ ಆ ಕುರ್ಚಿ ಅದೇ ರೈಲು ನಿಲ್ದಾಣ ನಾಟಕದ ಕುರ್ಚಿಯಂತೆಯೇ ಭಾಸವಾಗಿ ಅಲ್ಲೇ ಆ ನಾಟಕದಲ್ಲಿ ಕೂತಂತೆನಿಸಿ, ಒಟ್ಟು ಒಂದೂವರೆ ಶತಮಾನದ್ದೆಲ್ಲಾ ಕ್ರಿಯೆಗಳಿಗೆ ಸಾಕ್ಷಿಯಾದವನ?, ಭಾಗಿಯಾದವನ? ತಿಳಿಯದಾಗಿ ಎದೆಯೊಳಗಿದ್ದ ನೋವು ಕಣ್ಣಿಂದ ಹೊರ ಹೊರಟವು. ಆಗಲೇ ಹೆಚ್ಚು ಕಡಿಮೆ ಅದೇ ಸ್ಥಿತಿಯಲ್ಲಿದ್ದ, ಅದೇ ಬಗೆಯಲ್ಲಿ ಕಣ್ಣಲ್ಲಿ ಇನ್ನೇನು ಹನಿ ಹರಿದುಬಿಡುತ್ತಿದೆಯೆನ್ನುವಂತೆಯೂ ಆಗಿಬಿಟ್ಟಿದ್ದ ಪಂಚಾಚರ ವನಂನ ಎದುರಿಗೆ ನಿಂತಿದ್ದ. ಯಾರಾದರೊಬ್ಬರಿಗೆ ಈ ನೋವು ಭಾವ ಹಂಚಿಕೊಳ್ಳಲೇಬೇಕು, ಯಾರಿದ್ದಾರೆ ಯಾರಿದ್ದಾರ ಇಲ್ಲಿ, ಎಂಬಂತೆ ಹುಡುಕುತ್ತಲೇ ಇದ್ದರೋನೋ ಎಂಬಂತೆ ಒಬ್ಬರಿಗೊಬ್ಬರು ಎದುರಾಗಿ ಯಾವ ಮಾತೂ ಇಲ್ಲದೆ ಒಬ್ಬರ ಕೈಯನ್ನು ಗಟ್ಟಿಯಾಗಿ ಮತ್ತೊಬ್ಬರು ಹಿಡಿದರು. ಕಣ್ಣಂಚಲ್ಲಿದ್ದ ನೀರೆಲ್ಲಾ ಜಾರಿಯಾಗಿತ್ತು. ಆ ಹಿತವಾದ ಹಿಡಿತದಲ್ಲಿ ಅಲೌಕಿಕ ಆನಂದವೊಂದಡಗಿತ್ತು. ಏನೂ ಮಾತನಾಡದೆ ಇಬ್ಬರೂ ಅದೇ ಬೆಂಚಿನಲ್ಲಿ ಪಕ್ಕಪಕ್ಕ ಕೂತರು. ಸುಮಾರು ಕಾಲದವರೆಗೂ ಹಾಗೇ ಕೂತಿದ್ದರು. ನಾಟಕದ ಮಂದಿಯಲ್ಲ ತಮ್ಮ ನಾಟಕ ಮುಗಿಸಿ ಸಾಮಾನುಗಳನ್ನೆಲ್ಲ ಬಂದಿದ್ದ ಲಗೇಜು ಗಾಡಿಯಲ್ಲಿರಿಸಿ ಹೊರಡಲು ಸಿದ್ದವಾಗಿ, ವನಂಗೆ ಪರಿಚಯವಿದ್ದ ನಟ ಕಂಡಾಗ ಅವನನ್ನು ಕರೆದು ನಾಟಕ ಚೆನ್ನಾಗಿತ್ತೆಂದು ಹೇಳುವಾಗ ಪಂಚಾಚರನನ್ನೂ ಆತನನ್ನೂ ಪರಿಚಯಿಸಿಕೊಂಡು ಕೈಕುಲುಕಿದ. ಅವರೆಲ್ಲಾ ಹೋದ ಬಳಿಕ ವನಂ ಹೋಗಲು ಸಿದ್ಧವಾದಾಗ ಪಂಚಾಚರ ಅವನನ್ನು ಸ್ವತಃ ವನಂಗೆ ಪರಿಚಯಿಸಿಕೊಂಡು ಕೈಕುಲುಕಿ ನಕ್ಕ. ಹೀಗೆ ಅವರ ಪರಸ್ಪರ ಪರಿಚಯವಾಗಿತ್ತು.
———————
--------------------------------
ಹಾಗೆ ಪರಿಚಿತರಾದ ಮೇಲೆ ಎಲ್ಲಾದರೂ ಕಂಡರೆ ಪರಸ್ಪರರು ಕುಶಲೋಪರಿ ವಿಚಾರಿಸಿಕೊಳ್ಳುತ್ತಾ ಮುಗುಳ್ನಕ್ಕೂ ಮುಂದುವರಿಯುವವರು. ವನಂನ ಅಂಗಡಿಗೆ ಹೇಗೂ ಪಂಚಾಚರ ಬರುತ್ತಲೇ ಇರುತ್ತಿದ್ದ. ಆಗಲೂ ಅವರಿಬ್ಬರ ನಡುವೆ ಹೆಚ್ಚಿನ ಮಾತು ಕಥೆ ಇರುತ್ತಿರಲಿಲ್ಲ. ಆದರೂ ಅವರಿಬ್ಬರಿಗೂ ತಾವು ಇನ್ನೂ ಹೆಚ್ಚಿಗೆ ಮಾತನಾಡಬೇಕೆಂದೆನಿಸಿದ್ದಂತೂ ಹೌದು. ಪ್ರತಿ ಮುಗುಳುನಗೆಯ ಹಿಂದೂ ಮಾತಿನ ತವಕ ಹೆಪ್ಪುಗಟ್ಟಿರುತ್ತಿತ್ತು. ಒಟ್ಟಿನಲ್ಲೊಮ್ಮೆ ಕೂತು ಮಾತನಾಡುವುದು ಎಂದು ನಿರ್ದರಿಸಿದ್ದರೋ ಎಂಬಂತೆ ಒಂದು ಸಂಜೆ ದಾರಿಯಲ್ಲಿ ಕಂಡವರೆ ಇಬ್ಬರೂ ಮಾತನಾಡಿಕೊಂಡಿದ್ದಾರೋ ಎಂಬಂತೆ ಟಿ.ಟಿ.ಡಿ ಪಾರ್ಕ್ ಕಡೆಗೆ ನಡೆದರು. ಪಾರ್ಕಿನಲ್ಲಿ ಹಾಕಿದ್ದ ಬೆಂಚಿನ ಮೇಲೆ ಕೂತಾಗ ಇಬ್ಬರಿಗೂ ಮತ್ತೆ ಅದೇ ನಾಟಕದ ರೈಲು ನಿಲ್ದಾಣದಲ್ಲಿ ಹಾಕಿದ್ದ ಬೆಂಚಿನಂತೆಯೂ, ನಾಟಕ ಮುಗಿದಾಗ ಬಂದು ಆಯಾಸವಾಗಿ ಇಬ್ಬರೂ ಹೊರಗೆ ಕೂತಿದ್ದ ಮಗದೊಂದು ಬೆಂಚಿನಂತೆಯೂ ಭಾಸವಾಯಿತು. ಈಗಲೂ ಇಬ್ಬರೂ ಏನನ್ನೂ ಮಾತನಾಡದೆ ಸುಮ್ಮನಿದ್ದರು. ಬಹಳಷ್ಟು ಕಾಲದ ನಂತರ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತ, “ನಾವೂ ನಾಟಕ ಮಾಡೋಣವಾ” ಎನ್ನುವ ವಾಕ್ಯವನ್ನು ಯಾರು ಮೊದಲು ಹೇಳಿದ್ದು ಎಂಬ ಅಂದಾಜು ಇಲ್ಲದ ರೀತಿಯಲ್ಲಿ ಹೇಳಿದಾಗ, ಇಬ್ಬರಿಗೂ ನಗುಬಂದಿತ್ತು. ಇಬ್ಬರು ನಾಟಕ ಮಾಡುವುದೆಂದೂ, ಇಬ್ಬರ ಮನೆತನದಲ್ಲೂ ಅವರವರ ತಾತಂದಿರು ನಾಟಕ ಆಡಿ ಅಭ್ಯಾಸವಿದ್ದವರೆಂದೂ, ವಂಶಪಾರಂಪರ್ಯವಾಗಿ ಆಗಲೇ ಅದು ತಮಗೆ ಬಂದು ಬಿಟ್ಟಿದೆ, ಹಾಗಾಗಿ ತಾವು ನಾಟಕ ಆಡಲಿಕ್ಕೆ ಎಲ್ಲಾ ಬಗೆಯಿಂದಲೂ ಯೋಗ್ಯರೆಂಬ ನಂಬಿಕೆ ಇಬ್ಬರಿಗೂ ಮೂಡಿತ್ತು.
ಇಬ್ಬರೇ ನಾಟಕ ಆಡುವುದೆಂದು ಅಷ್ಟೇ ಶೀಘ್ರವಾಗಿ ನಿರ್ಧರಿಸಿದ್ದರು. ಹೀಗೆ ಇಬ್ಬರ ನಾಟಕ ಆರಂಭವಾಗಿತ್ತು. “ಪಂಚ, ಯಾವುದರ ಬಗೆಗೆ ನಾಟಕ ಮಾಡೋಣ? ನಾಟಕ ಮಾಡೋದು ಅಂತ ನಿರ್ಧಾರ ಏನೋ ಮಾಡಿದ್ದಾಯಿತು, ಯಾವ ನಾಟಕ? ನೋಡಪ್ಪ, ನಾನೇನೂ ಹೆಚ್ಚಿನ ನಾಟಕ ಏನೂ ನೋಡಿಲ್ಲ. ಹೆಚ್ಚು ಸಾಹಿತ್ಯ, ಪುಸ್ತಕ ಓದಿದೋನೂ ಅಲ್ಲ. ಆದರೆ ನಂಗೆ ಒಳ್ಳೆ ಸಿನಿಮಾ ಅಭಿರುಚಿ ಇದೆ. ಯಾವ ಸಿನಿಮಾ ಹೇಗಿರಬೇಕು, ಕಥೆ ಎಷ್ಟಿರಬೇಕು, ಯಾವಾಗ ಕ್ಲೈಮ್ಯಾಕ್ಸ್ ಹಾಗೂ ಮಧ್ಯವಿರಾಮ, ಎಷ್ಟು ಹಾಸ್ಯವಿರಬೇಕು, ಹೀಗೆ. ಹಾಂ, ಮೊದಲು ಎಷ್ಟು ಜನಾಬೇಕು, ಏನು ಬೇಕು, ಅಂತ ಲೆಕ್ಕ ಹಾಕಿ ಆಮೇಲೆ ನಾಟಕ ಹುಡುಕೋಣವ? ಇಲ್ಲ ಮೊದಲು ನಾಟಕ ಹುಡುಕಿ ಆಮೇಲೆ ಅದಕ್ಕೆ ಹೊಂದಿಕೆಯಾಗೋ ಜನರನ್ನ, ಒಬ್ಬೊಬ್ಬರನ್ನಾಗಿ ಹುಡುಕೋಣವ? ಇಷ್ಟಕ್ಕೂ ಹಣ ಹೊಂದಿಸುವುದು ಹೇಗೆ? ಎಷ್ಟು ಹಣ ಆಗುತ್ತೆ? ಯಾಕೋ ಭಯ ಆಗ್ತಿದೆ.” ಈ ಪ್ರಶ್ನೆಗಳನ್ನು ವನಂ ಹಾಕಿಕೊಂಡಿದ್ದರೂ ಈ ಕ್ಷಣ ಯೋಚಿಸುವವನಂತಾದ. ನಾಟಕ ಮಾಡಬೇಕೆಂದು ನಿರ್ಧರಿಸಿದ್ದು ಯಾಕೆ ಎಂಬುದೇ ಅವನಿಗೆ ಅರ್ಥವಾಗಲಿಲ್ಲ. ಒಂದು ನಾಟಕ ನೋಡಿ ಪ್ರೇರೇಪಿತನಾದದ್ದೇನೋ ಸರಿ. ಆದರೆ ನಾಟಕದ ಯಾವ ಅನುಭವವೂ ಇಲ್ಲದ ತಾವಿಬ್ಬರು ನಾಟಕಕ್ಕೆ ಹೇಗೆ ಗಂಟುಬಿದ್ದೆವು ಎಂಬುದೇನೂ ಸ್ಪಷ್ಟವಾಗಲಿಲ್ಲ. ಆದರೂ ಯಾಕೋ ಏನೋ ಅವನಿಗೆ ನಾಟಕ ಮಾಡಬೇಕೆಂದೆನಿಸಿದ್ದಂತೂ ಹೌದು. ಆಕಾಶ ನೋಡುತ್ತಾ ಕೂತವನಿಗೆ ಮೇಲೆ ಎತ್ತರದಲ್ಲಿ ಒಂಟಿ ಗರುಡ ಹಾರುತ್ತಿದ್ದಂತೆ ಕಂಡು, ಸುತ್ತ ನೋಡುತ್ತ ಇರಬೇಕಾದರೆ ಪಾರ್ಕಿನ ತುಂಬೆಲ್ಲ ಗಿಡಗಳ ನಡುವೆ ಬರೀ ಚಿಟ್ಟೆಗಳು ಹಾರಾಡುತ್ತಿದ್ದವು. ಮರದ ಮೇಗಣ ಒಂದಿಷ್ಟು ಹಕ್ಕಿಗಳು ಗುಂಪು ಗುಂಪಾಗಿ ಕುಳಿತಿದ್ದರೂ, ಎಲ್ಲೋ ಒಂದು ಕಡೆ ಎರಡೇ ಹಕ್ಕಿ ಒಂದು ಹಕ್ಕಿಯನ್ನು ಮತ್ತೊಂದು ಹಕ್ಕಿ ದುರುಗುಟ್ಟಿಕೊಂಡು ನೋಡುತ್ತಿದೆಯೋ ಎಂಬಂತೆ ಕುಳಿತಿತ್ತು. ವಾಕಿಂಗ್ಗೆ ಅಂತ ಬಂದ ಜನರೆಲ್ಲ ಗುಂಪಾಗಿ ನಡೆಯುವವರು, ಒಂಟಿಯಾಗಿ ನಡೆಯುವವರು, ಎಲ್ಲಿ ನೋಡಿದರಲ್ಲಿ ಎಲ್ಲಾ ಬಗೆಯಲ್ಲೂ ಜನ. ಸೂರ್ಯ ಮುಳುಗುವ ಹೊತ್ತು ಆಗಿದ್ದಿರಬೇಕು. ಆಕಾಶ ಕೆಂಪಾಗುತ್ತಿತ್ತು. ಆಕಾಶದ ಕೆಂಪು ನೋಡುತ್ತಿದ್ದಾಗಲೇ ಪಂಚಾಚಾರನೆಂದ
“ಬಾಬಾಯ್, ನಾವಿಬ್ಬರೆ ನಾಟಕ ಮಾಡಿದರೆ ಹೇಗೆ? ಇಬ್ಬರದೇ ನಾಟಕ. ನಾನು ಒಬ್ಬರೇ ನಾಟಕ ಮಾಡುವುದನ್ನು ನೋಡಿದ್ದೇನೆ. ಹಾಗಾಗಿ ಇಬ್ಬರೇ ನಾಟಕ ಮಾಡಬಹುದು. ಹಿನ್ನೆಲೆ ಸಂಗೀತವನ್ನು ರೆಕಾರ್ಡ್ಸ್ ಮಾಡಿಬಿಡುವ. ಅದನ್ನು ನೋಡಿಕೊಳ್ಳಕ್ಕೆ ಬಹುಶಃ ಒಬ್ಬರು ಬೇಕಾಗಬಹುದು. ಅದೂ ಸಹ ನಾಟಕ ಎಲ್ಲಾ ಅಭ್ಯಾಸ ಆದ ಮೇಲೆ. ಅಥವಾ ನಾಟಕದ ಸಿದ್ಧತೆ ಎಲ್ಲಾ ಆದ ಮೇಲೆ. ಮೊದಲು ನಾಟಕನ ಇಬ್ಬರೇ ಮಾಡೋಕೆ ನಿಮಗೆ ಒಪ್ಪಿಗೆಯ?”
“ಪಂಚಾಚರಾ ನಾವಿಬ್ಬರೆ ನಾಟಕ ಮಾಡೋದಾ? ಅದೂ ಸರಿಬಿಡು ಈಗ ಜನಾನ ಒಪ್ಪಿಸಿ ನೀ ಮಾಡು ತಾಮಾಡು ಎಂದು ಹೇಳಿಸಿ ಅವರು ಮಾಡೋದು ಇಷ್ಟ ಆಗದೆ ಮನಃಸ್ತಾಪ ಎಲ್ಲ ಆಗಿ ಅವರ ಸಮಯಕ್ಕೂ ನಮಗೂ ಹೊಂದಾಣಿಕೇನೂ ಆಗದೇ ಇರಬಹುದು. ಆದರೆ ಇಬ್ಬರೇ ಪಾತ್ರಾಯಿರೋ ನಾಟಕಾನ ಹುಡುಕೋದೆಲ್ಲಿ? ಯಾರನ್ನಾದರೂ ಕೇಳಿ ತಿಳಿಕೋಬೇಕು. ಆಮೇಲೆ ಈ ರಾಜರುಗಳದು ದೇವರುಗಳುದು ನಾಟಕ ಬೇಡ. ಖರ್ಚು ಜಾಸ್ತಿ ಆಗಬಹುದು. ಸುಮ್ಮನೆ ಪ್ಯಾಂಟು ಶರ್ಟು ಹಾಕಿಕೊಂಡು ಕೆಲಸಕ್ಕೆ ಹೋಗುವ ರೀತಿಯಲ್ಲಿ ಬಂದು ನಾಟಕ ಮಾಡುವ ಹಾಗೆ ಇರಬೇಕು. ಯಾವ ಅಬ್ಬರಾನು ಇರಬಾರದು. ಇಂಥ ನಾಟಕ ಹುಡುಕೋದು ಎಲ್ಲಿ?”
“ಬಾಬಾಯ್, ನಾಟಕ ನಾವೇ ಬರೆಯೋಣ. ಹುಡುಕಿದರೆ ನಮಗೆ ಸರಿ ಹೊಂದೋ ರೀತಿಯಲ್ಲಿ ಸಿಗದೇ ಹೋಗಬಹುದು. ಅವತ್ತು ನಾಟಕ ನೋಡಿದ್ದೆವೆಲ್ಲ ರೈಲ್ವೆ ನಿಲ್ದಾಣ, ಆ ರೀತಿಯಲ್ಲಿ ನಾವು ನಮ್ಮದೇ ನಾಟಕ ಬರೆಯೋಣ. ಇಬ್ಬರು ನಟರ ನಾಟಕ. ಅವರ ನಾಟಕದಂತೆ ತೀರ ವೇಗ ತೀರಾ ನಿಧಾನಕ್ಕೆ ಸಂಚರಿಸುವುದೂ ಬೇಡ. ನಮ್ಮ ಕಥೆಗೆ ತಕ್ಕಂತೆ ಸನ್ನಿವೇಶಕ್ಕೆ ತಕ್ಕಂತೆ ಅದರ ಚಲನೆ ಇದ್ದರೆ ಸಾಕು.”
ವನಂಗೆ ಇದು ಅಷ್ಟೇನೂ ತಿಳಿಯಲಿಲ್ಲವಾದರೂ ನಾಟಕ ಹುಡುಕುವ ಗೋಜು ತಪ್ಪುವುದೆಂದು, ಅದೇ ರೀತಿಯಲ್ಲಿ ಬರೆಯುವ ಕೆಲಸವನ್ನು ಪಂಚಾಚರನಿಗೆ ಒಪ್ಪಿಸಿಬಿಟ್ಟರೆ ಆಯಿತೆಂದು ಸುಮ್ಮನಾದ.
“ಸರಿ ಪಂಚಾಚರ, ಹಾಗೇ ಆಗಲಿ. ನೀನೆ ನಾಟಕ ಬರಿ. ನನಗೆ ಬರೀಲಿಕ್ಕೆಲ್ಲ ಹೆಚ್ಚು ತಿಳಿಯುವುದಿಲ್ಲ. ಇಬ್ಬರೇ ಇರಲಿ. ಅದು ಸರಿ, ಯಾವ ವಿಷಯದ ಬಗ್ಗೆ ಬರೆಯೋಣ? ಇಬ್ಬರೇ ಇರುವ ಯಾವ ವಿಷಯದ ಬಗೆಗೆ ಬರೆದು ನಾಟಕ ಆಡಬಹುದು?”
“ಬಾಬಾಯ್, ಆಲೋಚಿಸೋಣ. ಮೊದಲು ನಾಟಕದಲ್ಲಿ ಏನೆಲ್ಲಾ ಮುಖ್ಯವಾಗಿ ಇರಬೇಕು ಅಂತ ನಿರ್ಧರಿಸಬೇಕು. ಮೊದಲು ನಿಮಗೇನು ನಾಟಕದಲ್ಲಿ ಇರಬೇಕು ಅಂತ ಪಟ್ಟಿಮಾಡಿ. ನನಗೇನು ಇರಬೇಕು ಅಂತ ನಾನು ಪಟ್ಟಿಮಾಡ್ತೀನಿ.”
“ಪಂಚ, ನನ್ನೊದೊಂದು ಬಹಳ ದೊಡ್ಡ ಕನಸಿದೆ. ಸಿನಿಮಾಗಳಿಂದ ಪ್ರೇರೇಪಿತವಾದದ್ದು. ಅದೆಂದರೆ ನಾನೊಬ್ಬ ಮಾರುವೇಶದಲ್ಲಿರೋ ದೊಡ್ಡ ವ್ಯಕ್ತಿ ಆಗಿರಬೇಕು. ಯಾವುದೋ ಸನ್ನಿವೇಶದಲ್ಲಿ ನನ್ನ ಅಸ್ಮಿತೆ ನಿಜಸ್ವರೂಪ ಇದ್ದಕ್ಕಿದ್ದಂತೆ ಎಲ್ಲರಿಗೂ ತಿಳಿಯಬೇಕು. ಆದೊಂದು ರೋಮಾಂಚನದ ಸನ್ನಿವೇಶ. ಆ ಸನ್ನಿವೇಶ ಇರಬೇಕು. ಹಾಗೆ ಇರೊ ರೀತಿ ನಾಟಕ ಬರಿಲಿಕ್ಕೆ ಆಗುತ್ತ ಅಂತ ನೋಡು. ಒಮ್ಮೆ ಆದರೂ ಈ ಬಗೆಯಲ್ಲಿ ನಾಟಕ ಆಡೋಕೆ ಆದರೆ ಸಾಕು. ಸಿನಿಮಾದಲ್ಲಿ ನೋಡಿದಾಗಲೆಲ್ಲಾ ನನಗೆ ನಾನು ಬದುಕಲ್ಲಿ ಈ ಸನ್ನಿವೇಶಗಳನ್ನು ಕಲ್ಪಿಸಿಕೊಂಡು ಖುಷಿಬಡುತ್ತಿದ್ದೆ. ನಾಟಕದಲ್ಲಿ ಮೂಡಿದ್ದೆ ಆದರೆ ಆ ಕಲ್ಪನೆ ಒಂದಿಷ್ಟು ನಿಜಕ್ಕೆ ಹತ್ತಿರಾದಂತೆ ಆಗುತ್ತೆ. ಇದೊಂದೇ ನನಗೆ ನಾಟಕದಲ್ಲಿ ಇರಬೇಕಿರೋ ಬಹಳ ಮುಖ್ಯ ಸಂಗತಿ ನೋಡು”
“ಸರಿ, ಬಾಬಾಯ್, ಆಲೋಚಿಸಿ ಹಾಗೇ ಬರೆಯುವೆ. ನಂಗೂ ಒಂದು ಸನ್ನಿವೇಶ ನಾಟಕದಲ್ಲಿ ಇರಬೇಕು. ಆದರೆ ಅದಕ್ಕೆ ಒಂದು ಹನ್ನೆರೆಡು ಹದಿನಾಲ್ಕು ವರ್ಷದ ಹುಡುಗ ಬೇಕು. ಹಾಗೇನೂ ಇಲ್ಲ, ನಾನೇ ಆ ಪಾತ್ರವನ್ನು ಹುಡುಗನ ರೀತಿಯಲ್ಲಿ ಮಾಡಬಹುದು. ಒಂದು ದಿನ ಆ ಹುಡುಗ ಅವನು ಬೆಳೆದು ಆಡಿದ ಊರಿನ ಹೊರಗಿರೋ ಗುಡ್ಡದ ಹತ್ತಿರ ಹರಿಯುತಿರೋ ಸಣ್ಣ ತೊರೆಯ ಪಕ್ಕ ಕೂತು ಆಗತಾನೇ ಕಲಿತಿದ್ದ ಕವನ ಅನ್ನೋ ಪ್ರಕಾರಕ್ಕೆ ಮರುಳಾಗಿ ತನ್ನದೇ ಬಗೆಯಲ್ಲಿ ದೂರದ ಊರನ್ನೇ ನೋಡುತ್ತಾ ಬರೆಯುತ್ತಿರಬೇಕಾದರೆ, ನಾಲ್ಕು ಸಾಲು ಬರೆದದ್ದೇ ದೂರದ ಊರಿನಿಂದ ಜೋರು ಶಬ್ದ ಕೂಗಾಟ ಚೀರಾಟ ಇದ್ದಕ್ಕಿದ್ದಂತೆ ಎಲ್ಲಿ ನೋಡಿದರಲ್ಲಿ ಬೆಂಕಿ ಗುಂಡಿನ ಶಬ್ದ. ಆ ಮಗುವಿನ ದೇಹ ಅಲ್ಲಿಂದ ಕದಲುವುದಿಲ್ಲ. ಇಡೀ ಊರು ಅವನು ಕೂತ ಜಾಗದಿಂದ ಕಾಣುತ್ತಿದೆ. ಎಲ್ಲವೂ ಕಾಣುತ್ತಿದೆ. ದೇಹ ಗಟ್ಟಿಯಾಗಿ ಹೋಗಿದೆ. ಕಾಲು ನಡೆಯಲಾಗುತ್ತಿಲ್ಲ. ಬರೆಯಲು ಹೊರಟ ಕೈ, ಕೂಗಲಾರದ ಧ್ವನಿ, ಏನೂ ತಿಳಿಯದೆ ಸುಮ್ಮನೆ ನೋಡುತ್ತಿದ್ದಾನೆ. ಯಾರು ಯಾರನ್ನು ಕೊಂದರು, ಯಾರು ಯಾರನ್ನು ಸುಟ್ಟರು, ಮಿಲಿಟರಿ, ಪೊಲೀಸು, ದಂಗೆಕೋರರು? ಯಾವುದೂ ಅರ್ಥವಾಗದಿದ್ದರೂ ಆ ಮಗುವಿಗೆ ದೇಹವನ್ನು ಕದಲಿಸಲಿಕ್ಕೂ ಆಗದೆ ಹೂತು ಹೋದ ಮಗುವಿಗೆ ಒಂದು ಸಂಗತಿ ಅರ್ಥವಾಗುತ್ತಿತ್ತು. ಮನುಷ್ಯ ಮನುಷ್ಯನನ್ನು ಕೊಲ್ಲುತ್ತಿದ್ದಾನೆ. ಮನುಷ್ಯ ಮನುಷ್ಯನನ್ನು ಸುಡುತ್ತಿದ್ದಾನೆ. ದೊಡ್ಡ ಮನುಷ್ಯ ಸಣ್ಣ ಮನುಷ್ಯನನ್ನು, ಸಣ್ಣ ಮನುಷ್ಯ ದೊಡ್ಡ ಮನುಷ್ಯನ್ನು, ಗಂಡು ಹೆಣ್ಣನ್ನು, ಹೆಣ್ಣು ಗಂಡನ್ನು, ಒಂದು ಬಣ್ಣದ ಬಟ್ಟೆಹೊತ್ತ ಮನುಷ್ಯ ಮತ್ತೊಂದು ಬಣ್ಣದ ಬಟ್ಟೆಯ ಮನುಷ್ಯನನ್ನು, ಸುಡುತ್ತಿದ್ದ ಕೊಲ್ಲುತ್ತಿದ್ದ. ಆ ಮಗು ಅದನ್ನು ನೋಡುತ್ತಲೇ ಇತ್ತು. ಒಂದಿಡೀ ಊರು, ಅಲ್ಲಿನ ಜನ ಅವರ ಆಟ ಪಾಠ ಕಥೆ ಹಾಡು ಎಲ್ಲವೂ ಸುಟ್ಟಾಗಿತ್ತು. ಅದನ್ನು ಆ ಹುಡುಗ ನೋಡುತ್ತಲೇ ಇದ್ದ. ಹಾಗೇ ನೋಡುತ್ತಲೇ ಇದ್ದ…”
ಪಂಚಾಚರನ ಗಂಟಲು ನಡುಗುವ ಅನುಭವವಾದಂತೆ ಅದು ಅವನಿಗೆ ತಿಳಿದಂತಾಗಿ ಹೀಗೆ ಯಾವ ಯಾವ ಸಂಗತಿಗಳನ್ನು ನಾಟಕದಲ್ಲಿ ಸೇರಿಸಿಕೊಳ್ಳಬೇಕೋ ಅವೆಲ್ಲವನ್ನೂ ಮೊದಲು ಪಟ್ಟಿ ಮಾಡೋಣ ಹಾಗೆ ಪಟ್ಟಿ ಮಾಡಿದ ಸಂಗತಿಗಳನ್ನು ಇಟ್ಟುಕೊಂಡು ದೃಶ್ಯಗಳನ್ನು ಕಟ್ಟೋಣ ಹಾಗೆ ಕಟ್ಟಿದ ದೃಶ್ಯಗಳನ್ನು ಪೋಣಿಸಿದರೆ ಪೋಣಿಸಲಿಕ್ಕೆ ಮತ್ತೊಂದಷ್ಟು ಕಲ್ಪನಾತ್ಮಕ ದೃಶ್ಯಗಳು ಬೇಕಿದ್ದರೆ ಅವುಗಳನ್ನು ಸೇರಿಸಿಕೊಳ್ಳೋಣ. ಹಾಗೆ ಸೇರಿಸಿ ನಾಟಕ ಬರೆದರೆ ಸರಿ, ಎಂದು ನಿರ್ಧರಿಸಿ ಸಾಧ್ಯವಾದಾಗಲೆಲ್ಲಾ ಕನಿಷ್ಠ ವಾರಕ್ಕೆ ಎರಡು ಸರಿಯಾದರೂ ಭೇಟಿಯಾಗುವುದು, ಭೇಟಿಯಾಗಿ ಚರ್ಚಿಸುವುದು ಎಂದು ನಿರ್ಧರಿಸಿದರು.
———————
--------------------------------
ಯಾಕೋ ಇಂದು ಕೋದಂಡರಾಮಸ್ವಾಮಿ ದೇವಸ್ಥಾನದ ಸುತ್ತೆಲ್ಲ ಜಾಸ್ತಿಯೇ ಪೊಲೀಸಿದ್ದಾರೆಂದೆನಿಸಿತು. ತಿರುಪತಿಯಲ್ಲಿ ಆಗಾಗ ಹೀಗೆ ಪೊಲೀಸರ ದಂಡು ಬರುವುದು ಆಶ್ಚರ್ಯವೇನೂ ಅಲ್ಲ. ಮಂತ್ರಿಯೋ ಮುಖ್ಯಮಂತ್ರಿಯೋ ಪ್ರಧಾನಮಂತ್ರಿ ರಾಷ್ಟ್ರಪತಿ ಹೀಗೆ ತಿಮ್ಮಪ್ಪನಿಗೆ ನಡೆದುಕೊಳ್ಳುವವರಿಗೇನೂ ಕಡಿಮೆಯೇ. ಹಾಗಾಗಿ ಯಾವಾಗಬೇಕಾದರೂ ಇದ್ದಕ್ಕಿದ್ದಂತೆ ಪೊಲೀಸರ ದಂಡು ಸುತ್ತಿ ಬಂದು ಬಿಟ್ಟರೆ ಆಶ್ಚರ್ಯವೇನೂ ಇಲ್ಲ. ಆದರೂ ಇಂದು ದೇವಸ್ಥಾನದ ಸುತ್ತಲ್ಲದೆ ಅಷ್ಟೂ ಗಲ್ಲಿಗಳಲ್ಲಿ ಈ ಪೊಲೀಸರಿಗಿದ್ದಾರೆ ಎಂಬುದೇ ಬೃಂದಾವನಂಗೆ ಒಂದಿಷ್ಟು ಪ್ರಶ್ನಾರ್ಥಕವಾಗಿ ಕಂಡಿತು. ಇನ್ನೇನು ಈ ಪ್ರಶ್ನೆಗೆ ಉತ್ತರ ಅದೇ ಬಂದು ಬಿಡುತ್ತದೆಯೆಂದೆನಿಸುವಾಗ, ಯಾರೋ ದೂರದಲ್ಲಿದ್ದ ಪೊಲೀಸರ ಗುಂಪುನಲ್ಲಿದ್ದರೊಬ್ಬರು ಫೋನಿನಲ್ಲಿ ಫೋಟೋ ತೋರಿಸಿಕೊಂಡು ವನಂನ ಕಡೆಗೆ ಬೆನ್ನು ಮಾಡಿದ್ದೆ, ಎಲ್ಲಾ ಪೊಲೀಸರು ಒಟ್ಟಾಗಿ ವನಂನ ಕಡೆಗೆ ಜೋರಾಗಿ ಓಡಿ ಬರಲಾರಂಭಿಸಿದರು. ವನಂಗೆ ಒಮ್ಮೆಗೆ ಜೀವ ಉಡುಗಿ ಹೋಯಿತು. ಅದೂ ಅಷ್ಟು ಜನ ಪೊಲೀಸರು, ವಿವಿಧ ಬಗೆಗಳಲ್ಲಿರುವವರು ಹಿರಿಯ ಅಧಿಕಾರಿಗಳ ರೀತಿ ಕಾಣುವವರು ಅವನೆಡೆಗೆ ಬರಲಾರಂಭಿಸಿ ಅವನನ್ನೇ ಕೂಗುತ್ತಿದ್ದರೆ ಅವನಿಗೆ ಹೇಗಾಗಬೇಡ. ಒಮ್ಮೆಗೆ ಕಲ್ಲಿನಂತಾಗಿ ಹೋಗಿದ್ದ. ಅವನನ್ನ ಸುತ್ತುವರಿದ ಪೊಲೀಸ್ ಅಧಿಕಾರಿಗಳು ಒಮ್ಮೆಗೆ ಅವನಿಗೊಂದು ಫೋಟೋ ತೋರಿಸಿದರು. ಅದರಲ್ಲಿ ಟಿ.ಟಿ.ಡಿ ಪಾರ್ಕಿನ ಬೆಂಚಿನ ಮೇಲೆ ಕೂತಿದ್ದ ತಾನು ಹಾಗೂ ಪಂಚಾಚರ ಹರಟುತ್ತಿದ್ದದ್ದು ಇತ್ತು.
“ಇದು ನೀವೇನಾ?”
“ಹೌದು ಸರ್, ನಾನೇ ಏನಾಯ್ತು?”
“ನಿಮ್ಮ ಪಕ್ಕ ಕೂತಿರುವ ವ್ಯಕ್ತಿ ಯಾರು?”
“ ಪಂಚಾಚರ”
ಅವರ ಫೋನಿನಲ್ಲಿದ್ದ ಬೇರೊಂದು ಫೋಟೋ ತೋರಿಸಿ
“ಈ ವ್ಯಕ್ತಿ ಯಾರು ಅಂತ ಗುರುತಿಸಿ”
“ ಸ್ವಲ್ಪ ಗುರುತು ಹಚ್ಚುವುದು ಕಷ್ಟವಾದರೂ, ಅದು ಪಂಚಾಚರನ ರೀತಿಯೇ ಕಾಣುತ್ತಾನೆ ಸರ್ ಅಥವಾ ಪಂಚಾಚರನ ಅಣ್ಣನೋ ತಮ್ಮನೋ ಇರಬಹುದು.”
ಹಾಗೆ ಅಂದದ್ದೇ ತಡ ಅಲ್ಲಿದ್ದ ಒಬ್ಬ ಪೊಲೀಸ್ ಅಧಿಕಾರಿ ಹಿರಿಯ ಅಧಿಕಾರಿಗೆ ಸನ್ನೆ ಮಾಡಿ ಅವರನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಕರೆದುಕೊಂಡು ಬನ್ನಿ ಅಂತ ಹೇಳಿ ಜೀಪಿನಲ್ಲಿ ಹತ್ತಿಸಿಕೊಂಡು ಕರೆದುಕೊಂಡು ಹೋದರು. ಬಹಳ ಸ್ವಚ್ಛವಾಗಿ ಗರಿಗರಿಯಾಗಿ ಇಸ್ತ್ರಿ ಮಾಡಿದ ಕಾಕಿ ಬಟ್ಟೆಗಳಲ್ಲದೆ, ಕಪ್ಪು ಬಟ್ಟೆಯು ಹಾಕಿದ್ದ ವಿವಿಧ ಅಧಿಕಾರಿಗಳನ್ನು ಇಷ್ಟು ಹತ್ತಿರದಲ್ಲಿ ಕಂಡಿದ್ದು ಬೃಂದಾವನಂಗೆ ಬಹಳ ಗಾಬರಿಯಾಗಿತ್ತು.
“ಸಾರ್ ಏನಾಯ್ತು? ನಾನೊಂದು ಫೋನು ಮಾಡುತ್ತೇನೆ…” ಹೀಗೆ ಏನೇ ಹೇಳಲಿಕ್ಕೆ ಹೋದರೂ ಸಹ ಅವನ ಮಾತನ್ನು ಕೇಳಲು ಅಲ್ಲಿ ಯಾರೂ ಸಿದ್ಧರಿರಲಿಲ್ಲ. ಸರ್ಕಾರಿ ಅತಿಥಗೃಹಕ್ಕೆ ಬಂದದ್ದೆ ಅಲ್ಲಿ ಮತ್ತೊಂದಷ್ಟು ಅಧಿಕಾರಿಗಳಿದ್ದಾರೆ. ಅವರು ಅವನಿಗಾಗಿಯೇ ಕಾಯುತ್ತಿದ್ದಂತಿದ್ದಾರೆ. ಅವನ ಗಾಬರಿಯನ್ನು ಅರ್ಥಮಾಡಿಕೊಂಡಂತೆ ಅನ್ನಿಸಿದ ಅಲ್ಲಿನ ಹಿರಿಯ ಅಧಿಕಾರಿ
“ಸಾರ್ ಗಾಬರಿ ಪಟ್ಟುಕೊಳ್ಳಬೇಡಿ ನೀವೇನೂ ತಪ್ಪು ಮಾಡಿಲ್ಲ. ನಮಗೆ ಒಂದು ಸಣ್ಣ ಮಾಹಿತಿ ಬೇಕಿತ್ತು ಅಷ್ಟೇ. ಹತ್ತೇ ಹತ್ತು ನಿಮಿಷದ ಕೆಲಸ. ಆಮೇಲೆ ನಿಮ್ಮನ್ನು ಮನೆಗೆ ನಾವೇ ಕಳುಹಿಸುತ್ತೇವೆ” ಎಂದದ್ದೇನೂ ವನಂಗೆ ಸಮಾಧಾನ ತರಲಿಲ್ಲ. ಒಂದು ದೊಡ್ಡ ಪರದೆ ಎದುರು ಕೂರಿಸಿದರು. ಪಕ್ಕದಲ್ಲೆಲ್ಲಾ ಒಂದಿಷ್ಟು ಕ್ಯಾಮರಾಗಳು. ಮಧ್ಯದಲ್ಲೊಂದಿಷ್ಟು ಕುರ್ಚಿ. ಆ ಅತಿಥಿ ಗೃಹವನ್ನೇ ಒಂದಿಷ್ಟು ಬದಲಾಯಿಸಿ ಈಗ ತಾನೇ ಸಿದ್ಧಗೊಳಿಸಿದ್ದ ಕೊಠಡಿ.
“ಸಾರ್ ಇಲ್ಲಿ ನೋಡಿ”
“ನಿಮ್ಮ ಹೆಸರು”
“ಬೃಂದಾವನ”
“ವಯಸ್ಸು”
“ಸುಮಾರು 60ರ ಹತ್ತಿರ”
“ಈ ಫೋಟೋದಲ್ಲಿ ಕಾಣುತ್ತಿರುವವರು ನೀವೇನಾ?”
“ಹೌದು”
“ಎಲ್ಲಿ ಈ ಫೋಟೋ ತೆಗೆದದ್ದು?”
“ಇಲ್ಲೆ. ಅಣ್ಣಾರಾವ್ ಸರ್ಕಲ್ಲಿನ ಬಳಿ ಇರೋ ಟಿಟಿಡಿ ಪಾರ್ಕಿನಲ್ಲಿ”
“ನಿಮ್ಮ ಪಕ್ಕ ಕೂತಿರುವ ವ್ಯಕ್ತಿ ನಿಮಗೆ ಪರಿಚಯವಾ?”
“ಹೌದು, ಪರಿಚಯ.”
“ಹೇಗೆ ಪರಿಚಯ?”
“ಅವ ಪಂಚಾಚರ. ನನ್ನ ಅಂಗಡಿಗೆ ಆಗಾಗ ಬೊಂಡಾ ಬಜ್ಜಿ ತಿನ್ನಲಿಕ್ಕೆ ಬರುತ್ತಿದ್ದ. ಇತ್ತೀಚೆಗೆ ನಾವಿಬ್ಬರೂ ಒಂದು ನಾಟಕ ನೋಡಿ ಬಂದಿದ್ದೆವು. ಒಟ್ಟಾಗಿ ಒಂದು ನಾಟಕ ಬರೆದು ಆಡಬೇಕು ಅಂತ ನಿರ್ಧರಿಸಿದ್ದೆವು. ಅದನ್ನೇ ಅಲ್ಲಿ ಮಾತನಾಡುತ್ತಿದ್ದದ್ದು.”
“ಸರಿ, ಈಗ ನಾವು ಮತ್ತೊಂದಷ್ಟು ಫೋಟೋಗಳನ್ನು ತೋರಿಸುತ್ತೇವೆ. ನೋಡಿ ಅದರಲ್ಲಿನ ವ್ಯಕ್ತಿ ನಿಮ್ಮ ಜೊತೆಗಿದ್ದ ಪಂಚಾಚರನ ಗುರುತಿಸಿ.”
ಅಂತ ಒಂದೊಂದೇ ಫೋಟೋಗಳನ್ನು ತೋರಿಸಿದರು. ಸರಿಸುಮಾರು ಎಲ್ಲಾ ಫೋಟೋಗಳಲ್ಲೂ ಅದು ಪಂಚಾಚರನ ರೀತಿಯಲ್ಲೇ ಕಂಡದ್ದು. ಬೇರೆ ಬೇರೆ ಬಟ್ಟೆ ವೇಷ ಹೀಗೆ ಏನೇ ಆದರೂ ಅವೆಲ್ಲವೂ ಪಂಚಾಚರನ ರೀತಿಯಲ್ಲೇ ಕಂಡದ್ದು.
“ಹೌದು ಸಾರ್, ಈ ಫೋಟೋಗಳಲ್ಲಿ ಇರೋ ಅವರೆಲ್ಲ ಪಂಚಾಚರನೆ ಅಥವಾ ತೀರಾ ಹತ್ತಿರದಲ್ಲಿ ಪಂಚಾಚರನನ್ನು ಹೋಲುವವರು.”
“ಸರಿ, ಇನ್ನು ನೀವು ಹೊರಡಿ.”
ಅಂತ ಹೇಳಿ ಕಳುಹಿಸಿದರು. ಅವನಿಗೆ ಏನೂ ಅರ್ಥವಾಗಲಿಲ್ಲ. ಮನೆಯಲ್ಲಿ ರತ್ನಮ್ಮನಿಗೆ ಒಂದಿಷ್ಟು ಗಾಬರಿಯಾದದ್ದಂತೂ ನಿಜ. ಹಾಗೆ ಮನೆಗೆ ಬಂದ ಬೃಂದಾವನನಿಗೆ ಏನನ್ನೂ ಯಾರೂ ಕೇಳಲಿಲ್ಲ. ಬೆಳಗಿನಿಂದ ಆರಂಭವಾದ ಈ ಪ್ರಹಸನ ರಾತ್ರಿಯವರೆಗೂ ಸಾಗಿತ್ತು. ಮಧ್ಯಾಹ್ನವೂ ಏನೂ ತಿಂದಿರಲಿಲ್ಲ. ಬೃಂದಾವನಂಗೆ ಏನಾಯಿತು ಏನಾಗುತ್ತಿದೆ ಯಾವುದೂ ಅರ್ಥವಾಗಲಿಲ್ಲ. ಆದರೂ ದೇಹದ ದಣಿವು ಆಯಾಸ ಅವನ ವಯಸ್ಸು ಎಲ್ಲವೂ ಅವನನ್ನು ಸುಮ್ಮನೆ ಹೋಗಿ ಮಲಗುವಂತೆ ಪ್ರೇರೇಪಿಸುತ್ತಿತ್ತು. ಬಿಸಿ ನೀರಿನ ಸ್ನಾನ ಮಾಡಿ ಬಂದವನೆ ಊಟ ಮಾಡಿ ನೇರ ಹೋಗಿ ಮಲಗಿದ್ದ. ಬೆಳಗಾಗಿ ಎದ್ದವನಿಗೆ ಎಚ್ಚರವಾದಾಗ ನೆನ್ನೆ ನಡೆದದ್ದೆಲ್ಲಾ ಯಾವುದೋ ಸಿನಿಮಾವೆಂದಿನಿಸಿ, ಬಹುಶಃ ಅದು ತನ್ನ ಜೀವನದ್ದಲ್ಲದೆ ಇರಬಹುದು ಎಂದೆನಿಸಿತ್ತು. ಅವನು ಹೊರಗೆ ಬಂದರೆ ಸಾಕು ಅಂತ ಕಾದಿದ್ದ ರತ್ನಮ್ಮ ನಿನ್ನೆಯ ಎಲ್ಲಾ ಸಂಗತಿಗಳಿಗೆ ಕಾರ್ಯಕಾರಣ ಸಂಬಂಧಗಳನ್ನು ಭೇದಿಸಿದ ಖುಷಿಯಲ್ಲಿ ಒಂದೇ ಉಸಿರಲ್ಲಿ, ವಾಕ್ಯಗಳಲ್ಲಿ ಆಗಾಗ ಸಂಬಂಧ ತಪ್ಪಿದರೂ ಒಟ್ಟು ಅರ್ಥ ನಾಟುವಂತೆ ಓತಪ್ರೋತವಾಗಿ ಹೇಳಲಾರಂಭಿಸಿದಳು.
“ಅವನ ಹೆಸರು ಪಂಚಾಚರ ಅಲ್ಲವಂತೆ. ಅವನು ಶ್ರೀಲಂಕಾದಲ್ಲಿ ಒಬ ದೊಡ್ಡ ಡಾನಂತೆ. ಭೂಗತ ದೊರೆ ಆಗಿದ್ದವನಂತೆ. ಅವನು ಮೂರು ವರ್ಷಗಳ ಹಿಂದೆ ಊರು ಬಿಟ್ಟವನು, ಯಾರಿಗೂ ಅವನು ಎಲ್ಲಿಗೋದ ಏನಾದ ಏನೂ ತಿಳಿದಿರಲಿಲ್ಲವಂತೆ. ಎಲ್ಲರೂ ಸತ್ತು ಹೋಗಿದ್ದಾರೆ ಅಂತಾನೆ ಅಂದುಕೊಂಡಿದ್ದರು. ಅವನ ಹೆಸರು ಲಂಗೋದಲೊಕ್ಕ ಅಂತೆ.”
“ಸ್ವಲ್ಪ ನಿಧಾನಕ್ಕೆ ಹೇಳು ಮಾರಾಯಿತಿ” ಅವಳು ಹೇಳುತ್ತಲೇ ಇದ್ದಳು. ಸಾರಾಂಶವೆಂದರೆ ಮೂರು ದಿನಗಳ ಹಿಂದೆ ಪಂಚಾಚರ ಎಂದು ಕರೆಯಲ್ಪಡುವ ಲಂಗೋದ ಲೊಕ್ಕ ಹೃದಯಾಘಾತದಿಂದ ತೀರಿಕೊಂಡಿದ್ದ. ಅವನು ರತ್ನಮ್ಮ ಹೇಳಿದ ಹಾಗೆ ಶ್ರೀಲಂಕೆಯ ಬಹುದೊಡ್ಡ ಭೂಗತ ದೊರೆಯಾಗಿ ಹಲವಾರು ಹತ್ಯಾಕೃತ್ಯಗಳಲ್ಲಿ ಭಾಗಿಯಾಗಿದ್ದವನಾಗಿದ್ದ. ಮೂರು ವರ್ಷಗಳ ಹಿಂದೆಯೇ ಕಾಣೆಯಾಗಿದ್ದ. ಯಾರಿಗೂ ಅವನ ಸುಳಿವಿರಲಿಲ್ಲ. ಹೀಗೆ ಲಂಗೋದ ಲೊಕ್ಕ ಸತ್ತ ವಿಷಯ ಶ್ರೀಲಂಕಾ ತಲುಪಿದಾಗ, ಅವನ ತಂಗಿ ಹಾಗೂ ಇನ್ನೂ ಸಕ್ರಿಯವಾಗಿರುವ ಭೂಗತಲೋಕದ ಗುಂಪಿನ ಒಂದಷ್ಟು ಮಂದಿ ಸಮುದ್ರ ದಾಟಿ ಬಂದು ಲೊಕ್ಕನ ಅಂತ್ಯಸಂಸ್ಕಾರಕ್ಕೆ, ದಹನಕ್ರಿಯೆಯಲ್ಲಿ ಭಾಗಿಯಾಗಿದ್ದರು. ಹೀಗೆ ಅಷ್ಟು ಮುಖ್ಯ ಮಂದಿ ಶ್ರೀಲಂಕೆಯಿಂದ ಭಾರತಕ್ಕೆ ಬಂದಿದ್ದನ್ನು ಪತ್ತೆ ಹಚ್ಚಿದ ಇಂಟೆಲಿಜೆನ್ಸ್ ಅವರು ಏನೋ ಇರುವುದನ್ನು ಗಮನಿಸಿ ಎಲ್ಲಾ ಸಿಸಿಟಿವಿಗಳನ್ನು ಹುಡುಕಬೇಕಾದರೆ ಅವರಿಗೆ ಲಂಗೋದ ಲೊಕ್ಕನೂ ಬೃಂದಾವನಂನೂ ಸಿಕ್ಕಿದ್ದ. ಲಂಗೋದ ಲೊಕ್ಕನ ಗುರುತನ್ನು ದೃಢೀಕರಿಸಲಿಕ್ಕೆ ಬೃಂದಾವನಂನ ಕರೆದೊಯ್ದಿದ್ದರು. ಇಂದಿನ ಎಲ್ಲಾ ವೃತ್ತಪತ್ರಿಕೆಗಳಲ್ಲೂ ಅದೇ ಸುದ್ದಿಯಾಗತ್ತು. ಎಲ್ಲವನ್ನೂ ಗುಪ್ಪೆ ಹಾಕಿಕೊಂಡು ಒಂದೊಂದನ್ನೂ ಬೃಂದಾವನ ಓದಲಾರಂಭಿಸಿದ್ದ.
“ನಿಮಗೆ ಗೊತ್ತ, ಅವನ ಮನೆ ಬಳಿ ಯಾವಾಗಲೂ ಗರುಡಪಕ್ಷಿ ಇರ್ತಿತ್ತಂತೆ. ಅದರ ಮುಖಾಂತರಾನೇ ಅವನು ಶ್ರೀಲಂಕಾಕ್ಕೆ ಸಂದೇಶ ಕಳಿಸುತ್ತ ಇದ್ದನಂತೆ. ಅದಕ್ಕೇನೆ ಯಾರಿಗೂ ಸಿಕ್ಕದೆ ಇಷ್ಟು ದಿನ ಇದ್ದನಂತೆ. ಇನ್ನೊಂದು ವಿಷಯ ಗೊತ್ತ. ಆ ಲೊಕ್ಕ ಹೃದಯಘಾದಕ್ಕೆ ಸತ್ತದ್ದನ್ನು ಆ ಹಕ್ಕಿಯೇ ಹೇಳಿದ್ದಂತೆ. ಆಮೇಲೆ ಲೊಕ್ಕನ ದಹನ ಆಗುವವರೆಗೂ ಆ ಹಕ್ಕಿ ಅಲ್ಲೆ ಇತ್ತಂತೆ. ಆಮೇಲೆ ಆ ಬೆಂಕಿಲೇ ಅದೂ ಬಿದ್ದು ಸೊತ್ತುಹೋಯ್ತಂತೆ” ಅಂತ ರತ್ನ ಹೇಳುತ್ತಲೇ ಇದ್ದಳು.